ADVERTISEMENT

‘ಗ್ಯಾರಂಟಿ’ | ಕುಟುಕಿದ ಪಿ.ಎಂ: ಕೆರಳಿದ ಸಿ.ಎಂ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2024, 23:29 IST
Last Updated 1 ನವೆಂಬರ್ 2024, 23:29 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ</p></div>

ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ

   

ಬೆಂಗಳೂರು: ರಾಜ್ಯ ಸರ್ಕಾರದ ‘ಗ್ಯಾರಂಟಿ’ ವಿಷಯ ರಾಜಕೀಯ ವಲಯದ ಚರ್ಚೆಯಲ್ಲಿ ಮುಂಚೂಣಿಯಲ್ಲಿ ಇರುವ ಹೊತ್ತಿನೊಳಗೆ, ಈ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯೆ ಜಟಾಪಟಿ ಜೋರಾಗಿದೆ.

ಮೋದಿಯವರು ತಮ್ಮ ‘ಎಕ್ಸ್‌’ ಖಾತೆಯಲ್ಲಿ ‘‍ಗ್ಯಾರಂಟಿ’ಗಳಿಗೆ ಕುಟುಕಿದ ಬೆನ್ನಲ್ಲೇ, ಸಿದ್ದರಾಮಯ್ಯನವರು ತಮ್ಮ ‘ಎಕ್ಸ್‌’ನಲ್ಲಿ ಎದಿರೇಟು ಕೊಟ್ಟಿದ್ದಾರೆ. ಈ ಬೆಳವಣಿಗೆಗಳ ಮಧ್ಯೆಯೇ, ಸರ್ಕಾರದ ಜತೆಗಿನ ಸಂಘರ್ಷದ ಹಾದಿ ತೊರೆದು, ತಮ್ಮ ವರಸೆ ಬದಲಿಸಿದಂತಿರುವ ರಾಜ್ಯಪಾಲ ಥಾವರಚಂದ್ ಗೆಹಲೋತ್, ‘ದಕ್ಷ ಆಡಳಿತದಿಂದಾಗಿ ಕರ್ನಾಟಕವು ಸಮೃದ್ಧವಾಗಿದೆ’ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ADVERTISEMENT

ಕಾಂಗ್ರೆಸ್‌ನ ಬಣ್ಣ ಬಯಲಾಗಿದೆ: ಪ್ರಧಾನಿ ನರೇಂದ್ರ ಮೋದಿ

ಚುನಾವಣೆ ಸಂದರ್ಭದಲ್ಲಿ ಭರವಸೆಗಳನ್ನು ನೀಡುವಾಗ ರಾಜ್ಯದ ಹಣಕಾಸು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕದ ಪಕ್ಷದ ಮುಖಂಡರಿಗೆ ನೀಡಿರುವ ಸಲಹೆಯನ್ನು ಆಧಾರವಾಗಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಕಾಂಗ್ರೆಸ್‌ ಪಕ್ಷವನ್ನು ಕುಟುಕಿದ್ದಾರೆ. 

ನೀಡಿರುವ ಭರವಸೆಗಳನ್ನು ಈಡೇರಿಸಲು ತನಗೆ ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿ ತಿಳಿದಿದ್ದರೂ, ಕರ್ನಾಟಕ ಮತ್ತು ಇತರ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ ಕಾಂಗ್ರೆಸ್‌ನ ‘ಬಣ್ಣ ಈಗ ಬಯಲಾಗಿದೆ’ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಭ್ರಷ್ಟಾಚಾರ ಬೆಂಬಲಿಸಿದ್ದೇ ನಿಮ್ಮ ಸಾಧನೆ; ಮುಖ್ಯಮಂತ್ರಿ ಸಿದ್ದರಾಮಯ್ಯ

‘ನರೇಂದ್ರ ಮೋದಿ ಅವರೇ, ನಾವು ಹೇಳಿದ್ದನ್ನು ಮಾಡಿದ್ದೇವೆ. ನಮ್ಮತ್ತ ಬೊಟ್ಟು ಮಾಡುವುದಕ್ಕೂ ಮೊದಲು ರಾಜ್ಯ ಬಿಜೆಪಿಯ ಪರಂಪರೆ ಎಷ್ಟು ವಿಧ್ವಂಸಕಾರಿಯಾಗಿತ್ತು ಎಂಬುದನ್ನು ನೋಡಿಕೊಳ್ಳಿ’ ಎಂದು ಪ್ರಧಾನಿ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಮೋದಿ ಅವರ ‘ಎಕ್ಸ್‌’ ಪೋಸ್ಟ್‌ಗೆ ‘ಎಕ್ಸ್‌’ನಲ್ಲೇ ಪ್ರತಿಕ್ರಿಯೆ ನೀಡಿರುವ ಅವರು, ‘ನಾವು ನೀಡಿದ ಎಲ್ಲ ಭರವಸೆಗಳನ್ನೂ ಈಡೇರಿಸಿದ್ದೇವೆ. ಎಲ್ಲ ಐದು ಗ್ಯಾರಂಟಿಗಳನ್ನು ₹52,000 ಕೋಟಿ ವೆಚ್ಚದಲ್ಲಿ ಅನುಷ್ಠಾನಕ್ಕೆ ತಂದಿದ್ದೇವೆ. ಜತೆಗೆ ಇನ್ನೂ ₹52,900 ಕೋಟಿ ಬಂಡವಾಳ ವೆಚ್ಚದಲ್ಲಿ ಕರ್ನಾಟಕ ಭವಿಷ್ಯವನ್ನು ಕಟ್ಟುತ್ತಿದ್ದೇವೆ’ ಎಂದಿದ್ದಾರೆ.

‘ದಕ್ಷ ಆಡಳಿತ’

‘ಕರ್ನಾಟಕವು ಸುವ್ಯವಸ್ಥಿತ ಮತ್ತು ಸಮೃದ್ಧ ರಾಜ್ಯವಾಗಿದೆ. ಇಲ್ಲಿನ ವ್ಯಾಪಾರ ದೃಷ್ಟಿಕೋನ ಮತ್ತು ಸರ್ಕಾರದ ದಕ್ಷ ಆಡಳಿತವು ಕರ್ನಾಟಕಕ್ಕೆ ವಿಶೇಷ ಗುರುತನ್ನು ನೀಡಿದೆ. ರಾಜ್ಯವು ಪ್ರತಿಯೊಂದು ಕ್ಷೇತ್ರದಲ್ಲೂ ಉತ್ತಮ ಪ್ರಗತಿ ಸಾಧಿಸಿದೆ. ದೇಶದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದೆ’ ಎಂದು ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಹೇಳಿದರು.

ರಾಜಭವನದ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವದಲ್ಲಿ ವರ್ಚ್ಯುವಲ್ ಆಗಿ ಅವರು ಭಾಗಿಯಾಗಿದ್ದರು. ‘ಸರ್ವತೋಮುಖ ಮತ್ತು ಸುಸ್ಥಿರ
ಅಭಿವೃದ್ಧಿ ಗುರಿಗಳನ್ನು ಸಾಧಿಸಲು ರಾಜ್ಯ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ’ ಎಂದರು.

ಭರವಸೆಗಳನ್ನು ನೀಡುವುದು ಸುಲಭ. ಆದರೆ, ಅನುಷ್ಠಾನ ಕಷ್ಟ ಅಥವಾ ಸಾಧ್ಯವೇ ಇಲ್ಲ ಎಂಬುದನ್ನು ಕಾಂಗ್ರೆಸ್‌ ಈಗ ಮನಗಾಣುತ್ತಿದೆ. ಜನರಿಗೆ ನೀಡಿದ ಭರವಸೆಗಳ ಜಾರಿ ಸಾಧ್ಯವಿಲ್ಲ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿತ್ತು
ನರೇಂದ್ರ ಮೋದಿ, ಪ್ರಧಾನಿ
ಕಾಂಗ್ರೆಸ್‌ ಹೇಳಿದ್ದನ್ನು ಕರ್ನಾಟಕದ ಜನರಿಗೆ ನೀಡಿದೆ, ಬಿಜೆಪಿ ದೇಶದಾದ್ಯಂತ ಮಾತು ತಪ್ಪಿದೆ. ಕರ್ನಾಟಕವು ಕಾಂಗ್ರೆಸ್‌ ಅನ್ನು ನಂಬುತ್ತದೆ. ಬಿಜೆಪಿಯ ಭ್ರಷ್ಟಾಚಾರ ಬಯಲಾಗಿದೆ, ಭಾರತಕ್ಕೆ ಇದಕ್ಕಿಂತಲೂ ಉತ್ತಮವಾದದ್ದು ಬೇಕಿದೆ
ಸಿದ್ದರಾಮಯ್ಯ, ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.