ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ, ಚಕ್ರವರ್ತಿ ಸೂಲಿಬೆಲೆ ಮಹಾನ್ ದೇಶಭಕ್ತರೇನಲ್ಲ ಎಂಬ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಸಚಿವ ಎಸ್. ಸುರೇಶ್ ಕುಮಾರ್ ಅವರು ಚಕ್ರವರ್ತಿ ಸೂಲಿಬೆಲೆ ನಂ. 1 ದೇಶಭಕ್ತ ಎಂದು ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಎಚ್.ಡಿ. ಕುಮಾರಸ್ವಾಮಿ ಅವರು, ಹೈದರಾಬಾದ್‌ನ ಪಶುವೈದ್ಯೆ ಅತ್ಯಾಚಾರಿಗಳಲ್ಲೂ ಧರ್ಮ ಹುಡುಕಿದವ, ಮತ ಕೇಳಲು ವೀರಯೋಧ ಅಭಿನಂದನ್ ವರ್ಧಮಾನ್ ಫೋಟೊ ಬಳಸಿದವ, ಪೂರ್ಣಪ್ರಜ್ಞಾ ವಿದ್ಯಾಪೀಠದ ಪವಿತ್ರ ಆವರಣವನ್ನು ರಾಜಕೀಯಕ್ಕೆ ಬಳಸಿಕೊಂಡವ, ಬಿಜೆಪಿ ನಾಯಕ ಸದಾನಂದಗೌಡರಿಂದಲೇ ದೇಶದ್ರೋಹಿ ಎನಿಸಿಕೊಂಡವ ಸುರೇಶ್ ಕುಮಾರ್ ಅವರಿಗೆ ದೇಶಪ್ರೇಮಿಯಾಗಿ ಕಾಣುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಎಚ್‌ಡಿಕೆ, ದೇಶಪ್ರೇಮಕ್ಕೆ Rank ಕೊಡುತ್ತಾರೆ ಸುರೇಶ್ ಕುಮಾರ್. ತಾಯಿ ಮೇಲಿನ ಪ್ರೀತಿಗೆ Rank ನೀಡಲು ಸಾಧ್ಯವೇ? ರಾಜಕೀಯಕ್ಕೆ ದೇಶಪ್ರೇಮವನ್ನು ಬಳಸಿಕೊಂಡ ನಿಮ್ಮ ಬೌದ್ಧಿಕ ದಿವಾಳಿತನ ನಿಜಕ್ಕೂ ನನ್ನಲ್ಲಿ ಬೇಸರ ತರಿಸಿದೆ. ಸಜ್ಜನರಾದ ನಿಮ್ಮ ಮೇಲಿನ ನನ್ನ ಅಭಿಮಾನಕ್ಕೇ ಕುಂದುಂಟಾಗಿದೆ. ದೇಶಪ್ರೇಮದ ವಿಚಾರದಲ್ಲಿ Rank ಕೊಟ್ಟರೆ 'ಆತ' ಕೊನೇ Rank ಎಂದು ಬರೆದುಕೊಂಡಿದ್ದಾರೆ.
ಸಾಲುಮರಗಳನ್ನು ಬೆಳೆಸಿದ ತಿಮ್ಮಕ್ಕ ನಿಮಗೆ ದೇಶಪ್ರೇಮಿ ಎನಿಸುವುದಿಲ್ಲ. ಕೆರೆ ಕಟ್ಟಿದ ಕಾಮೇಗೌಡ ನಿಮಗೆ ದೇಶಪ್ರೇಮಿಯಾಗರು. ರಾಜಕೀಯಕ್ಕಾಗಿ ಧರ್ಮಗಳನ್ನು ಬಳಸಿಕೊಳ್ಳುವ, ಕೋಮು ದಳ್ಳುರಿ ಬಿತ್ತುವವರಲ್ಲಿ ದೇಶಪ್ರೇಮ ಕಂಡ ನೀವು ನಿಮ್ಮಲ್ಲಿರುವ ಮಾನಸಿಕ ಭ್ರಷ್ಟಾಚಾರಿಯನ್ನು ಸಮಾಜದೆದುರು ಅನಾವರಣ ಮಾಡಿದ್ದೀರಿ. 'ಆತ'ನ ದೇಶಭಕ್ತಿಗೆ ಸಾಕ್ಷ್ಯ ಕೊಡುವ ಸುರೇಶ್ ಕುಮಾರ್ ಅವರೇ, ನನ್ನ ಮನೆಗೆ ಒಮ್ಮೆ ಬನ್ನಿ. ನಿತ್ಯವೂ ಸಾವಿರಾರು ಮಂದಿ ನೆರವು ಕೋರಿ ನನ್ನ ಹುಡುಕಿ ಬರುತ್ತಾರೆ. ಬಾಲ್ಯದಿಂದ ಈವರೆಗೆ ಜಾತಿ, ಮತ, ಪಕ್ಷವೆಂದು ನೋಡದೆ ಲಕ್ಷಾಂತರ ಮಂದಿಗೆ ಹೆಗಲಾಗಿದ್ದೇನೆ. ಅದನ್ನು ನಾನು ವರ್ಣಿಸಿಕೊಳ್ಳಬೇಕಿಲ್ಲ. ಹಾಗೆಯೇ ನಿಮ್ಮಿಂದ ದೇಶ ಭಕ್ತಿ ತಿಳಿಯಬೇಕಿಲ್ಲ ಎಂದು ಕಿಡಿಕಾರಿದ್ದಾರೆ.
ರೈತರ ಸಾಲಮನ್ನಾ, ಬಡವರ ಬಂಧು, ಸಾಲ ಋಣಮುಕ್ತ ಕಾಯ್ದೆ ಇವೆಲ್ಲವೂ ನಾನು ತಂದ ಕಾರ್ಯಕ್ರಮಗಳು? ಇವು ದೇಶವಿರೋಧಿಯೇ? ನಿಮ್ಮ ಸರ್ಕಾರ ಜಾರಿಗೆ ತಂದಿರುವ ದೇಶಕ್ತಿಯ ಕಾರ್ಯಕ್ರಮಗಳನ್ನು ತೋರಿಸಿ ನೋಡೋಣ. ಬಡವ ಬಲ್ಲಿದರು ಬೇಕಿಲ್ಲದ ನಿಮಗೆ ಕೋಮು ಭಾವನೆಗಳೇ ಬಂಡವಾಳ. ನಿಮ್ಮಂಥ ದೇಶ ಪ್ರೇಮ(ದ್ರೋಹ) ನಮಗೆ ಬೇಕಿಲ್ಲ ಸುರೇಶ್ ಅವರೇ ಎಂದಿದ್ದಾರೆ.
ನನ್ನನ್ನು ದೇಶದ್ರೋಹಿ, ಪಾಕಿಸ್ತಾನ ಪರ ಎಂದು ಕೂಗು ಮಾರಿಯಂತೆ ಅರಚುತ್ತಿರುವ ಪ್ರಲ್ಹಾದ ಜೋಶಿಯವರೇ, ದಿನಬೆಳಗಾದರೆ ಪಾಕಿಸ್ತಾನವನ್ನೇ ಜಪಿಸುವ ನಿಮ್ಮ ಮೂಲ ಪಾಕ್ ಇರಬಹುದೇನೋ ನನಗೆ ಗೊತ್ತಿಲ್ಲ. ಪಾಕಿಸ್ತಾನದ ನೆಲ ಸ್ಪರ್ಶಿಸಿ, ಬಿರಿಯಾನಿ ತಿಂದು ಬಂದ ಪ್ರಧಾನಿಯ ಮಂತ್ರಿಮಂಡಲದಲ್ಲಿರುವ ನೀವು ದೇಶಭ್ರಷ್ಟರು. ನಾನು ಈ ಮಣ್ಣಿನವ. ಪಾಕಿಸ್ತಾನ ಎಂಬ ದೇಶ ಈ ಭೂಪಟದಲ್ಲಿ ಇರದೇ ಹೋಗಿದ್ದರೆ ನೀವಿಲ್ಲಿ ಒಂದು ವೋಟು ಪಡೆಯಲೂ ಸಾಧ್ಯವಿರುತ್ತಿರಲಿಲ್ಲ. ಅದಕ್ಕಾಗಿಯೇ ಪಾಕ್ ನಾಮಸ್ಮರಣೆ ನಿಮ್ಮ ಕಾಯಕವಾಗಿಬಿಟ್ಟಿದೆ. ನಿಮ್ಮದೂ ರಾಜಕಾರಣವೇ? ನಿಮ್ಮದೂ ದೇಶ ಪ್ರೇಮವೇ? ಎಂಥ ಯಃಕಶ್ಚಿತ್ ಬದುಕು?
ಸಮಾಜ ವಿರೋಧಿ ಕಾರಣಕ್ಕೆ ಭಾರತಾಂಬೆ ಮಡಿಲಲ್ಲಿ ಬಾಂಬ್ ಇಡುವವರು ದೇಶದ್ರೋಹಿಗಳೇ. ಚಿಕ್ಕಮಗಳೂರಿನ ಸಾಹಿತ್ಯ ಸಮ್ಮೇಳನಕ್ಕೆ ಪೆಟ್ರೋಲ್ ಬಾಂಬ್ ಹಾಕುತ್ತೇನೆ ಎಂದಿದ್ದ ನಿಮ್ಮದೇ ಸಿದ್ಧಾಂತದ ಪ್ರತಿಪಾದಕರೂ ದೇಶದ್ರೋಹಿಗಳೇ ಅಲ್ಲವೇ ಬಿಜೆಪಿ ನಾಯಕರೇ ಎಂದು ಪ್ರಶ್ನಿಸಿದ್ದಾರೆ.
ಚಕ್ರವರ್ತಿ ಸೂಲಿಬೆಲೆ ನಂ 1 ದೇಶಭಕ್ತ: ಎಸ್. ಸುರೇಶ್ ಕುಮಾರ್
ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದ ಸಚಿವ ಎಸ್.ಸುರೇಶ್ ಕುಮಾರ್, ಕುಮಾರಸ್ವಾಮಿಯವರೇ, ನೆರೆ ಬಂದಾಗ ಸರಕಾರದ ನೆರವಿಲ್ಲದೆ ಪರಿಹಾರ ಕಾರ್ಯ ಮಾಡುವುದು, ಕೆರೆ-ಕಲ್ಯಾಣಿ ಸ್ವಚ್ಛ ಮಾಡಿ ಪರಿಸರದ ಕುರಿತು ಅರಿವು ಮೂಡಿಸುವುದು, ಕುಗ್ರಾಮಗಳಲ್ಲಿ ಕನಿಷ್ಟ ಸೌಕರ್ಯ ಒದಗಿಸುವುದು... ಇವು ದೇಶಭಕ್ತಿ ಕಾರ್ಯಗಳೆಂದಾದರೆ ಚಕ್ರವರ್ತಿ ಸೂಲಿಬೆಲೆ ನಂ. 1 ದೇಶಭಕ್ತ. ರಾಜ್ಯದ ಮಾಜಿ ಮುಖ್ಯಮಂತ್ರಿಗಳೇ, ಪೊಲೀಸ್ ಇಲಾಖೆಯನ್ನು ಪದೇ ಪದೆ ಹೀಯಾಳಿಸಿ, ಶಂಕಿಸಿ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡಬಾರದು ಎಂದು ಬರೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.