ಮಡಿಕೇರಿ: ಕರ್ನಾಟಕ ಗಡಿ ಸಮೀಪ ಇದ್ದ ನಕ್ಸಲ್ ತಂಡಕ್ಕೂ ಕೇರಳ ನಕ್ಸಲ್ ನಿಗ್ರಹ ಪಡೆಗೂ ತೀವ್ರತರವಾದ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಎಲ್ಲ ನಕ್ಸಲರೂ ಪರಾರಿಯಾಗಿದ್ದಾರೆ.
ಇಲ್ಲಿನ ಗಡಿಗ್ರಾಮ ಕುಟ್ಟಕ್ಕೆ ಕೆಲವೇ ಕಿ.ಮೀ ದೂರದಲ್ಲಿರುವ ಕೇರಳದ ಐಯಮ್ಮುನ್ ಎಂಬ ಸ್ಥಳದಲ್ಲಿ 9 ಮಂದಿಯ ನಕ್ಸಲ್ ತಂಡವು ಶಿಬಿರ ಹಾಕಿಕೊಂಡಿತ್ತು. ಕೂಂಬಿಂಗ್ ನಡೆಸುತ್ತಿದ್ದ ನಕ್ಸಲ್ ನಿಗ್ರಹ ಪಡೆಯು ಗುಂಡಿನ ದಾಳಿ ನಡೆಸಿತು. ಪ್ರತಿಯಾಗಿ ನಕ್ಸಲರ ತಂಡವೂ ತೀವ್ರವಾದ ಗುಂಡಿನ ಚಕಮಕಿ ನಡೆಸಿದೆ. ಈ ವೇಳೆ ಎಲ್ಲರೂ ಪರಾರಿಯಾಗಿದ್ದಾರೆ.
ಸ್ಥಳದಲ್ಲಿ ಎರಡು ರೈಫಲ್ಸ್ ಸಿಕ್ಕಿದ್ದು, ರಕ್ತದ ಕಲೆ ಪತ್ತೆಯಾಗಿವೆ. ಹೀಗಾಗಿ ಗುಂಡಿನ ಚಕಮಕಿಯಲ್ಲಿ ನಕ್ಸಲರು ಗಾಯಗೊಂಡಿರಬಹುದು ಎಂದು ಶಂಕಿಸಲಾಗಿದೆ. ಇವರು ನಕ್ಸಲರ ಕಬಿನಿ ಎಂಬ ತಂಡದವರಾಗಿರಬಹುದು ಎಂದು ಹೆಸರು ಬಹಿರಂಗ ಪಡಿಸಲು ಬಯಸದ ನಕ್ಸಲ್ ನಿಗ್ರಹ ಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗಾಯಗೊಂಡಿರುವ ನಕ್ಸಲರು ಚಿಕಿತ್ಸೆ ಪಡೆಯಲು ಕರ್ನಾಟಕಕ್ಕೆ ನುಸುಳುವ ಶಂಕೆಯಿದೆ. ಗಡಿ ಭಾಗದ ಎಲ್ಲ ಔಷಧ ಅಂಗಡಿಗಳ ಮೇಲೆ ನಿಗಾ ಇರಿಸಲಾಗಿದೆ. ರಾಜ್ಯ ನಕ್ಸಲ್ ನಿಗ್ರಹ ಪಡೆಯು ತೀವ್ರ ಕಟ್ಟೆಚ್ಚರ ವಹಿಸಿದೆ. ಕೂಂಬಿಂಗ್ ಅನ್ನು ಚುರುಕುಗೊಳಿಸಲಾಗಿದೆ.
ನಕ್ಸಲ್ ನಿಗ್ರಹ ಪಡೆಯ ಹೆಚ್ಚುವರಿ ಸಿಬ್ಬಂದಿ ಆಗಮನ
ಗಡಿಗೆ ಸಮೀಪದಲ್ಲಿ ನಕ್ಸಲರೊಂದಿಗೆ ಭಾರಿ ಗುಂಡಿನ ಚಕಮಕಿ ನಡೆದ ಬೆನ್ನಲ್ಲೇ ರಾಜ್ಯ ನಕ್ಸಲ್ ನಿಗ್ರಹ ಪಡೆಯ ಹೆಚ್ಚುವರಿ ಸಿಬ್ಬಂದಿ ಬಂದಿದ್ದಾರೆ. ಜಿಲ್ಲಾ ಪೊಲೀಸರು ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ಹಾಕಿಕೊಂಡು ತಪಾಸಣೆ ತೀವ್ರಗೊಳಿಸಿದ್ದಾರೆ. ವಿಶೇಷವಾಗಿ ಆಸ್ಪತ್ರೆಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ.
ಈ ಕುರಿತು ಪ್ರಜಾವಾಣಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರನ್ನು ಸಂಪರ್ಕಿಸಿದಾಗ ಅವರು 'ಗಡಿಯಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದ್ದು, ತೀವ್ರ ಕಟ್ಟೆಚ್ಚರ ವಹಿಸಲಾಗಿದೆ' ಎಂದು ತಿಳಿಸಿದ್ದಾರೆ.
ನ.7ರಂದು ಕೇರಳದ ವಯನಾಡಿನಲ್ಲಿ ಶ್ರೀಮತಿ ಅಲಿಯಾಸ್ ಉನ್ನಿಮಾಯ ಹಾಗೂ ಚಂದ್ರು ಎಂಬ ಇಬ್ಬರು ಶಂಕಿತ ನಕ್ಸಲರನ್ನು ಅಲ್ಲಿನ ಪೊಲೀಸರು ಬಂಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.