ADVERTISEMENT

ಕೈಗಾರಿಕಾ ನೀತಿ ಬದಲಾವಣೆಗೆ ಎಚ್‌ಡಿಕೆ ಚಿತ್ತ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2024, 16:26 IST
Last Updated 22 ಆಗಸ್ಟ್ 2024, 16:26 IST
ಎಚ್‌.ಡಿ. ಕುಮಾರಸ್ವಾಮಿ
ಎಚ್‌.ಡಿ. ಕುಮಾರಸ್ವಾಮಿ   

ಬೆಂಗಳೂರು: ರೋಗಗ್ರಸ್ತ ಸಾರ್ವಜನಿಕ ವಲಯದ ಉದ್ಯಮಗಳನ್ನು (ಪಿಎಸ್‌ಯು) ಶಾಶ್ವತವಾಗಿ ಸ್ಥಗಿತಗೊಳಿಸುವ ನೀತಿಯನ್ನು ಕೇಂದ್ರ ಸರ್ಕಾರ ಅನುಸರಿಸುತ್ತಿದ್ದರೆ, ಭಾರಿ ಕೈಗಾರಿಕಾ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವುಗಳನ್ನು ಪುನಶ್ಚೇತನಗೊಳಿಸುವ ಆಶಯ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಹೊಸ ನೀತಿಯ ಅನ್ವಯ ರೋಗಗ್ರಸ್ತ ಕೈಗಾರಿಕೆಗಳಿಗೆ ಶಾಶ್ವತವಾಗಿ ಬೀಗ ಜಡಿಯುವ ಹಾಗೂ ಅಂತಹ ಉದ್ದಿಮೆಗಳ ಬಂಡವಾಳವನ್ನು ಸಂಪೂರ್ಣ ಹಿಂತೆಗೆಯಲಾಗುತ್ತಿದೆ. ಕುಮಾರಸ್ವಾಮಿ ಕೈಗಾರಿಕಾ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಹಿಂದೂಸ್ಥಾನ್‌ ಮಿಷನ್‌ ಟೂಲ್ಸ್‌ (ಎಚ್‌ಎಂಟಿ), ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ (ವಿಐಎಸ್‌ಎಲ್‌) ಸೇರಿದಂತೆ ಒಂದು ಕಾಲದಲ್ಲಿ ಭಾರತದ ಕೈಗಾರಿಕಾ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಹಲವು ಕೈಗಾರಿಕೆಗಳಿಗೆ ಅಗತ್ಯವಾದ ಮರು ಬಂಡವಾಳ ಹೂಡಿಕೆ ಮಾಡಲು ಚಿಂತನೆ ನಡೆಸಿದ್ದಾರೆ.

‘ಭಾರತದ ಜಿಡಿಪಿಗೆ ಹಿಂದೆಲ್ಲ ಗಣನೀಯ ಕೊಡುಗೆ ನೀಡುತ್ತಿದ್ದ ಹಲವು ಸಾರ್ವಜನಿಕ ವಲಯದ ಉದ್ದಿಮೆಗಳ ಪುನಶ್ಚೇತನಕ್ಕೆ ಅಧಿಕಾರಿಗಳ ಜೊತೆ 50ಕ್ಕೂ ಹೆಚ್ಚು ಸಭೆ ನಡೆಸಿದ್ದೇನೆ. ಎಲ್ಲ ಮಾತುಕತೆ, ಅಂತಿಮ ರೂಪುರೇಷೆ ಸಿದ್ಧವಾದ ನಂತರ ಪ್ರಧಾನಿ ಅವರ ಜೊತೆಗೆ ಚರ್ಚಿಸಲಾಗುವುದು. ಮಹತ್ವದ ಕೈಗಾರಿಕೆಗಳನ್ನು ಆಧುನೀಕರಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಸಚಿವ ಕುಮಾರಸ್ವಾಮಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.