ಬೆಂಗಳೂರು: ಉನ್ನತ ಅಧಿಕಾರಿಗಳ ಆಕ್ಷೇಪದ ನಡುವೆಯೂ ದಕ್ಷಿಣ ಕರ್ನಾಟಕದ ನಾಲ್ಕು ಕಡೆಗಳಲ್ಲಿ ಡಿಸ್ನಿಲ್ಯಾಂಡ್ ಮಾದರಿಯ ಉದ್ಯಾನ ಹಾಗೂ ವಿಹಾರಧಾಮಗಳನ್ನು ಸ್ಥಾಪಿಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಈ ಯೋಜನೆಗಳನ್ನು ಕೈಗೆತ್ತಿಗೊಳ್ಳಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಉನ್ನತ ಮಟ್ಟದ ಸಭೆ ಇತ್ತೀಚೆಗೆ ಒಪ್ಪಿಗೆ ನೀಡಿದೆ. ಗೊರೂರು ಹಾಗೂ ಯಗಚಿಗಳಲ್ಲಿ ಜಲ ಸಾಹಸ, ಮನರಂಜನೆಗಳು, ಕ್ರೀಡೆ ಜತೆಗೆ ಜಿಲ್ಲೆಯ ಸಾಂಸ್ಕೃತಿಕ, ಐತಿಹಾಸಿಕ, ಪ್ರಾಕೃತಿಕ ಹಿನ್ನೆಲೆಯಲ್ಲಿ ದೇಶದಲ್ಲೇ ವಿನೂತನವಾದ ಉದ್ಯಾನಗಳ ನಿರ್ಮಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ.
ಈ ಯೋಜನೆಗಳಿಗೆ ವಿಸ್ತೃತಾ ಯೋಜನಾ ವರದಿ ತಯಾರಿಸುವ ಹೊಣೆಯನ್ನು ಜೈಪುರದ ಕನ್ಸಲ್ಟೆಂಟ್ ಅನೂಪ್ ಎಂಬುವರಿಗೆ ವಹಿಸ
ಲಾಗಿದೆ. ಜಲಸಂಪನ್ಮೂಲ ಇಲಾಖೆಯ ಮೂಲಕ ಅಂದಾಜು ₹720 ಕೋಟಿ ವೆಚ್ಚದಲ್ಲಿ ಯಗಚಿ ಹಾಗೂ ಗೊರೂರು ಉದ್ಯಾನಗಳ ಅನುಷ್ಠಾನ ಮಾಡಲಾಗುತ್ತದೆ. ಉಳಿದ ಯೋಜನೆಗಳನ್ನು ವಿವಿಧ ಇಲಾಖೆಗಳ ಸಹಯೋಗದಲ್ಲಿ ಸಾಕಾರಗೊಳಿಸಲಾಗುತ್ತದೆ. ಖಾಸಗಿ ಸಹಭಾಗಿತ್ವದ ಮೊರೆ ಹೋಗಲು ಮೈತ್ರಿ ಸರ್ಕಾರ ಉದ್ದೇಶಿಸಿದೆ.
‘ಕೆಆರ್‌ಎಸ್ ಉದ್ಯಾನವನ್ನು ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿಪಡಿಸಿದರೆ ಇನ್ನಷ್ಟು ಪ್ರವಾಸಿಗರನ್ನು ಸೆಳೆಯಬಹುದು. ಆದರೆ, ಹಾಸನ ಹಾಗೂ ರಾಮನಗರ ಜಿಲ್ಲೆಗಳಲ್ಲಿ ಉದ್ಯಾನಗಳ ನಿರ್ಮಿಸಿದರೆ ನಿರೀಕ್ಷಿತ ಪ್ರವಾಸಿಗರು ಬರುವುದಿಲ್ಲ. ಇವುಗಳು ವ್ಯರ್ಥ ಯೋಜನೆಗಳಾಗುತ್ತವೆ. ಅದರ ಬದಲು ಸಮಾವೇಶ ಸಭಾಂಗಣ, ಗಾಲ್ಫ್‌ಕೋರ್ಸ್, ತ್ರಿ ಸ್ಟಾರ್ ಹೋಟೆಲ್‌ಗಳನ್ನು ಆರಂಭಿಸಿದರೆ ಜನರು ರಜಾ ದಿನಗಳನ್ನು ಕಳೆಯಲು ಧಾವಿಸುತ್ತಾರೆ’ ಎಂದು ಹಿರಿಯ ಅಧಿಕಾರಿಗಳು ಸಲಹೆ ನೀಡಿದ್ದರು. ಈ ಮಾತನ್ನು ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಒಪ್ಪಿರಲಿಲ್ಲ ಎಂದು ಗೊತ್ತಾಗಿದೆ. ‘ಈ ವರ್ಷದ ಬಜೆಟ್‌ನಲ್ಲಿ ಜಲಸಂಪನ್ಮೂಲ ಇಲಾಖೆಗೆ ₹18,142 ಕೋಟಿ ಹಾಗೂ ಲೋಕೋಪಯೋಗಿ ಇಲಾಖೆಗೆ ₹10,200 ಕೋಟಿ ಅನುದಾನ ಕಾಯ್ದಿರಿಸಲಾಗಿದೆ. ಈ ಯೋಜನೆ
ಗಳು ಬಜೆಟ್‌ನಲ್ಲಿ ಸೇರಿರಲಿಲ್ಲ.
ಹಣಕಾಸು ಇಲಾಖೆಯ ಒಪ್ಪಿಗೆ ಪಡೆದು ಇಲಾಖೆಗಳು ಹೆಚ್ಚುವರಿಯಾಗಿ ಶೇ 5 ವೆಚ್ಚ ಮಾಡಲು ಅವಕಾಶ ಇದೆ. ಆದರೆ, ನಾಲ್ಕು ಯೋಜನೆಗಳ ಮೊತ್ತ ಸಾವಿರ ಕೋಟಿ ದಾಟುತ್ತದೆ. ಇದಕ್ಕೆ ಸಂಪನ್ಮೂಲ ಕ್ರೋಡೀಕರಿಸುವುದು ಹೇಗೆ? ಸಹಭಾಗಿತ್ವ ನೀಡಲು ಖಾಸಗಿಯವರು ಮುಂದೆ ಬರಬೇಕಲ್ಲ’ ಎಂದು ಅಧಿಕಾರಿಯೊಬ್ಬರು ಪ್ರಶ್ನಿಸಿದ್ದಾರೆ.
‘ಕಾರಂಜಾ, ಮಲಪ್ರಭಾ, ಘಟಪ್ರಭಾ, ತುಂಗಭದ್ರಾ, ನಾರಾಯಣಪುರ, ವರದಾ ಜಲಾಶಯಗಳಲ್ಲಿ ಇಂತಹ ಉದ್ಯಾನಗಳು ಇಲ್ಲ. ಇಲ್ಲಿ ಯೋಜನೆಗಳ ಅನುಷ್ಠಾನ ಮಾಡಿದ್ದರೆ ರಾಜ್ಯ ಸರ್ಕಾರಕ್ಕೂ ಕೀರ್ತಿ ಬರುತ್ತಿತ್ತು. ಉತ್ತರ ಕರ್ನಾಟಕದ ಅವಗಣನೆ ಆರೋಪದಿಂದ ಮುಕ್ತರಾಗಬಹುದಿತ್ತು’ ಎಂದು ಹಿರಿಯ ಅಧಿಕಾರಿಯೊಬ್ಬರು ಸಲಹೆ ನೀಡಿದ್ದಾರೆ.
‘ಇಲಾಖೆಗಳಲ್ಲಿ ಸಚಿವ ರೇವಣ್ಣ ಹಸ್ತಕ್ಷೇಪ ವಿಪರೀತವಾಗಿದೆ. ನಮಗೆ ಹಾಸನ ಜಿಲ್ಲೆಯ ಉಸಾಬರಿಯೇ ಬೇಡ’ ಎಂದು ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಡಿಸ್ನಿಲ್ಯಾಂಡ್ ಮಾದರಿ ಅಭಿವೃದ್ಧಿಗೊಳಿಸುವ ಪ್ರಸ್ತಾವ ಕೈಬಿಡಬೇಕು:ಕೆಆರ್‌ಎಸ್ ಜಲಾಶಯ, ಬೃಂದಾವನ ಉದ್ಯಾನವನ್ನು ಡಿಸ್ನಿಲ್ಯಾಂಡ್ ಮಾದರಿ ಅಭಿವೃದ್ಧಿಗೊಳಿಸುವ ಪ್ರಸ್ತಾವ ಕೈಬಿಡಬೇಕು ಎಂದು ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಭಾನುವಾರ ಇಲ್ಲಿ ಒತ್ತಾಯಿಸಿದರು.
ಸುದ್ದಿಗಾರರ ಜೊತೆ ಮಾತನಾಡಿ ‘ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಬೃಂದಾವನ ಅಭಿವೃದ್ಧಿಗೊಳಿಸಿದರೆ ಅಣೆಕಟ್ಟೆಗೆ ಸಮಸ್ಯೆಯಾಗಲಿದೆ. ಯೋಜನೆಗೆ ಕೃಷಿ ಭೂಮಿ ಸ್ವಾಧೀನ, ಹಳ್ಳಿಗಳ ಸ್ಥಳಾಂತರಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ’ ಎಂದರು.
‘ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಜೊತೆಗೂ ಮಾತನಾಡುತ್ತೇನೆ. ಸರ್ಕಾರ ಹಣ ಮಾಡಲು ಈ ಯೋಜನೆ ಜಾರಿಗೊಳಿಸಲು ಹೊರಟಿದೆ’ ಎಂದು ಆರೋಪಿಸಿದರು.
ಸಚಿವರ ಹಾಸನ ಪ್ರೇಮ
l ವೈದ್ಯಕೀಯ ಸಂಸ್ಥೆಯ ಆವರಣದಲ್ಲಿ ₹141.20 ಕೋಟಿ ವೆಚ್ಚದಲ್ಲಿ 450 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆ
l ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ₹50 ಕೋಟಿ.
l ₹474 ಕೋಟಿ ಅಂದಾಜಿನಲ್ಲಿ ನಿರ್ಮಾಣವಾಗುವ 15 ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೇರಿಗೆ ₹50 ಕೋಟಿ.
l ₹16.15 ಕೋಟಿ ವೆಚ್ಚದಲ್ಲಿ ಹೊಳೆನರಸೀಪುರದಲ್ಲಿ ಮಹಿಳಾ ಪಾಲಿಟೆಕ್ನಿಕ್.
l ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ₹18.25 ಕೋಟಿ ವೆಚ್ಚದಲ್ಲಿ ಕ್ಯಾನ್ಸರ್ ಕೇರ್ ಘಟಕ.
l ಹರದನಹಳ್ಳಿಯಲ್ಲಿ ವಸತಿಯುತ ಸರ್ಕಾರಿ ಮಹಿಳಾ ಕಾಲೇಜಿಗೆ rs 15 ಕೋಟಿ.
***
ಎಲ್ಲೆಲ್ಲಿ ಅಭಿವೃದ್ಧಿ ಯೋಜನೆಗಳು ?
l ಹೇಮಾವತಿ ಜಲಾಶಯ ಗೋರೂರು
l ಬೇಲೂರು ಸಮೀಪದ ಯಗಚಿ ಜಲಾಶಯ
l ಚನ್ನರಾಯಪಟ್ಟಣ ಕೆರೆ
l ಚನ್ನಪಟ್ಟಣ ಕೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.