ADVERTISEMENT

ಚೆನ್ನೈನಲ್ಲಿ ಹಾವೇರಿ ಕೂದಲಿಗೆ ಬೇಡಿಕೆ: ಕೋಟಿ ವಹಿವಾಟಿನ ಕಪ್ಪು ಚಿನ್ನ!

ಕುಟುಂಬಗಳ ಬದುಕಿಗೆ ‘ಕೂದಲು’ ಆಸರೆ | ಚೆನ್ನೈನಲ್ಲಿ ಹಾವೇರಿ ಕೂದಲಿಗೆ ಬೇಡಿಕೆ

ಸಂತೋಷ ಜಿಗಳಿಕೊಪ್ಪ
Published 5 ಅಕ್ಟೋಬರ್ 2024, 5:23 IST
Last Updated 5 ಅಕ್ಟೋಬರ್ 2024, 5:23 IST
ಹಾವೇರಿಯಲ್ಲಿ ಕೂದಲು ಖರೀದಿಸುತ್ತಿರುವ ಹೋಲ್‌ಸೇಲ್ ವ್ಯಾಪಾರಿ ಕಡೆಯ ಯುವಕರು
ಹಾವೇರಿಯಲ್ಲಿ ಕೂದಲು ಖರೀದಿಸುತ್ತಿರುವ ಹೋಲ್‌ಸೇಲ್ ವ್ಯಾಪಾರಿ ಕಡೆಯ ಯುವಕರು   

ಹಾವೇರಿ: ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿಯಲ್ಲಿ ಏಲಕ್ಕಿ ಮಾಲೆಗಳ ವ್ಯಾಪಾರ ಜಗಜ್ಜಾಹೀರ. ಇದರ ನಡುವೆಯೇ ಕೂದಲು ವ್ಯಾಪಾರವೂ ಜೋರಾಗಿದೆ. ಹಾವೇರಿಯ ಹಲವರಿಗೆ ‘ಕಪ್ಪು ಚಿನ್ನ’ವಾಗಿರುವ ಕೂದಲು, ವಾರ್ಷಿಕವಾಗಿ ಕೋಟಿ ಕೋಟಿ ವಟಿವಾಟಿನ ಸದ್ದು ಮಾಡುತ್ತಿದೆ.

ಕೃಷಿ ಪ್ರಧಾನ ಜಿಲ್ಲೆ ಹಾವೇರಿಯಲ್ಲಿ ರೈತಾಪಿ ಕುಟುಂಬಗಳು ಅಧಿಕ ಸಂಖ್ಯೆಯಲ್ಲಿವೆ. ಹಾವೇರಿ, ರಾಣೆಬೆನ್ನೂರು, ಶಿಗ್ಗಾವಿ, ಸವಣೂರು, ರಟ್ಟೀಹಳ್ಳಿ, ಹಾನಗಲ್, ಹಿರೇಕೆರೂರು, ಬ್ಯಾಡಗಿ ಪಟ್ಟಣಗಳಲ್ಲಿ ವ್ಯಾಪಾರಸ್ಥರು, ನೌಕರಸ್ಥರು, ವಿದ್ಯಾರ್ಥಿಗಳು ಹಾಗೂ ಇತರರು ಉಳಿದುಕೊಂಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಜನಸಂಖ್ಯೆಯಿದೆ.

ನಗರ ಹಾಗೂ ಗ್ರಾಮೀಣ ಪ್ರದೇಶಗಳ ಮಹಿಳೆಯರು ನಿತ್ಯವೂ ತಲೆ ಬಾಚಿಕೊಳ್ಳುವ ಹಾಗೂ ಇತರೆ ಸಂದರ್ಭಗಳಲ್ಲಿ ಉದುರುವ ತಮ್ಮ ಕೂದಲುಗಳನ್ನು ಸಂಗ್ರಹಿಸಿಡುತ್ತಿದ್ದಾರೆ. ‘ಕೂದ್ಲಾ... ಪೀನಾ.. ಏರಪೀನಾ...’ ಎಂದು ಕೂಗಿಕೊಂಡು ಮನೆ ಬಾಗಿಲಿಗೆ ಬರುವ ಮಹಿಳೆಯರಿಗೆ ಕೂದಲು ಮಾರುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಹಣ, ಪ್ಲ್ಯಾಸ್ಟಿಕ್ ಸಾಮಗ್ರಿ ಹಾಗೂ ಪೀನಾ ಪಡೆದುಕೊಳ್ಳುತ್ತಿದ್ದಾರೆ.

ADVERTISEMENT

ಮನೆ ಮನೆ ಸುತ್ತಾಡಿ ಸಂಗ್ರಹಿಸಿರುವ ಕೂದಲುಗಳನ್ನು ಒಟ್ಟುಗೂಡಿಸುವ ಮಹಿಳೆಯರು, ನಗರದಲ್ಲಿರುವ ಹೋಲ್‌ಸೇಲ್‌ ವ್ಯಾಪಾರಿಗಳಿಗೆ ಮಾರುತ್ತಿದ್ದಾರೆ. ಅದೇ ವ್ಯಾಪಾರಿಗಳು, ಎಲ್ಲರ ಬಳಿಯಿಂದ ಕೂದಲು ಸಂಗ್ರಹಿಸಿ ನಿತ್ಯವೂ ವಿಶೇಷ ವಾಹನದ ಮೂಲಕ ಚೆನ್ನೈಗೆ ಕಳುಹಿಸುತ್ತಿದ್ದಾರೆ. ಈ ಕಾಯಕದಿಂದ ವ್ಯಾಪಾರಿಗಳು, ನಿತ್ಯವೂ ಲಾಭ ಗಳಿಸುತ್ತಿದ್ದಾರೆ.

ಮನೆ ಮನೆಗೆ ಹೋಗಿ ಕೂದಲು ಸಂಗ್ರಹಿಸುವ ಕುಟುಂಬಗಳು ಜಿಲ್ಲೆಯಲ್ಲಿವೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು, ಚಿಂದಿ ಆಯುವ ಹಾಗೂ ಭಿಕ್ಷೆ ಬೇಡುವ ಜೊತೆಯಲ್ಲಿ ಕೂದಲು ಸಂಗ್ರಹಿಸುವ ಕೆಲಸ ಮಾಡುತ್ತಿವೆ. ಪತಿ, ಪತ್ನಿ, ಮಕ್ಕಳು ಸೇರಿದಂತೆ ಕುಟುಂಬದ ಬಹುತೇಕ ಸದಸ್ಯರು, ಕೂದಲು ಸಂಗ್ರಹದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

ಕೂದಲು ವ್ಯಾಪಾರದಲ್ಲಿ ಪಳಗಿರುವ ಯುವಕರು, ಹೋಲ್‌ಸೇಲ್ ವ್ಯಾಪಾರಿಗಳಾಗಿ ಬೆಳೆದಿದ್ದಾರೆ. ನಿಗದಿತ ಸ್ಥಳದಲ್ಲಿ ತೂಕದ ಯಂತ್ರದ ಸಮೇತ ಅವರು ನಿತ್ಯವೂ ಹಾಜರಿರುತ್ತಾರೆ. ಗ್ರಾಮ ಹಾಗೂ ನಗರದ ಮನೆಗಳಿಂದ ಕೂದಲು ಸಂಗ್ರಹಿಸಿ ತರುವ ಕುಟುಂಬದವರ ಸದಸ್ಯರು, ಯುವಕರ ಕೈಗೆ ಕೂದಲು ಕೊಡುತ್ತಿದ್ದಾರೆ. ಸ್ಥಳದಲ್ಲೇ ಕೂದಲು ತೂಕ ಮಾಡುವ ಯುವಕರು, ಹಣ ನೀಡಿ ಮತ್ತಷ್ಟು ಕೂದಲು ತರುವಂತೆ ಪ್ರೋತ್ಸಾಹ ನೀಡುತ್ತಿದ್ದಾರೆ.

ದಿನಕ್ಕೆ 50 ಕೆ.ಜಿ ಸಂಗ್ರಹ:

‘ಹಾವೇರಿ ಜಿಲ್ಲೆಯಲ್ಲಿ ಹೆಚ್ಚು ಹಳ್ಳಿಗಳಿವೆ. ಪ್ರತಿಯೊಂದು ಹಳ್ಳಿ ಹಾಗೂ ನಗರಗಳಲ್ಲಿ ಸಂಚರಿಸುವ ಮಹಿಳೆಯರು, ಕೂದಲು ಸಂಗ್ರಹಿಸಿ ತರುತ್ತಿದ್ದಾರೆ. ನಿತ್ಯವೂ ಗರಿಷ್ಠ 50 ಕೆ.ಜಿ ಕೂದಲು ಸಂಗ್ರಹವಾಗುತ್ತಿದೆ. ಗದಗ, ದಾವಣಗೆರೆ, ಧಾರವಾಡ, ಉತ್ತರ ಕನ್ನಡ ಜಿಲ್ಲೆಯಿಂದಲೂ ಇಲ್ಲೀಗೆ ಕೂದಲು ತರುತ್ತಾರೆ’ ಎಂದು ನಾಗೇಂದ್ರನಮಟ್ಟಿಯಲ್ಲಿ ವಾಸವಿರುವ ಕುಟುಂಬದ ಸದಸ್ಯರೊಬ್ಬರು ಹೇಳಿದರು.

‘ಹಲವು ವರ್ಷಗಳಿಂದ ಕೂದಲು ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದೇವೆ. ನಮ್ಮ ತಂದೆ–ತಾಯಿ ಈ ವ್ಯಾಪಾರ ಮಾಡುತ್ತಿದ್ದರು. ಈಗ ನಾವೂ ಮಾಡುತ್ತಿದ್ದೇವೆ. ಜನರು ನಮ್ಮನ್ನು ನೋಡಿದರೆ, ಚಿಂದಿ ಆಯುವವರು ಹಾಗೂ ಭಿಕ್ಷೆ ಬೇಡುವವರು ಎನ್ನುತ್ತಾರೆ. ಆದರೆ, ಕೂದಲು ನಮಗೆ ಒಳ್ಳೆಯ ಲಾಭ ತಂದುಕೊಡುತ್ತಿದೆ. ಹೆಚ್ಚು ಹಳ್ಳಿ ಸುತ್ತಾಡಿದಷ್ಟು ಹೆಚ್ಚು ಲಾಭ ಸಿಗುತ್ತದೆ’ ಎಂದು ಅವರು ತಿಳಿಸಿದರು.

‘ನಾನು, ನನ್ನ ಪತ್ನಿ, ಇಬ್ಬರು ಮಕ್ಕಳು ನಿತ್ಯವೂ ಊರೂರು ಅಲೆಯುತ್ತೇವೆ. ಕೂದಲು ಸಂಗ್ರಹಿಸಿ ತಂದು ಮಾರುತ್ತೇವೆ. ಅದಕ್ಕೆ ಪ್ರತಿಯಾಗಿ ಕೆಲವರಿಗೆ ಹಣ ನೀಡುತ್ತೇವೆ. ಹಲವರಿಗೆ, ಪರ್ಯಾಯ ವಸ್ತುಗಳನ್ನು ಕೊಡುತ್ತೇವೆ’ ಎಂದು ಮಾಹಿತಿ ನೀಡಿದರು.

ಕೆ.ಜಿ.ಗೆ ₹ 6 ಸಾವಿರ ದರ:

‘ಹಳ್ಳಿಗಳಿಂದ ತಂದ ಕೂದಲುಗಳನ್ನು ಹಾವೇರಿಯ ಕೆಲ ನಿಗದಿತ ಸ್ಥಳಗಳಲ್ಲಿ ಹೋಲ್‌ಸೇಲ್‌ ವ್ಯಾಪಾರಿಗಳಿಗೆ ಮಾರುತ್ತೇವೆ. ಸದ್ಯ ನಮಗೆ, ಪ್ರತಿ ಕೆ.ಜಿ. ಕೂದಲಿಗೆ ₹ 6,000ದಿಂದ ₹ 6,500 ನೀಡುತ್ತಿದ್ದಾರೆ. ಅವರು, ಕೂದಲನ್ನು ಚೆನ್ನೈಗೆ ಕಳುಹಿಸಿ ಹೆಚ್ಚಿನ ದರಕ್ಕೆ ಮಾರುತ್ತಿದ್ದಾರೆ’ ಎಂದು ಗುತ್ತಲದಲ್ಲಿ ವಾಸವಿರುವ ಕುಟುಂಬದ ಸದಸ್ಯ ಲಕ್ಷ್ಮಣ ‘ಪ್ರಜಾವಾಣಿ’ಗೆ ಹೇಳಿದರು.

‘ಹಾವೇರಿಯಲ್ಲಿ ದಿನಕ್ಕೆ 50 ಕೆ.ಜಿ.ಯಷ್ಟು ಕೂದಲು ಸಂಗ್ರಹವಾಗುತ್ತದೆ. ಪ್ರತಿ ಕೆ.ಜಿ.ಗೆ ₹ 6,500 ಬೆಲೆ ನೀಡಿದರೆ, 50 ಕೆ.ಜಿ.ಗೆ ₹ 3.25 ಲಕ್ಷವಾಗುತ್ತದೆ. ಕೂದಲು ವ್ಯಾಪಾರ ಇದೇ ರೀತಿಯಿದ್ದರೆ, ತಿಂಗಳಿಗೆ ₹ 1 ಕೋಟಿಗೂ ಹೆಚ್ಚು ವಹಿವಾಟು ಆಗುತ್ತದೆ. ವಾರ್ಷಿಕ ಲೆಕ್ಕದಲ್ಲಿ ವ್ಯಾಪಾರ ಕೋಟಿ ಕೋಟಿ’ ಎಂದು ಮಾಹಿತಿ ನೀಡಿದರು.

‘10 ಹೋಲ್‌ಸೇಲ್ ವ್ಯಾಪಾರಿಗಳು’

‘ಹಾವೇರಿ ಜಿಲ್ಲೆಯಲ್ಲಿ ಕೆಲ ವರ್ಷಗಳ ಹಿಂದೆ ಒಬ್ಬರೇ ಹೋಲ್‌ಸೇಲ್ ವ್ಯಾಪಾರಿ ಇದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕೂದಲು ವ್ಯಾಪಾರ ಲಾಭದಾಯಕ ಎಂಬುದು ಎಲ್ಲರಿಗೂ ಗೊತ್ತಾಗುತ್ತಿದೆ. ಹೀಗಾಗಿ ಸದ್ಯ ಹಾವೇರಿಯಲ್ಲಿ 10 ಮಂದಿ ಹೋಲ್‌ಸೇಲ್ ವ್ಯಾಪಾರ ಮಾಡುತ್ತಿದ್ದಾರೆ’ ಎಂದು ವ್ಯಾಪಾರಿಯೊಬ್ಬರ ಬಳಿ ಕೆಲಸ ಮಾಡುತ್ತಿರುವ ಯುವಕರೊಬ್ಬರು ಹೇಳಿದರು.

‘ಮನೆಯಿಂದ ಸಂಗ್ರಹಿಸಿ ತರುವ ಕೂದಲು ಖರೀದಿಸಿದ ನಂತರ ಎರಡು ವಿಭಾಗದಲ್ಲಿ ಕೂದಲು ಬೇರ್ಪಡಿಸಲಾಗುತ್ತದೆ. ಅದೇ ಕೂದಲು ಬಂಡಲ್‌ಗಳನ್ನು ವಾಹನದ ಮೂಲಕ ಚೆನ್ನೈಗೆ ಕಳುಹಿಸಲಾಗುತ್ತದೆ. ಅಲ್ಲಿಯ ವ್ಯಾಪಾರಿಗಳು ಕೂದಲುಗಳನ್ನು ಬೇರ್ಪಡಿಸಿ ಸಂಸ್ಕರಿಸಿ ಪರ್ಯಾಯ ಉತ್ಪನ್ನಗಳನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ’ ಎಂದು ತಿಳಿಸಿದರು.

‘ವ್ಯಾಪಾರಿಗಳ ಮಧ್ಯೆ ಪೈಪೋಟಿ ಶುರುವಾಗಿದೆ. ಕೆಲವರು ನಿಗದಿತ ಹೆಚ್ಚು ಹಣ ಕೊಟ್ಟು ಕೂದಲು ಖರೀದಿಸುತ್ತಿದ್ದಾರೆ. ಕೂದಲು ಸಂಗ್ರಹಿಸಿ ತರುವವರಿಗೆ ಹೆಚ್ಚು ಹಣ ಸಿಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.