ADVERTISEMENT

ಗೋಡಂಬಿ ತಿನ್ನಲು ಕಾವೇರಿ ಸಭೆಗೆ ಹೋಗಬೇಕಿತ್ತಾ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2024, 16:18 IST
Last Updated 15 ಜುಲೈ 2024, 16:18 IST
ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ   

ನವದೆಹಲಿ: ‘ಸರ್ವಪಕ್ಷ ಸಭೆಗೂ ಮುನ್ನ ಕರ್ನಾಟಕದ ಕಾಂಗ್ರೆಸ್‌ ಸರ್ಕಾರವು ತಮಿಳುನಾಡಿಗೆ ನೀರು ಹರಿಸಿದೆ. ಗೋಡಂಬಿ ಹಾಗೂ ಬಾದಾಮಿ ತಿನ್ನಲು ಸರ್ವಪಕ್ಷದ ಸಭೆಗೆ ಹೋಗಬೇಕಿತ್ತಾ ಅಥವಾ ರಾಜ್ಯ ಸರ್ಕಾರಕ್ಕೆ ಶಹಬ್ಬಾಸ್‌ಗಿರಿ ನೀಡಲು ಹೋಗಬೇಕಿತ್ತಾ’ ಎಂದು ಕೇಂದ್ರ ಭಾರಿ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್‌.ಡಿ.ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದರು. 

ಸೋಮವಾರ ಇಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ರೈತರ ಹೆಸರಿನಲ್ಲಿ ಕಬಿನಿಯಿಂದ ತಮಿಳುನಾಡಿಗೆ ನೀರು ಬಿಡಲಾಗಿದೆ. ನೀರು ಬಿಟ್ಟು ಕಾಟಾಚಾರಕ್ಕೆ ಸಭೆ ಕರೆದಿದ್ದಾರೆ’ ಎಂದು ದೂರಿದರು. 

‘ಮಂಡ್ಯದಲ್ಲಿ ಜನತಾ ದರ್ಶನ ಮಾಡಿದಾಗ ಅಧಿಕಾರಿಗಳು ಹಾಜರಾಗದಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಪಾಂಡವಪುರದಲ್ಲಿ ಮತ ಕೊಟ್ಟ ಜನರಿಗೆ ಧನ್ಯವಾದ ಹೇಳಲು ನಾನು ಹೋಗಿದ್ದೆ. ಇದಕ್ಕೂ ರಾಜ್ಯ ಸರ್ಕಾರದ ಅನುಮತಿ ಪಡೆಯಬೇಕಾ. ಯಾವ ಸಂದರ್ಭದಲ್ಲಿ ಯಾವ ಕಾರ್ಯಕ್ರಮಕ್ಕೆ ಹೋಗಬೇಕು ನನಗೆ ಗೊತ್ತಿದೆ’ ಎಂದರು. 

ADVERTISEMENT

‘ಆಂಧ್ರಪ್ರದೇಶದ ವಿಶಾಖಪಟ್ಟಣಕ್ಕೆ ಹೋದಾಗ ಅಲ್ಲಿನ ಮುಖ್ಯಮಂತ್ರಿ ಕರೆ ಮಾಡಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಆದರೆ, ಕರ್ನಾಟಕದ ಮುಖ್ಯಮಂತ್ರಿಯವರು ಕೇಂದ್ರದ ಯೋಜನೆಗಳಿಗೆ ಅಡ್ಡಗಾಲು ಹಾಕುತ್ತಿದ್ದಾರೆ. ದೇವದಾರು ಯೋಜನೆಯನ್ನು ದುರುದ್ದೇಶದಿಂದ ನಿಲ್ಲಿಸಿದ್ದಾರೆ. ಇವರ ರೀತಿಯಲ್ಲಿ ನಾನು ಕಾನೂನುಬಾಹಿರ ಕೆಲಸ ಮಾಡಿಲ್ಲ’ ಎಂದು ಕಿಡಿಕಾರಿದರು. 

‘ನಾನು ಪಾಲಿಕೆಯ ಕಸ ಎತ್ತಿದ್ದೇನೆ. ಸಿನಿಮಾ ಡಬ್ಬಾ ಹೊತ್ತಿದ್ದೇನೆ. ನಮ್ಮ ಕಾಲದಲ್ಲಿ ಸಿ.ಡಿ ಇರಲಿಲ್ಲ. ಕಂಡ ಕಂಡವರ ಆಸ್ತಿ ಕೊಳ್ಳೆ ಹೊಡೆದು ಜೀವನ ಮಾಡಿಲ್ಲ. ಭಾನುವಾರವೂ ಸಭೆ ನಡೆಸಿ ನನ್ನ ವಿರುದ್ಧ ದಾಖಲೆ ಹುಡುಕುತ್ತಿದ್ದಾರೆ. 41 ವರ್ಷದಿಂದ ಕಷ್ಟಪಟ್ಟಿರುವ ಆಸ್ತಿ ನಮ್ಮದು’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.