ADVERTISEMENT

ಸಂಪುಟ ದರ್ಜೆಯ ಹುದ್ದೆ: ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ನಾಗೇಶ್ ಅಧ್ಯಕ್ಷ

ಸಚಿವ ಸ್ಥಾನ ಹೋದರೂ ಸಂಪುಟ ದರ್ಜೆಯ ಹುದ್ದೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2021, 19:31 IST
Last Updated 13 ಜನವರಿ 2021, 19:31 IST
ಎಚ್‌. ನಾಗೇಶ್
ಎಚ್‌. ನಾಗೇಶ್   

ಬೆಂಗಳೂರು: ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವ ಅಬಕಾರಿ ಸಚಿವ ಎಚ್. ನಾಗೇಶ್ ಅವರನ್ನು ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.

ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಸಿ. ಮುನಿಕೃಷ್ಣ ಅವರನ್ನು ನೇಮಕ ಮಾಡಿ ಹೊರಡಿಸಿದ್ದ ಆದೇಶವನ್ನು ಬುಧವಾರ ರದ್ದುಪಡಿಸಲಾಗಿದೆ. ಮುನಿಕೃಷ್ಣ ಅವರನ್ನು ಮಾರ್ಕೆಟ್‌ ಕಮ್ಯುನಿಕೇಶನ್ ಅಂಡ್ ಅಡ್ವೈರ್ಟೈಸಿಂಗ್‌ ಲಿಮಿಟೆಡ್ ಅಧ್ಯಕ್ಷರಾಗಿ ನೇಮಕ ಮಾಡಲು ಮುಖ್ಯಮಂತ್ರಿ ಅನುಮೋದನೆ ನೀಡಿದ್ದಾರೆ. ಆದೇಶ ಹೊರಬೀಳಬೇಕಿದೆ ಎಂದು ಮೂಲಗಳು ತಿಳಿಸಿವೆ.

ರಾಜೀನಾಮೆಗೆ ಸೂಚನೆ: ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಮುಖ್ಯಮಂತ್ರಿ ಯಡಿಯೂರಪ್ಪ,
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ನಾಗೇಶ್‌ ಅವರಿಗೆ ಸೂಚಿಸಿದರು. ನಾಗೇಶ್‌ ಅವರು ಇದಕ್ಕೆ ವಿರೋಧ ವ್ಯಕ್ತಪಡಿಸಿದರೂ ಅದನ್ನು ಕೇಳಲು ಯಡಿಯೂರಪ್ಪ ತಯಾರಿರಲಿಲ್ಲ.

ADVERTISEMENT

ಸರ್ಕಾರ ಅಸ್ತಿತ್ವಕ್ಕೆ ಬರಲು ತಾವು ಕಾರಣರಾಗಿದ್ದು, ತಮ್ಮನ್ನು ಮುಂದುವರಿಸಬೇಕು ಎಂದು ನಾಗೇಶ್‌ ಪಟ್ಟು ಹಿಡಿದಿದ್ದರು. ಸಚಿವ ಸಂಪುಟ ಸಭೆಯ ಬಳಿಕ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಸಚಿವರಾದ ಎಸ್‌.ಟಿ.ಸೋಮಶೇಖರ್‌, ಡಾ.ಕೆ. ಸುಧಾಕರ್‌. ನಾರಾಯಣಗೌಡ ಅವರು, ‘ನಾಗೇಶ್‌ ರಾಜೀನಾಮೆ ಕೇಳಿರುವುದು ಸರಿಯಲ್ಲ. ಅವರನ್ನು ಮುಂದುವರಿಸಬೇಕು’ ಎಂದು ಮನವಿ ಮಾಡಿದರು. ಅವರ ಮನವಿಗೂ ಮುಖ್ಯಮಂತ್ರಿ ಜಗ್ಗಲಿಲ್ಲ.

‘ನೀವು ರಾಜೀನಾಮೆ ನೀಡಿದರೆ, ಅದಕ್ಕೆ ಸಮಾನಾಂತರ ಹುದ್ದೆಯನ್ನು ನೀಡುತ್ತೇನೆ’ ಎಂದು ಯಡಿಯೂರಪ್ಪ ಅವರು ಭರವಸೆ ನೀಡಿದರು. ಬಳಿಕ ಅದಕ್ಕೆ ನಾಗೇಶ್‌ ಒಪ್ಪಿಗೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ, ಸಚಿವರಾದ ಎಸ್‌.ಟಿ.ಸೋಮಶೇಖರ್, ಡಾ.ಸುಧಾಕರ್‌, ವಿ.ಸೋಮಣ್ಣ ಮುಂತಾದವರು ನಾಗೇಶ್‌ ಮನವೊಲಿಸುವಲ್ಲಿ ಪ್ರಮುಖ ಪಾತ್ರವಹಿಸಿದರು ಎಂದು ಮೂಲಗಳು ಹೇಳಿವೆ.

‘ಸ್ವ ಇಚ್ಛೆಯಿಂದ ರಾಜೀನಾಮೆ ಕೊಡಲು ಮುಂದಾಗಿರುವ ನಾಗೇಶ್‌ ಅವರು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡುವಂತೆ ಮುಖ್ಯಮಂತ್ರಿ ಅವರನ್ನು ವಿನಂತಿಸಿದ್ದರು. ಮನವಿಗೆ ಸ್ಪಂದಿಸಿದ ಯಡಿಯೂರಪ್ಪ ಈ ನೇಮಕಕ್ಕೆ ಅನುಮೋದನೆ ನೀಡಿದ್ದರು’ ಎಂದು ಮುಖ್ಯಮಂತ್ರಿ ಸಚಿವಾಲಯದ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.