ನವದೆಹಲಿ: ‘ಗಂಡ ಸತ್ತು ಒಂದೆರಡು ತಿಂಗಳಾಗಿಲ್ಲ, ಸುಮಲತಾ ಅವರಿಗೆ ರಾಜಕೀಯ ಬೇಕಿತ್ತಾ’ ಎಂಬ ಹೇಳಿಕೆಯನ್ನು ಸಚಿವ ಎಚ್.ಡಿ. ರೇವಣ್ಣ ಸಮರ್ಥಿಸಿಕೊಂಡಿದ್ದಾರೆ.
ಹಿಂದೂ ಸಂಸ್ಕೃತಿಯ ಪ್ರಕಾರ ಗಂಡ ಸತ್ತವರು ಕೆಲವು ದಿನ ಮನೆಯಿಂದ ಹೊರಬರಬಾರದು ಎಂಬ ನಿಯಮ ಇದೆ. ಅದಕ್ಕೇ ಈ ಮಾತು ಹೇಳಿದೆ ಎಂದು ಅವರು ಹೇಳಿದರು.
ಕ್ಷಮೆ ಕೇಳೋಕೆ ಹುಚ್ಚು ಹಿಡಿದಿದೆಯೇ?: ‘ಆ ಹೇಳಿಕೆ ನೀಡಿದ್ದಕ್ಕೆ ನಾನು ಕ್ಷಮೆ ಕೇಳಲ್ಲ. ಕ್ಷಮೆ ಕೇಳೋಕೆ ಹುಚ್ಚು ಹಿಡಿದಿದೆಯೇ’ ಎಂದು ಅವರು ಪ್ರಶ್ನಿಸಿದರು.
'ನಿಖಿಲ್ ಸ್ಪರ್ಧಿಸಬೇಕು ಎಂಬುದು ಮಂಡ್ಯದ ಜನರ ಮತ್ತು ಕಾರ್ಯಕರ್ತರ ಅಭಿಪ್ರಾಯ. ಮಂಡ್ಯಕ್ಕೆ ನಿಖಿಲ್ ಕೊಡುಗೆ ಏನು ಎಂಬ ಪ್ರಶ್ನೆಯನ್ನು ಕೇಳೋದಾದರೆ, ಸುಮಲತಾ ಅವರು ಮಂಡ್ಯಕ್ಕೆ ಏನು ಮಾಡಿದ್ದಾರೆ ಹೇಳಿ' ಎಂದು ರೇವಣ್ಣ ಕೇಳಿದರು.
‘ನನ್ನ ಹೇಳಿಕೆಗೆ ಅಪಾರ್ಥ ಕಲ್ಪಿಸಬೇಡಿ. ಕೆಟ್ಟ ಭಾವನೆಯಿಂದ ಹೇಳಿಕೆ ನೀಡಿಲ್ಲ. ಸುಮಲತಾ ಹಿಂದೆ ಯಾರಿದ್ದಾರೆ ಎಂಬುದನ್ನು ಸಮಯ ಬಂದಾಗ ಹೇಳುತ್ತೇನೆ’ ಎಂದು ಅವರು ತಿಳಿಸಿದರು.
ಪ್ರಜ್ವಲ್ ಅವರನ್ನು ಹಾಸನದಿಂದ ಸ್ಪರ್ಧಿಸಲು ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡ ಅವರು ಸೂಚಿಸಿದ್ದಾರೆ. ದೇವೇಗೌಡರು ಹಾಸನದಿಂದ ಸ್ಪರ್ಧೆ ಮಾಡಲಿ ಎಂಬುದು ನಮ್ಮ ಆಶಯವಾಗಿತ್ತು ಎಂದು ಅವರು ಹೇಳಿದರು.
ದೇಶದಲ್ಲಿ ನಮ್ಮದೊಂದೇ ಅಪ್ಪ ಮಕ್ಕಳ ಪಕ್ಷವೇ? ಈಗ ಮೊಮ್ಮಕ್ಕಳನ್ನು ಸ್ಪರ್ಧೆಗೆ ಇಳಿಸುತ್ತಿರುವುದು ತಪ್ಪೇ ಎಂದು ಪ್ರಶ್ನಿಸಿದ ಅವರು, ಪ್ರಜ್ವಲ್ ಹಾಸನದಿಂದ ಸ್ಪರ್ಧಿಸಿದರೆ ದೇವೇಗೌಡರು ಬೇರೆ ಕಡೆಯಿಂದ ಸ್ಪರ್ಧಿಸುತ್ತಾರೆ ಎಂದು ವಿವರಿಸಿದರು.
‘1978 ರಿಂದಲೂ ದೇವೇಗೌಡರ ಹಿಂದೆ ಚೀಲ ಹೊತ್ತು ತಿರುಗಿದ್ದೇನೆ. ನನಗೂ ರಾಜಕಾರಣ ಗೊತ್ತು. ಸುಮಲತಾ ಅವರು ಇದುವರೆಗೆ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಈಗ ರಾಜಕೀಯದಲ್ಲಿ ನಟನೆ ಮಾಡಲು ಬಂದಿದ್ದಾರೆ. ಅವರು ಚುನಾವಣೆಯಲ್ಲಿ ಸ್ಪರ್ಧಿಸೋದು ಬೇಡ ಅಂತ ನಾನು ಹೇಳಿಲ್ಲ. ಅವರು ಇನ್ನೂ ನಾಲ್ಕು ಚುನಾವಣೆಗಳಲ್ಲಿ ಸ್ಪರ್ಧಿಸಲಿ’ ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.