ಬೆಂಗಳೂರು: ಹ್ಯಾಕರ್ ಶ್ರೀಕೃಷ್ಣನ ಒಂದೇ ಲ್ಯಾಪ್‌ಟಾಪ್‌ನಲ್ಲಿ ಬಿಟ್‌ಕಾಯಿನ್‌ಗಳ ಅಕೌಂಟ್‌ಗೆ ಪ್ರವೇಶಿಸಲು ಬಳಸುವ 76 ಲಕ್ಷ ‘ಪ್ರೈವೇಟ್ ಕೀ’ ಮತ್ತು ಹಲವು ಡಿಜಿಟಲ್ ವ್ಯಾಲೆಟ್‌ಗಳು ಇದ್ದವು ಎಂಬುದನ್ನು ವಿಧಿವಿಜ್ಞಾನ ವಿಶ್ಲೇಷಣಾ ವರದಿ ಬಹಿರಂಗಪಡಿಸಿದೆ!
ಹ್ಯಾಕಿಂಗ್ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರ ಕೋರಿಕೆಯಂತೆ ಸೈಬರ್ ತಂತ್ರಜ್ಞರು ಶ್ರೀಕಿಯ ಲ್ಯಾಪ್‌ಟಾಪ್ ಅನ್ನು ಪರಿಶೀಲನೆಗೆ ಒಳಪಡಿಸಿದ್ದರು. ಆತನ ‘ಕ್ಲೌಡ್ ಅಕೌಂಟ್’ ಒಂದನ್ನು ವಿಶ್ಲೇಷಣೆ ನಡೆಸಿದಾಗ 27 ಇ– ವ್ಯಾಲೆಟ್‌ಗಳು, ಭಾರಿ ಸಂಖ್ಯೆಯ ಪ್ರೈವೇಟ್ ಕೀಗಳು ಹಾಗೂ ವಿಳಾಸಗಳು ಪತ್ತೆಯಾಗಿದ್ದವು. ಇದು, ಬಿಟ್‌ಕಾಯಿನ್ ವಹಿವಾಟಿಗೆ ಬಳಸುವ ‘ಬಿಟ್‌ಕಾಯಿನ್ ಕೋರ್’ ಎಂಬ ತಂತ್ರಾಂಶವನ್ನೇ ಆರೋಪಿ ಹ್ಯಾಕ್ ಮಾಡಿ, ತನ್ನ ಹಿಡಿತಕ್ಕೆ ತೆಗೆದುಕೊಂಡಿದ್ದಿರಬಹುದು ಎಂಬ ಅನುಮಾನಕ್ಕೆ ಕಾರಣವಾಗಿದೆ.
‘ಶ್ರೀಕಿಯ ಅಮೆಜಾನ್ ವೆಬ್ ಸರ್ವೀಸಸ್ ಖಾತೆ ಸೇರಿದಂತೆ ಕೆಲವು ‘ಕ್ಲೌಡ್ ಅಕೌಂಟ್’ಗಳ ವಿಶ್ಲೇಷಣೆ ಮಾಡಲಾಗಿದೆ. ಇಂತಹ ಐದು ಪ್ರಕರಣಗಳಲ್ಲಿ 27 ಇ– ವ್ಯಾಲೆಟ್‌ಗಳು ಹಾಗೂ ಬೃಹತ್ ಸಂಖ್ಯೆಯ ಪ್ರೈವೇಟ್ ಕೀ ಮತ್ತು ವಿಳಾಸಗಳು ಪತ್ತೆಯಾಗಿದ್ದವು. ಸಾರ್ವಜನಿಕ ಇ– ವ್ಯಾಲೆಟ್ ವಿಳಾಸಗಳು, ಪ್ರೈವೇಟ್ ಕೀಗಳು ಮತ್ತು ಬಿಟ್‌ಕಾಯಿನ್ ವಹಿವಾಟಿಗೆ ಬಳಸಿದ ಹಲವು ಐಡಿಗಳನ್ನು ಪತ್ತೆಮಾಡಲಾಗಿತ್ತು’ ಎಂದು ವಿಶ್ಲೇಷಣಾ ವರದಿ ಹೇಳಿದೆ.
ಸೈಬರ್ ಐಡಿ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆ ಆರೋಪಿಯ ಲ್ಯಾಪ್‌ಟಾಪ್ ಅನ್ನು ವಿಶ್ಲೇಷಣೆ ನಡೆಸಿತ್ತು. ಅದರಲ್ಲಿ ಬಿಟ್‌ಕಾಯಿನ್ ವಹಿವಾಟಿಗೆ ಬಳಸಿದ ಐಪಿ ವಿಳಾಸಗಳು, ವ್ಯಾಲೆಟ್ ವಿಳಾಸಗಳು ಇದ್ದವು. ಹೊಸದಾಗಿ ಸೃಷ್ಟಿಸಿದ ಖಾಸಗಿ ಕೀಗಳು ಮತ್ತು ಐಡಿಗಳೂ ಇದ್ದವು ಎಂಬ ಉಲ್ಲೇಖ ವರದಿಯಲ್ಲಿತ್ತು.
ಐದು ಐಪಿ ವಿಳಾಸಗಳಲ್ಲಿ 27 ಬಿಟ್‌ಕಾಯಿನ್ ವ್ಯಾಲೆಟ್‌ಗಳಿಗೆ ಸಂಬಂಧಿಸಿದ ಒಟ್ಟು 76,13,984 ಪ್ರೈವೇಟ್ ಕೀಗಳಿದ್ದವು. ಒಂದು ಐಪಿ ವಿಳಾಸದಲ್ಲಿ 53.37 ಲಕ್ಷ ಪ್ರೈವೇಟ್ ಕೀಗಳಿದ್ದವು. ಉಳಿದಂತೆ ಇತರ ಐಪಿ ವಿಳಾಸಗಳಲ್ಲಿ 10.17 ಲಕ್ಷ, 12.11 ಲಕ್ಷ, 27,218 ಮತ್ತು 19,996 ಕೀಗಳು ಕಂಡುಬಂದಿದ್ದವು. ಆತನ ವ್ಯಾಲೆಟ್‌ಗಳಿಗೆ ಸಂಬಂಧಿಸಿದ 1,15,018 ವಿಳಾಸಗಳಿದ್ದವು ಎಂಬ ಮಾಹಿತಿ ವರದಿಯಲ್ಲಿದೆ
ತಿರುಚಿರುವ ಸಂಶಯ: ತನಿಖಾಧಿಕಾರಿಗಳನ್ನು ದಿಕ್ಕು ತಪ್ಪಿಸಲು ಶ್ರೀಕಿ ಬಿಟ್‌ಕಾಯಿನ್ ಕೋರ್ ತಂತ್ರಾಂಶವನ್ನೇ ಹ್ಯಾಕ್ ಮಾಡಿ ತಿರುಚಿರುವ ಸಾಧ್ಯತೆ ಇದೆ ಎಂಬ ಸಂಶಯವನ್ನು ವಿಶ್ಲೇಷಣಾ ತಂಡ ವ್ಯಕ್ತಪಡಿಸಿದೆ.
‘ಪೊಲೀಸರು 31 ಬಿಟ್‌ಕಾಯಿನ್‌ಗಳನ್ನು ಆರೋಪಿಯ ಖಾತೆಯಿಂದ ವಶಕ್ಕೆ ಪಡೆಯಲು ಪ್ರಯತ್ನಿಸಿದ್ದರು. ಆದರೆ, ವರ್ಗಾವಣೆ ಪ್ರಕ್ರಿಯೆ ಯಶಸ್ವಿಯಾದಂತೆ ಕಂಡರೂ ಪೊಲೀಸ್ ವ್ಯಾಲೆಟ್‌ಗೆ ನಿಜವಾಗಿಯೂ ವರ್ಗಾವಣೆ ಆಗಿರಲಿಲ್ಲ. ವ್ಯಾಲೆಟ್‌ನ ಮೂಲ ಕೋಡ್ ಅನ್ನೇ ಬದಲಿಸಿ, ವ್ಯಾಲೆಟ್‌ನಿಂದ ಹೊರಹೋದ ಬಿಟ್‌ಕಾಯಿನ್‌ಗಳು ಮರಳಿ ಬರುವಂತೆ ಮಾಡಿಕೊಂಡಿರುವ ಸಾಧ್ಯತೆ ಇದೆ’ ಎಂದು ವರದಿಯಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.