ADVERTISEMENT

ಮಂಗಳೂರು ಸಿ.ಡಿ ಬಿಡುಗಡೆ ಸತ್ಯಾಸತ್ಯತೆ : ಬಿಜೆಪಿ ನಾಯಕರಿಗೆ ಎಚ್‌ಡಿಕೆ ತಿರುಗೇಟು

​ಪ್ರಜಾವಾಣಿ ವಾರ್ತೆ
Published 11 ಜನವರಿ 2020, 9:28 IST
Last Updated 11 ಜನವರಿ 2020, 9:28 IST
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ   

ಬೆಂಗಳೂರು: ಮಂಗಳೂರು ಗಲಭೆಯ ಸತ್ಯಾಸತ್ಯತೆ ಕುರಿತ ಸಿಡಿ ಬಿಡುಗಡೆಯ ಬಗ್ಗೆ ಬಿಜೆಪಿಯ ನಾಯಕರು ನೀಡಿರುವ ಪ್ರತಿಕ್ರಿಯೆಗಳಿಗೆ ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿಯವರು ಸರಣಿ ಟ್ವೀಟ್‌ಗಳ ಮೂಲಕ ತಿರುಗೇಟು ನೀಡಿದ್ದಾರೆ.

"ಅದಕ್ಕೆಲ್ಲ ಅರ್ಥ ಇದ್ಯೇನ್ರೀ, ಅದೆಲ್ಲ ಕಟ್ ಆಂಡ್ ಪೇಸ್ಟ್ ವೀಡಿಯೋ" ಎಂದಿದ್ದಾರೆ ಸಿಎಂ. ಸಿ.ಡಿ. ಬಿಡುಗಡೆ ವೇಳೆಯೇ ಇಂತಹ ಬಾಲಿಶತನದ ಪ್ರತಿಕ್ರಿಯೆ ಬಿಟ್ಟು ಬಿಜೆಪಿ ನಾಯಕರಿಂದ ಮತ್ತೇನನ್ನು ನಿರೀಕ್ಷಿಸಲು ಸಾಧ್ಯ? ಎಂದಿದ್ದೆ. ಅದನ್ನು ರುಜುವಾತುಪಡಿಸಿದಿರಿ. ಸಿ.ಡಿ.ಯ ಸತ್ಯಾಸತ್ಯತೆ ಬಗ್ಗೆ ತಜ್ಞರಿಂದ ವರದಿ ತರಿಸಿಕೊಳ್ಳುವ ಧೈರ್ಯ ನಿಮಗಿದೆಯೇ? ಅದಕ್ಕೂ ಮಿಗಿಲಾಗಿ ನಿಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಿ. ನಾನು ಬಿಡುಗಡೆ ಮಾಡಿರುವ ಸಿ.ಡಿ.ಯನ್ನು ನೀವು ಸೃಷ್ಟಿಸಿಕೊಂಡಿರುವಂತೆ 'ಕಟ್ ಅಂಡ್ ಪೇಸ್ಟ್' ಬಿಜೆಪಿ ಸರ್ಕಾರ ಎಂದುಕೊಂಡಿರಾ ಎಂದು ಪ್ರಶ್ನಿಸಿದ್ದಾರೆ.

ಉಪ ಚುನಾವಣೆಯಲ್ಲಿ ಸೋತ ಹತಾಶೆಯಿಂದ ಸ್ಥಿಮಿತ ಕಳೆದುಕೊಂಡ ಕುಮಾರಸ್ವಾಮಿ ಮಂಗಳೂರು ಗಲಭೆ ವಿಡಿಯೊ ಬಿಡುಗಡೆ ಮಾಡಿದ್ದಾರೆ ಎಂದು ಡಿಸಿಎಂ ಲಕ್ಮಣ ಸವದಿ ಆರೋಪಿಸಿದ್ದಾರೆ. ಸರಿ, ಹಾಗಾದರೆ ಸವದಿ ಅದ್ಯಾವ ಸ್ಥಿಮಿತ ಕಳೆದುಕೊಂಡು ಸದನದಲ್ಲಿ ನೀಲಿ ಚಿತ್ರ ನೋಡಿದರು? ಈ ಬಾರಿ ಅವರು ಯಾವ ಚುನಾವಣೆ ಗೆದ್ದಿದ್ದಾರೆ? ಸ್ಥಿಮಿತ ಉಳಿದಿದೆಯೇ ಎಂದು ಸವದಿಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ADVERTISEMENT

ಗಲಭೆಯ ಸಿ.ಡಿ. ಬಿಡುಗಡೆ ಮಾಡಿದ್ದಕ್ಕೆ ಸದಾನಂದಗೌಡ ವ್ಯಂಗ್ಯವಾಡಿ ಸಿ.ಡಿ. ಹಲವರಿಗೆ ರಾಜಕೀಯ ಅಸ್ತಿತ್ವದ ಸ್ವತ್ತು ಎಂದಿದ್ದಾರೆ. ಬಿಜೆಪಿಯಲ್ಲಿ ಸದ್ದು ಮಾಡಿದ ಸಿ.ಡಿ.ಗಳ ಸಂಖ್ಯೆ ಒಂದೆರಡೇ? ಎಲ್ಲ ಸಿ.ಡಿ.ಗಳು ಬಯಲಾದರೆ ಬಿಜೆಪಿಗರು ಬೆತ್ತಲಾಗುತ್ತಾರಷ್ಟೇ. ಸಿ.ಡಿ.ಗಳು ಬಿಜೆಪಿಯ ಸ್ವತ್ತು. ಸಿಡಿ ಬಗ್ಗೆ ಮಾತಾಡುವಾಗ ಸದಾನಂದಗೌಡ ಎಚ್ಚರವಾಗಿರಲಿ ಎಂದು ಕಾಲೆಳೆದಿದ್ದಾರೆ.

ಪೊಲೀಸರು ಗಲಭೆ ಮಾಡುವುದಿಲ್ಲ, ನಿಯಂತ್ರಿಸುತ್ತಾರೆ. ಕುಮಾರಸ್ವಾಮಿ ಕಾಲದಲ್ಲೂ ಅದೇ ಪೋಲೀಸರೇ ಇದ್ದರು ಎಂದಿದ್ದಾರೆ ಗೃಹ ಸಚಿವ. ಬೊಮ್ಮಾಯಿ ಅವರೇ ಅದು ನನ್ನ ಕಾಲ. ಶಾಂತಿ-ಸುವ್ಯವಸ್ಥೆಗಷ್ಟೇ ಪೊಲೀಸರ ಸೇವೆ ಪಡೆಯುತ್ತಿದ್ದೆವು. ಇದು ನಿಮ್ಮ ಕಾಲ. ಗಲಭೆ, ಗುಂಡೇಟಿಗೆ ನೀವು ಪೊಲೀಸರನ್ನು ಬಳಸಿಕೊಳ್ಳುತ್ತಿದ್ದೀರಿ. ನನ್ನ ಕಾಲದಲ್ಲೂ ಇದೇ ಪೊಲೀಸರಿದ್ದರು. ಹೌದು. ಆದರೆ ನನ್ನ ಕಾಲದಲ್ಲಿ ಗಲಭೆಗಳು ಯಾಕೆ ಆಗಲಿಲ್ಲ? ಗೋಲಿಬಾರ್‌ಗಳು ಯಾಕೆ ಆಗಲಿಲ್ಲ? ಇದಕ್ಕೆ ನೀವು ಉತ್ತರಿಸುವಿರಾ? ಎಂದಿದ್ದಾರೆ.

ಮಂಗಳೂರು ಶಾಂತಿಯಿಂದಿದೆ. ಮರಳಿ ಗಲಭೆ ಎಬ್ಬಿಸಿ ಅಲ್ಲಿ ಅಸ್ತಿತ್ವವೇ ಇಲ್ಲದ ತಮ್ಮ ಪಕ್ಷಕ್ಕೆ ನೆಲೆ ಕಲ್ಪಿಸಲು ಕುಮಾರಸ್ವಾಮಿ ಪ್ರಯತ್ನಿಸುತ್ತಿದ್ದಾರೆ ಎಂದು ಸೋದರಿ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಮಂಗಳೂರಿನ ಭಿನ್ನ ಧ್ವನಿಗಳ ಕೊರಳು ಬಿಗಿ ಹಿಡಿದು, ಉಸಿರುಗಟ್ಟಿಸಿ, ಸದ್ದು ಬಾರದಂತೆ ಮಾಡಿರುವುದು ನಿಮ್ಮ ಪ್ರಕಾರ 'ಶಾಂತಿ'ಯೇ? ಮೆಕ್ಕಾಕ್ಕೆ ಹೋದಾಗ ಮುಸಲ್ಮಾನರು ಸೈತಾನನಿಗೆ ಕಲ್ಲು ಹೊಡೆಯುತ್ತಾರೆ. ಪೊಲೀಸರ ಮೇಲೆ ಕಲ್ಲು ತೂರಲು ಅವರೇನು ಸೈತಾನರೇ ಎಂದು ಪ್ರಶ್ನಿಸಿದ್ದಾರೆ. ಹಾಗಾದರೆ ಪೊಲೀಸರು ಕಲ್ಲು ತೂರಾಟ ಮಾಡಿದರಲ್ಲ. ಹೋರಾಟಗಾರರೇನು ಸೈತಾನರೇ? ಉತ್ತರಿಸುವಿರಾ ಶೋಭಾ ಅವರೇ? ಎಂದು ಕೇಳಿದ್ದಾರೆ.

ಮಂಗಳೂರಿನಲ್ಲಿ ನಾನು ರಾಜಕಾರಣ ಮಾಡಬೇಕಿಲ್ಲ. ಅಲ್ಲಿ ರಾಜಕಾರಣ ಮಾಡುತ್ತಿರುವುದು ನೀವು. ಅಲ್ಲಿ ಕೋಮು ಗಲಭೆ ಉಂಟು ಮಾಡುತ್ತಿರುವುದು ನೀವು. ವಾಣಿಜ್ಯ ನಗರಿಯಾಗಬೇಕಿದ್ದ ಮಂಗಳೂರು ಕೋಮು ರಾಜಕಾರಣದ ಕಣವಾಗಿದ್ದು‌ ಬಿಜೆಪಿಯಿಂದ. ಸಮುದ್ರ ತೀರದ ಜಗತ್ತಿನ ಹಲವು ಪ್ರದೇಶಗಳು ವಾಣಿಜ್ಯ ನಗರಿಗಳಾಗಿವೆ. ಅಷ್ಟೇ ಏಕೆ, ಮುಂಬೈ, ಚೆನ್ನೈ, ಕೊಚ್ಚಿ ನಮ್ಮ ದೇಶದ ಉದಾಹರಣೆಗಳು. ಮಂಗಳೂರಿಗೂ ಅಂಥದ್ದೇ ಅವಕಾಶಗಳಿದ್ದವು, ಇದೆ. ದೇಶಕ್ಕೆ ದೊಡ್ಡ ಬ್ಯಾಂಕುಗಳನ್ನು ಕೊಟ್ಟದ್ದು ಇದೇ ಕರಾವಳಿ. ಆದರೆ ನಿಮ್ಮ ಚಿಲ್ಲರೆ ರಾಜಕಾರಣ ಮಂಗಳೂರಿನ ವಾಣಿಜ್ಯಿಕ ಬೆಳವಣಿಗೆಗೆ ಅಡ್ಡಗಾಲಾಗಿದೆ ಎಂದು ದೂರಿದರು.

ಮಂಗಳೂರು ಶಾಂತವಾದರೆ ಅದು ವಾಣಿಜ್ಯಿಕವಾಗಿ ಬೆಳವಣಿಗೆಯಾಗುತ್ತದೆ. ದೇಶಕ್ಕೆ ಮಾದರಿಯಾಗುವ ತನ್ನ ಐತಿಹಾಸಿಕ ಗುಣವನ್ನು ಮುಂದುವರಿಸಿಕೊಂಡು ಹೋಗುತ್ತದೆ. ಶಾಂತಿ ಸ್ಥಾಪನೆಯಾಗಬೇಕಿದ್ದರೆ ಬಿಜೆಪಿ ತೆಪ್ಪಗಿರಬೇಕಷ್ಟೇ. ಮಂಗಳೂರಿನಲ್ಲಿ ನಾನು ರಾಜಕಾರಣ ಮಾಡಬಾರದು ಎನ್ನುತ್ತಾರೆ ಶೋಭಾ. ಆದರೆ, ರಾಜಕೀಯ ಪಕ್ಷವೊಂದರ ಶಾಸಕಾಂಗ ಪಕ್ಷದ ನಾಯಕನಾದ ನಾನು ಮಂಗಳೂರಲ್ಲಿ ಏಕೆ ರಾಜಕಾರಣ ಮಾಡಬಾರದು? ಹಾಗೇನಾದರೂ ನನಗೆ ನಿರ್ಬಂಧವಿದೆಯೇ? ಮಂಗಳೂರಲ್ಲಿ ನಾನೂ ರಾಜಕಾರಣ ಮಾಡುತ್ತೇನೆ. ಆದರೆ ಬಿಜೆಪಿಯಂತಲ್ಲ. ಸಾತ್ವಿಕವಾಗಿ‌ ಎಂದು ತಿರುಗೇಟು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.