ADVERTISEMENT

ಮುಂಬರುವ ಚುನಾವಣೆಗೆ ಸ್ಪರ್ಧೆ ಖಚಿತ

ಹೊಸದುರ್ಗ ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಘೋಷಣೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2022, 11:30 IST
Last Updated 15 ಜನವರಿ 2022, 11:30 IST
ಗೂಳಿಹಟ್ಟಿ ಡಿ.ಶೇಖರ್‌
ಗೂಳಿಹಟ್ಟಿ ಡಿ.ಶೇಖರ್‌   

ಹೊಸದುರ್ಗ: ಮುಂಬರುವ ವಿಧಾನಸಭಾ ಚುನಾವಣೆಯ ಟಿಕೆಟ್‌ ಹಂಚಿಕೆಯ ನಿರ್ಧಾರವನ್ನು ಬಿಜೆಪಿ ವರಿಷ್ಠರು ಕೈಗೊಳ್ಳಲಿದ್ದಾರೆ. ಒಂದು ವೇಳೆ ಟಿಕೆಟ್‌ ಕೈತಪ್ಪಿದರೆ ಪಕ್ಷೇತರನಾಗಿ ಸ್ಪರ್ಧಿಸಲು ಸಿದ್ಧನಿದ್ದೇನೆ. ಕಾರ್ಯಕರ್ತರು ಗೊಂದಲಕ್ಕೆ ಒಳಗಾಗುವುದು ಬೇಡ ಎಂದು ಶಾಸಕ ಗೂಳಿಹಟ್ಟಿ ಶೇಖರ್‌ ಸ್ಪಷ್ಟಪಡಿಸಿದ್ದಾರೆ.

‘ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ 92 ಸಾವಿರ ಮತಗಳನ್ನು ಪಡೆದು ವಿಜೇತನಾಗಿದ್ದೇನೆ. ಸಾಮಾನ್ಯ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯ ಅಭ್ಯರ್ಥಿಯನ್ನು ಆಯ್ಕೆ ಮಾಡಿದ ಹೆಗ್ಗಳಿಕೆ ಮತದಾರರದು. ಜಾತ್ಯತೀತವಾಗಿ ನಡೆದುಕೊಳ್ಳುವ ನನಗೆ ಕ್ಷೇತ್ರದಲ್ಲಿ ನನ್ನದೇ ಆಗಿರುವ 50 ಸಾವಿರ ಮತಗಳಿವೆ. ಈ ಬಲದ ಆಧಾರದ ಮೇರೆಗೆ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸುವುದು ಖಚಿತ’ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಕಾಲಾವಕಾಶವಿದೆ. 2023ರಲ್ಲಿ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಹಾಗೂ ಬಸವರಾಜ ಬೊಮ್ಮಾಯಿ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕಿದೆ. ಹೊಸದುರ್ಗ ಕ್ಷೇತ್ರದ ಮತದಾರರ ಇಚ್ಛೆಯನ್ನು ಅರಿತು ಪಕ್ಷ ನನಗೆ ಮತ್ತೊಮ್ಮೆ ಟಿಕೆಟ್‌ ನೀಡುವ ಭರವಸೆ ಇದೆ’ ಎಂದು ಹೇಳಿದರು.

ADVERTISEMENT

‘ಕ್ಷೇತ್ರ ವ್ಯಾಪ್ತಿಯ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತ ಕೂಡ ಟಿಕೆಟ್‌ ಕೇಳುವ ಹಕ್ಕು ಹೊಂದಿದ್ದಾರೆ. ಸೋಲು–ಗೆಲುವಿನ ಲೆಕ್ಕಾಚಾರದ ಆಧಾರದ ಮೇರೆಗೆ ಇದು ನಿರ್ಧಾರವಾಗುತ್ತದೆ. ಹಲವು ಚುನಾವಣೆಗಳಲ್ಲಿ ಸೋಲು ಕಂಡವರು ಅನ್ಯ ಮಾರ್ಗದ ಮೂಲಕ ಟಿಕೆಟ್‌ಗೆ ಒತ್ತಡ ಹೇರುತ್ತಿದ್ದಾರೆ. ಇಂತಹ ಒತ್ತಡಗಳಿಗೆ ಹೈಕಮಾಂಡ್‌ ಜಗ್ಗುವುದಿಲ್ಲ’ ಎಂದರು.

ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್‌.ಲಿಂಗಮೂರ್ತಿ ಅವರು ಹೊಸದುರ್ಗ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಎಂಬುದಾಗಿ ಶುಕ್ರವಾರ ಘೋಷಣೆ ಮಾಡಿಕೊಂಡಿದ್ದರು. ಬಿಜೆಪಿ ಪ್ರತಿನಿಧಿಸುತ್ತಿರುವ ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಕೂಡ ಚುನಾವಣೆಗೆ ಸ್ಪರ್ಧಿಸುವುದಾಗಿ ಸಂದೇಶ ರವಾನಿಸಿದ್ದಾರೆ. ಕ್ಷೇತ್ರದ ರಾಜಕೀಯ ಬೆಳವಣಿಗೆಗಳು ಕುತೂಹಲ ಕೆರಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.