ಬೆಂಗಳೂರು: ನಾನು ಯಾರ ವಿರುದ್ಧವೂ ಲಘುವಾಗಿ ಮಾತನಾಡುವುದಿಲ್ಲ, ಯಾರ ಬಗ್ಗೆಯೂ ನನಗೆ ದ್ವೇಷವಿಲ್ಲ, ಯಾರ ಮೇಲೂ ನನಗೆ ಅಸಹನೆಯಿಲ್ಲ, ಜಾತಿ ರಾಜಕಾರಣ ಮಾಡಿಲ್ಲ, ಜೀವನದಲ್ಲಿ ಯಾವತ್ತೂ ಅನ್ಯರ ಐದು ರೂಪಾಯಿಯನ್ನೂ ಮುಟ್ಟಿಲ್ಲ, ಎಂದೂ ಡ್ರಿಂಕ್ಸ್ ಮಾಡಿಲ್ಲ, ಮತ್ತೊಬ್ಬರಿಗೆ ಮೋಸ ಮಾಡಿಲ್ಲ, ಅಗೌರವ ಇಲ್ಲ, ನಾನು ಅನಾಯಾಸ ಮರಣ ಬಯಸುತ್ತೇನೆ...!
ಕನ್ನಡ ಮತ್ತು ಸಂಸ್ಕತಿ ಇಲಾಖೆ ವತಿಯಿಂದ ರವೀಂದ್ರ ಕಲಾ ಕ್ಷೇತ್ರದಲ್ಲಿ ಶನಿವಾರ ಆಯೋಜಿಸಲಾಗಿದ್ದ ‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದ ತಿಂಗಳ ಅತಿಥಿಯಾಗಿ ಮಾತನಾಡಿದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ಶರಧಿಯಲ್ಲಿ ಉಕ್ಕಿಬಂದ ಅಲೆಗಳಂತೆ ಗತಕಾಲದ ನೋವು, ನೆನಪು, ಏಳಿಗೆಯ ಮಜಲುಗಳನ್ನು ಮೊಗೆಮೊಗೆದು ಹಾಕಿದ ಪರಿ ಇದು.
‘ನಾನು ಪ್ರಧಾನಿಯಾದದ್ದು ಪ್ರಾರಬ್ಧ, ಹಾಗೆಂದಾಕ್ಷಣ ನಾಳೆಯೇ ರಾಜಕಾರಣದಿಂದ ಹಿಂದೆ ಸರಿಯುತ್ತೇನೆ ಎಂದು ಯಾರೂ ಭಾವಿಸಬೇಡಿ. ನನ್ನ ಮೈಯಲ್ಲಿ ಶಕ್ತಿ ಇರುವವರೆಗೂ ರಾಜಕಾರಣ ಮಾಡುತ್ತೇನೆ. ನಾನೇನೇ ಆಗಿದ್ದರೂ ಅದು ಸನ್ನಿವೇಶದ ಶಿಶು. ಈ ದೇಶಕ್ಕೆ ನೆಹರೂ ಅವರಂತಹ ಮನುಷ್ಯ ಸಿಗೋದಿಲ್ಲ, ದೇವೇಗೌಡನಂತಹವರು ಮತ್ತೆ ಹುಟ್ಟೋದಿಲ್ಲ’ ಎಂದರು.
‘ದೇವರಾಜ ಅರಸು ನನ್ನ ಮೆಚ್ಚಿನ ಮುಖ್ಯಮಂತ್ರಿ’ ಎಂದು ಬಣ್ಣಿಸಿದ ಅವರು, ‘ಮೈಸೂರು ಚಳವಳಿಯಲ್ಲಿ ವಿದ್ಯಾರ್ಥಿ ನಾಯಕನಾಗಿ ಪೊಲೀಸರಿಂದ ಬಂಧನಕ್ಕೊಳಗಾದ ದಿನದಿಂದ ಕಂತ್ರಾಟುದಾರನಾಗಿ ಬದುಕು ಕಟ್ಟಿಕೊಳ್ಳುವವರೆಗೆ ತುಂಬಾ ಕಷ್ಟಪಟ್ಟಿದ್ದೇನೆ. ನನ್ನೆಲ್ಲ ಯಶಸ್ಸಿನ ಹಿಂದೆ ಪತ್ನಿ ಚೆನ್ನಮ್ಮ ಇದ್ದಾರೆ. ಅವರ ಮೇಲೆ ಆ್ಯಸಿಡ್ ಎರಚಿದ ಘಟನೆ ಒಂದು ಯಾತನೆಯ ಅಧ್ಯಾಯ. ಇದನ್ನೆಲ್ಲಾ ಯಾರು ಮಾಡಿಸಿದರೋ ಅವರ ವಿರುದ್ಧ ನಾನು ಕೆಟ್ಟದ್ದನ್ನು ಬಯಸಲಿಲ್ಲ. ಎಲ್ಲವೂ ದೈವೇಚ್ಛೆ. ನಮ್ಮ ಕುಲದೇವರಾದ ಈಶ್ವರ ನೀಡಿದ ಶಿಕ್ಷೆ ಎಂದು ಭಾವಿಸಿ ಬದುಕುತ್ತಿದ್ದೇನೆ’ ಎಂದು ವಿವರಿಸಿದರು.
‘ನಾನೊಬ್ಬ ಯಾರಿಂದಲೂ ಐದು ರೂಪಾಯಿ ಮುುಟ್ಟಿಲ್ಲ. ಆದರೆ, ಪಕ್ಷದ ಸಂಘಟನೆ ಮತ್ತು ಬಲವರ್ಧನೆಗಾಗಿ ಕೊಟ್ಟ ಹಣವನ್ನು ಸ್ವೀಕರಿಸಿದ್ದೇನೆ. ಇವತ್ತು ರಾಜಕಾರಣ ನಾಶವಾಗಿದೆ. ನನ್ನ ಜೊತೆಯಲ್ಲಿದ್ದವರಲ್ಲಿ ಬಹಳಷ್ಟು ಜನ ಈಗಿಲ್ಲ. ಹಾಗಂತ ಯಾರ ಮೇಲೂ ಕೆಟ್ಟ ಮಾತು ಆಡೋದಿಲ್ಲ. ನಾನು ಏನಾದರೂ ಆಗಿದ್ದರೆ ಅದೆಲ್ಲವೂ ನನ್ನ ಹಿಂದಿನ ಜನ್ಮದ ಫಲ ಈಗ ನೆರಳಾಗಿ ಬರುತ್ತಿದೆ’ ಎಂದರು.
‘ನಾನು ಪ್ರಧಾನಿಯಾಗಿದ್ದಾಗ ಬೆಂಗಳೂರಿನ ಐ.ಟಿ ಮತ್ತು ಬಿ.ಟಿ ಕ್ಷೇತ್ರಗಳಿಗೆ ಒತ್ತು ಕೊಟ್ಟ ಪರಿಣಾಮವೇ ಇವತ್ತಿನ ಬೆಂಗಳೂರು ಅಭಿವೃದ್ಧಿಯ ಫಲಶ್ರುತಿ’ ಎಂದರು.
‘ಅಧಿಕಾರದ ದಾಹ ಎಲ್ಲರಲ್ಲೂ ಇದೆ. ರಾಜಕೀಯದಲ್ಲಿ ತಾಳ್ಮೆ ಇಟ್ಟು ಕೊಂಡವರು ಸ್ವಲ್ಪದಿನ ಉಳೀತಾರೆ. ನನಗೆ ಸಿದ್ದರಾಮಯ್ಯ ವಿರುದ್ಧ ಅಸೂಯೆ, ದ್ವೇಷ ಇಲ್ಲ. ಇಂದಿನ ವ್ಯವಸ್ಥೆ ನಾಶವಾಗಿರುವ ಬಗ್ಗೆ ಮಾತನಾಡಿ ಪ್ರಯೋಜನವಿಲ್ಲ’ ಎನ್ನುತ್ತಲೇ ತಮ್ಮ ಅನವರತ ದೈವಭಕ್ತಿ, ಶೃಂಗೇರಿ ಮಠಕ್ಕೆ ನಡೆದುಕೊಳ್ಳುವ ಪರಿ, ಮಿತ್ರ ರಾಜಕಾರಣಿಗಳ ಸಖ್ಯವನ್ನು ತುಣುಕು ತುಣುಕಾಗಿ ವಿವರಿಸಿದರು.
ಪತ್ರಕರ್ತ ಸುಗತ ಶ್ರೀನಿವಾಸ ರಾಜು, ವಾರ್ತಾ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್.ಆರ್‌ವಿಶುಕುಮಾರ್ ಕಾರ್ಯಕ್ರಮ ನಡೆಸಿಕೊಟ್ಟರು.
‘ನನಗೆ ರೋಮಾಂಚನವಾಯ್ತು’
ಕಾರ್ಯಕ್ರಮ ಆರಂಭಕ್ಕೂ ಮುನ್ನ ದೇವೇಗೌಡರ ಕುರಿತ ಸ್ಥಿರಚಿತ್ರಗಳನ್ನು ಪ್ರದರ್ಶಿಸಲಾಯಿತು. ಐದು ನಿಮಿಷದ ಈ ಪ್ರದರ್ಶನವನ್ನು ಗಲ್ಲಕ್ಕೆ ಕೈಕೊಟ್ಟು, ಮಗದೊಮ್ಮೆ ಮೂಗಿನ ಮೇಲೆ ಬೆರಳಿಟ್ಟು ಬೆಡಗು ಭಾವನೆಗಳಲ್ಲಿ ವೀಕ್ಷಿಸಿದ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಜಯಮಾಲಾ, ಕೆಂಪುಕೋಟೆಯ ಮೇಲೆ ದೇವೇಗೌಡರು ಭಾಷಣ ಮಾಡಿದ ಚಿತ್ರ ನೋಡಿ ರೋಮಾಂಚನಗೊಂಡಿದ್ದನ್ನು ವಿಶುಕುಮಾರ್ ವಿವರಿಸಿದರು.
****
ವಿದ್ಯಾರ್ಥಿ ದೆಸೆಯಲ್ಲಿ ನಾನು ಪೊಲೀಸರಿಂದ ಬಂಧನಕ್ಕೆ ಒಳಗಾದಾಗ ನ್ಯಾಯಾಧೀಶರು, ಪುಢಾರಿಯಾಗಬೇಡ, ಓದಿ ಬುದ್ಧಿವಂತನಾಗು ಎಂದಿದ್ದರು.
– ಎಚ್.ಡಿ.ದೇವೇಗೌಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.