ಬೀದರ್: ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ದೇವ ಅವರ 550ನೇ ಜಯಂತಿ ಅಂಗವಾಗಿ ದೇಶದ ವಿವಿಧೆಡೆಯಿಂದ ಬಂದಿರುವ ಸಿಖ್ ಸಮುದಾಯದ ಸಹಸ್ರಾರು ಜನರು ನಗರದಲ್ಲಿ ಮಂಗಳವಾರ ಅದ್ಧೂರಿ ಮೆರವಣಿಗೆ ನಡೆಸಿದರು.
ಗುರುದ್ವಾರದ ಆವರಣದಲ್ಲಿ ನಿರ್ಮಿಸಿರುವ ಬೃಹತ್ ವೇದಿಕೆಯಲ್ಲಿ ದೇಶದ ವಿವಿಧೆಡೆಯ ಗುರುದ್ವಾರಗಳ ಪ್ರಮುಖರು ಗುರುಗ್ರಂಥ ಸಾಹಿಬ್ ಹಾಗೂ ಗುರುನಾನಕ್ ದೇವ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಸಾಂಪ್ರದಾಯಿಕ ವೇಷ ಧರಿಸಿದ್ದ ಯುವಕರು ಹಾಗೂ ಕರಸೇವಕರು ನಿಶಾನ್ ಸಾಹಿಬ್ ಹಾಗೂ ಧಾರ್ಮಿಕ ಧ್ವಜ ಹಿಡಿದು ಜಯಘೋಷ ಮೊಳಗಿಸಿದರು. ನೀಲಿ ಹಾಗೂ ಹಳದಿ ಬಣ್ಣದ ಧಾರ್ಮಿಕ ಧ್ವಜಗಳು ಹಾಗೂ ನಿಶಾನ್ ಸಾಹಿಬ್ ಮೆರವಣಿಗೆ ಮುಂಚೂಣಿಯಲ್ಲಿದ್ದವು.
ಯುವಕರು ಆರ್ಭಟದೊಂದಿಗೆ ಕತ್ತಿ ವರಸೆ ಪ್ರದರ್ಶನ ನೀಡಿದರು. ಕೆಲ ಯುವಕರು ಬಾಯಲ್ಲಿ ಸೀಮೆಎಣ್ಣೆ ಹಾಕಿಕೊಂಡು ದೀವಟಿಗೆ ಮುಂದೆ ಚಿಮ್ಮಿಸಿ ಬೆಂಕಿ ಉಗುಳಿದರು. ಯುವಕರ ಈ ಪ್ರದರ್ಶನ ಪ್ರೇಕ್ಷಕರ ಮೈನವಿರೇಳಿಸಿತು. ಯುವಕರು ಉರಿಯುವ ದೀವಟಿಗೆ, ಖಡ್ಗ ಹಾಗೂ ಲಾಠಿ ತಿರುಗಿಸಿ ಯುದ್ಧ ಕೌಶಲ ಪ್ರದರ್ಶಿಸಿದರು.
ಗುರುದ್ವಾರ ಶ್ರೀ ನಾನಕ್ ಝೀರಾ ಪ್ರಬಂಧಕ ಕಮಿಟಿ ಅಧ್ಯಕ್ಷ ಸರ್ದಾರ್ ಬಲಬೀರ್ ಸಿಂಗ್, ಕಮಿಟಿ ಸದಸ್ಯರು, ಸಿಖ್ ಮುಖಂಡರು ನೇತೃತ್ವ ವಹಿಸಿದ್ದರು.
ಇದಕ್ಕೂ ಮೊದಲು ಧಾರ್ಮಿಕ ಮುಖಂಡರಿಂದ ಗುರುದ್ವಾರದಲ್ಲಿ ಬೆಳಿಗ್ಗೆ ಕೀರ್ತನ ಹಾಗೂ ಪ್ರವಚನ ಕಾರ್ಯಕ್ರಮ ನಡೆಯಿತು. ಸಾಮೂಹಿಕ ಗುರುಗ್ರಂಥ ಪಠಣ ಕಾರ್ಯಕ್ರಮವನ್ನು ವಿಧಿಬದ್ಧವಾಗಿ ಸಮಾರೋಪಗೊಳಿಸಲಾಯಿತು. ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡು ಗ್ರಂಥ ಸಾಹಿಬ್ ದರ್ಶನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.