ಬೆಂಗಳೂರು: ಪೋಕರ್ ಗೇಮಿಂಗ್ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿದ್ದ ಆರೋಪದ ಮೇಲೆ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ವಿರುದ್ಧ ಸ್ವಯಂಪ್ರೇರಿತವಾಗಿ ದಾಖಲಿಸಿದ್ದ ಪ್ರಕರಣದಲ್ಲಿ ಸಿಸಿಬಿ ಪೊಲೀಸರು, ಆರೋಪ ಸಾಬೀತುಪಡಿಸುವಂತಹ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿರಲಿಲ್ಲ!
ಕಾಟನ್‌ಪೇಟೆ ಠಾಣೆಯಲ್ಲಿ ದಾಖಲಾಗಿದ್ದ ಅಪರಾಧ ಸಂಖ್ಯೆ 153/2020ರಲ್ಲಿ ಬಂಧಿತನಾಗಿದ್ದ ಶ್ರೀಕಿಗೆ ಜಾಮೀನು ಮಂಜೂರು ಒಂದನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮಾಡಿ 2021ರ ಮಾರ್ಚ್ 9ರಂದು ಹೊರಡಿಸಿದ್ದ ಆದೇಶದಲ್ಲಿ ಈ ಅಂಶವನ್ನು ಉಲ್ಲೇಖಿಸಿದ್ದಾರೆ. ‘ತಮ್ಮ ವೆಬ್‌ಸೈಟ್‌ಗಳನ್ನು ಆರೋಪಿಯು ಹ್ಯಾಕ್ ಮಾಡಿದ್ದಾನೆ ಎಂದು ಯಾವುದೇ ವ್ಯಕ್ತಿ ಅಥವಾ ಕಂಪನಿ ದೂರು ಸಲ್ಲಿಸಿರಲಿಲ್ಲ. ಶ್ರೀಕೃಷ್ಣ ಹ್ಯಾಕ್ ಮಾಡಿದ್ದಾನೆ ಎನ್ನಲಾದ ವೆಬ್‌ಸೈಟ್‌ಗಳ ವಿವರವನ್ನು ಪೊಲೀಸರೂ ಒದಗಿಸಿಲ್ಲ’ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಪೋಕರ್ ದಂಗಲ್, ಸ್ಪರ್ಟನ್ ಪೋಕರ್ ಮತ್ತು ಪೋಕರ್ ಸೇಂಟ್ ಎಂಬ ಪೋಕರ್ ಗೇಮಿಂಗ್ ವೆಬ್‌ಸೈಟ್‌ಗಳನ್ನು, ಯೂನಿಕಾಯಿನ್ ಎಂಬ ಕ್ರಿಪ್ಟೋಕರೆನ್ಸಿ ಎಕ್ಸ್‌ಚೇಂಜ್ ಹಾಗೂ ಇತರ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿದ್ದ ಎಂಬ ಆರೋಪ ಶ್ರೀಕಿ ಮೇಲಿದೆ. ವೆಬ್‌ಸೈಟ್ ಮತ್ತು ಸರ್ವರ್‌ಗಳನ್ನು ಹ್ಯಾಕ್ ಮಾಡಿ, ಸುಲಿಗೆ ಮಾಡಿರುವ ದೂರುಗಳೂ ಇವೆ.
ಸಿಸಿಬಿಯ ಸೈಬರ್ ವಿಭಾಗದ ಪೊಲೀಸರು ಶ್ರೀಕಿ ವಿರುದ್ಧದ ಪ್ರಕರಣದಲ್ಲಿ 2021 ರ ಫೆಬ್ರುವರಿ 22ರಂದು ನ್ಯಾಯಾಲಯಕ್ಕೆ ಆರೋಪಪಟ್ಟಿಗಳನ್ನು ಸಲ್ಲಿಸಿದ್ದರು. ಅದರಲ್ಲಿ ಪೆಸಿಫಿಕ್ ಗೇಮಿಂಗ್ ಲಿಮಿಟೆಡ್ ಕಂಪನಿಗೆ ಸೇರಿದ ಪೋಕರ್ ವೆಬ್‌ಸೈಟ್‌ಗಳ ಹ್ಯಾಕಿಂಗ್ ಆರೋಪಕ್ಕೆ ಸಂಬಂಧಿಸಿದ ಪ್ರಕರಣವೂ ಒಂದಾಗಿತ್ತು. ಈ ಪ್ರಕರಣದಲ್ಲಿ ಶ್ರೀಕಿ ಮತ್ತು ಆತನ ನಿಕಟವರ್ತಿ ರಾಬಿನ್ ಖಂಡೇಲ್‌ವಾಲಾ ಎಂಬಾತನ ಕಂಪ್ಯೂಟರ್, ಇತರ ಸಾಧನಗಳನ್ನು ವಿಧಿವಿಜ್ಞಾನ ತಜ್ಞರು ವಿಶ್ಲೇಷಣೆ ನಡೆಸಿದ್ದರು. ಅವುಗಳಲ್ಲಿ 10 ಕ್ಕೂ ಹೆಚ್ಚು ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿ ಸಂಗ್ರಹಿಸಿದ್ದ ಮಾಹಿತಿ ಪತ್ತೆಯಾಗಿತ್ತು ಎಂಬ ಅಂಶ ಆರೋಪಪಟ್ಟಿಯಲ್ಲಿತ್ತು.
ಈ ಪ್ರಕರಣದಲ್ಲಿ ಮಾರ್ಚ್ 9ರಂದು ಶ್ರೀಕಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಏಪ್ರಿಲ್ 7ರಂದು ಎಲ್ಲ ಪ್ರಕರಣಗಳಲ್ಲೂ ಆತನಿಗೆ ಜಾಮೀನು ದೊರಕಿತ್ತು. ಏ.17ರಂದು ಜೈಲಿನಿಂದ ಬಿಡುಗಡೆಯಾಗಿದ್ದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.