ADVERTISEMENT

ಎಚ್. ಎಸ್. ದೊರೆಸ್ವಾಮಿ ನಿಧನ: ನಾಡಿನ ಗಣ್ಯರ ಸಂತಾಪ

​ಪ್ರಜಾವಾಣಿ ವಾರ್ತೆ
Published 26 ಮೇ 2021, 12:00 IST
Last Updated 26 ಮೇ 2021, 12:00 IST
ಎಚ್. ಎಸ್. ದೊರೆಸ್ವಾಮಿ
ಎಚ್. ಎಸ್. ದೊರೆಸ್ವಾಮಿ   

ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಎಚ್. ಎಸ್. ದೊರೆಸ್ವಾಮಿ ಹೃದಯಾಘಾತದಿಂದ ಬೆಂಗಳೂರಿನಲ್ಲಿ ಬುಧವಾರ ಮಧ್ಯಾಹ್ನ ನಿಧನರಾಗಿದ್ದಾರೆ.

ಜಯದೇವ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಹೃದಯ ಸಂಬಂಧಿ ಸಮಸ್ಯೆ ತುತ್ತಾಗಿದ್ದರು. ದೊರೆಸ್ವಾಮಿ ಅವರ ಸಾವಿಗೆ ನಾಡಿನ ಗಣ್ಯರು ಕಂಬನಿ ಮಿಡಿದಿದ್ದಾರೆ.

ದೊರೆಸ್ವಾಮಿ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು, ಸ್ವಾತಂತ್ರ್ಯ ಹೋರಾಟಗಾರರು, ಪತ್ರಕರ್ತರು, ಶತಾಯುಷಿಗಳಾದ ಶ್ರೀ ಹೆಚ್. ಎಸ್. ದೊರೆಸ್ವಾಮಿಯವರು ನಿಧನರಾದ ಸುದ್ದಿ ತಿಳಿದು ಮನಸ್ಸಿಗೆ ತೀವ್ರ ನೋವುಂಟಾಯಿತು. ತಮ್ಮ ಜೀವನದುದ್ದಕ್ಕೂ ಸಮಾಜದ ಏಳಿಗೆಗೆ ದುಡಿದ ಒಬ್ಬ ಮಹಾನ್ ಸಾಮಾಜಿಕ ಹೋರಾಟಗಾರರನ್ನು ಕಳೆದುಕೊಂಡು ನಮ್ಮ ರಾಜ್ಯ ಇಂದು ಬಡವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ಮತ್ತು ಹಿತೈಷಿಗಳಿಗೆ ಈ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಟ್ವೀಟ್ ಮಾಡಿದ್ದಾರೆ.

ADVERTISEMENT

ದೊರೆಸ್ವಾಮಿ ಅವರನ್ನು ನೆನಪಿಸಿಕೊಂಡಿರುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಹಿರಿಯ ಸ್ವಾತಂತ್ರ್ಯ ಸೇನಾನಿ, ಶತಾಯುಷಿ ಎಚ್.ಎಸ್. ದೊರೆಸ್ವಾಮಿಯವರ ನಿಧನ ನನಗೆ ಆಘಾತ ಉಂಟುಮಾಡಿದೆ.‌ ಮನೆ ಹಿರಿಯನನ್ನು ಕಳೆದುಕೊಂಡ ದು:ಖ ನನ್ನದಾಗಿದೆ. ಅವರ ಕುಟುಂಬದ ಸದಸ್ಯರು ಮತ್ತು ಅಪಾರ ಅಭಿಮಾನಿಗಳ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ. ನಮ್ಮನ್ನು ಅಗಲಿ ಹೋದ ಎಚ್.ಎಸ್.ದೊರೆಸ್ವಾಮಿ ಅವರು ನಮ್ಮೆಲ್ಲರ ಆತ್ಮ ಸಾಕ್ಷಿಯಾಗಿದ್ದರು. ತಪ್ಪು ಕಂಡಾಗ ಎಚ್ಚರಿಸಿ, ಸರಿ ಕಂಡಾಗ ಬೆಂಬಲಿಸುತ್ತಿದ್ದ ಮಾರ್ಗದರ್ಶಕರಾಗಿದ್ದರು. ಇಳಿ ವಯಸ್ಸಿನಲ್ಲಿಯೂ ಜಗ್ಗದೆ, ಕುಗ್ಗದೆ ಅನ್ಯಾಯ-ಅಕ್ರಮ‌ ಕಂಡಾಗ ಬೀದಿಗಿಳಿಯುತ್ತಿದ್ದ ಅವರು ಎಲ್ಲರ ಪಾಲಿನ ಸ್ಪೂರ್ತಿಯಾಗಿದ್ದರು ಎಂದು ಟ್ವಿಟರ್‌ನಲ್ಲಿ ಹೇಳಿದ್ದಾರೆ.

ಮತ್ತೊಂದೆಡೆ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಕೂಡ ಟ್ವೀಟ್ ಮಾಡಿ, ದೊರೆಸ್ವಾಮಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಶತಾಯುಷಿ, ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರ ನಿಧನಕ್ಕೆ ತೀವ್ರ ಕಂಬನಿ ಮಿಡಿಯುತ್ತೇನೆ. ಗಾಂಧಿವಾದಿ, ಪ್ರಾತಃಸ್ಮರಣೀಯರು ಹಾಗೂ ನಾಡಿನ ಸಾಕ್ಷಿಪ್ರಜ್ಞೆಯಂತಿದ್ದ ದೊರೆಸ್ವಾಮಿ ಅವರ ನಿಧನದಿಂದ ಶತಮಾನದ ಮಹಾನ್ ಹೋರಾಟಗಾರರನ್ನು ಕಳೆದುಕೊಳ್ಳುವ ಮೂಲಕ ನಾಡು ಹಾಗೂ ದೇಶ ಬಡವಾಗಿದೆ.

ಶತಾಯುಷಿಯಾಗಿದ್ದರೂ ದಣಿವರಿಯದ ಅವರ ಹೋರಾಟದ ಕಿಚ್ಚು ಮತ್ತು ಸಾಮಾಜಿಕ ಬದ್ಧತೆ ಅನನ್ಯ. ಹತ್ತಾರು ಬಾರಿ ಅವರನ್ನು ಭೇಟಿ ಮಾಡಿ ಚರ್ಚಿಸಿ, ಮಾರ್ಗದರ್ಶನ ಮತ್ತು ಆಶೀರ್ವಾದ ಪಡೆದಿದ್ದೇನೆ. ಅದು ನನ್ನ ಭಾಗ್ಯ.

ಇತ್ತೀಚೆಗಷ್ಟೇ ಕೊರೋನಾ ಸೋಂಕಿನಿಂದ ಚೇತರಿಸಿಕೊಂಡಿದ್ದ ದೊರೆಸ್ವಾಮಿ (104) ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದು ನನ್ನ ಮನಸ್ಸಿಗೆ ತೀವ್ರ ನೋವನ್ನುಂಟು ಮಾಡಿದೆ.

ಸ್ವಾತಂತ್ರ್ಯಪೂರ್ವ, ಸ್ವಾತಂತ್ರ್ಯೋತ್ತರ ನಂತರ ಸೆರೆವಾಸ ಅನುಭವಿಸಿದ್ದ ದೊರೆಸ್ವಾಮಿಯವರ ಬದುಕಿನ ಆದರ್ಶ, ಮೌಲ್ಯಗಳು ಎಲ್ಲರಿಗೂ ಸ್ಪೂರ್ತಿ. ಇಂತಹ ಮಹಾನ್ ಚೇತನ ಎರಡು ಶತಮಾನಗಳ ಕಾಲಘಟ್ಟದಲ್ಲಿ ನಮ್ಮೆಲ್ಲರಿಗೂ ಹೋರಾಟದ ಸ್ಪೂರ್ತಿಯ ಸೆಲೆಯಾಗಿ ಮುಂಚೂಣಿಯ ಮಾರ್ಗದರ್ಶಕರಾಗಿದ್ದರು ಎಂಬುದನ್ನು ಅತ್ಯಂತ ವಿನೀತ ಭಾವದಿಂದ ಸ್ಮರಿಸಿಕೊಳ್ಳುತ್ತೇನೆ.

ಮೃತರ ಕುಟುಂಬದ ಸದಸ್ಯರು, ಅವರ ಅಸಂಖ್ಯ ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಎಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.