ಬೆಂಗಳೂರು: ಕೋವಿಡ್‌ಸೋಂಕಿತರಾಗಿ ಚೇತರಿಸಿಕೊಂಡವರಿಗೆ ಕೆಲ ತಿಂಗಳ ಬಳಿಕ ಕೂದಲು ಉದುರುವಿಕೆ ಸಮಸ್ಯೆ ಕಾಣಿಸಿಕೊಳ್ಳಲು ಆರಂಭಿಸಿದೆ. ಕೋವಿಡ್ ಹಾಗೂ ಕೂದಲು ಉದುರುವಿಕೆಗೆ ಪರಸ್ಪರ ಸಂಬಂಧವಿದೆ ಎನ್ನುವುದು ಸಂಸ್ಥೆಯೊಂದರ ಅಧ್ಯಯನದಿಂದ ದೃಢಪಟ್ಟಿದೆ.
ಇಲ್ಲಿನಹೇರ್‌ಲೈನ್ ಇಂಟರ್‌ನ್ಯಾಷನಲ್ ರಿಸರ್ಚ್ ಆ್ಯಂಡ್ ಟ್ರೀಟ್‌ಮೆಂಟ್ ಸೆಂಟರ್ ಈ ಬಗ್ಗೆ ಅಧ್ಯಯನ ನಡೆಸಿದೆ. 2020ರ ಜುಲೈನಿಂದ 2022ರ ಜೂನ್ ಅವಧಿಯಲ್ಲಿ ಈ ಕೇಂದ್ರಕ್ಕೆ 2,525 ಮಂದಿ ಕೂದಲು ಉದುರುವಿಕೆ ಸಮಸ್ಯೆಗೆ ಚಿಕಿತ್ಸೆಗಾಗಿ ಭೇಟಿ ನೀಡಿದ್ದರು. ಇವರಲ್ಲಿ ಶೇ 80 ರಷ್ಟು ಮಂದಿ ಕೋವಿಡ್ ಪೀಡಿತರಾಗಿ ಚೇತರಿಸಿಕೊಂಡವರಾಗಿದ್ದಾರೆ.
ಅಧ್ಯಯನಕ್ಕೆ ಒಳಪಟ್ಟವರಲ್ಲಿ ಶೇ 70 ರಷ್ಟು ಮಂದಿ 40 ವರ್ಷದೊಳಗಿನವರಾಗಿದ್ದಾರೆ. ಅಧ್ಯಯನಕ್ಕೆ ಒಳಪಟ್ಟ ಮಹಿಳೆಯರಲ್ಲಿ ಶೇ 90 ರಷ್ಟು ಮಂದಿಯಲ್ಲಿ ಕೂದಲು ಉದುರುವಿಕೆ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿದೆ.
ಪುರುಷರಲ್ಲಿ ಶೇ 85ರಷ್ಟು ಮಂದಿಯ ನೆತ್ತಿಯ ಭಾಗದಲ್ಲಿ ಕೂದಲು ಉದುರಿವೆ. ಐಟಿ ಕಂಪನಿ ಉದ್ಯೋಗಿಗಳು, ಪ್ರಾಧ್ಯಾಪಕರು, ಬ್ಯಾಂಕ್ ಉದ್ಯೋಗಿಗಳು, ಗೃಹಿಣಿಯರು, ಉದ್ಯಮಿಗಳು, ವಿದ್ಯಾರ್ಥಿಗಳು, ಸರ್ಕಾರಿ ಉದ್ಯೋಗಿಗಳು ಸೇರಿ ಬಹುತೇಕ ಎಲ್ಲ ವೃತ್ತಿಯವರಿಗೂ ಈ ಸಮಸ್ಯೆ ಕಾಡಿದೆ.
3 ತಿಂಗಳ ಬಳಿಕ ಸಮಸ್ಯೆ:‘ಕೋವಿಡ್‌ನಿಂದ ವ್ಯಕ್ತಿ ಬಳಲಿದಾಗ ಉಂಟಾಗುವ ಮಾನಸಿಕ ಹಾಗೂ ದೈಹಿಕ ಒತ್ತಡದಿಂದ ಬೆಳವಣಿಗೆಯ ಹಂತದಲ್ಲಿರುವ ಕೂದಲುಗಳು ನಿತ್ರಾಣದ ಹಂತಕ್ಕೆ ಹೋಗುತ್ತವೆ. ಮೂರು ತಿಂಗಳ ಬಳಿಕ ಅವು ಉದುರಲು ಪ್ರಾರಂಭಿಸುತ್ತವೆ’ ಎಂದು ಕೇಂದ್ರದ ಚರ್ಚರೋಗ ತಜ್ಞೆಡಾ. ಕಲಾ ವಿಮಲ್ ತಿಳಿಸಿದರು.
‘ಕೋವಿಡ್‌ನಿಂದ ದೇಹದಲ್ಲಿ ಪೋಷಕಾಂಶದ ಕೊರತೆ ಉಂಟಾಗುತ್ತದೆ. ಇದು ಕೂದಲಿನ ಮೇಲೆ ಪರಿಣಾಮ ಬೀರುತ್ತದೆ.ಸೋಂಕಿನಿಂದ ಚೇತರಿಸಿಕೊಂಡವರಲ್ಲಿ ಎರಡು ಹಂತದಲ್ಲಿ ಕೂದಲು ಉದುರುತ್ತದೆ. ಇದಕ್ಕೆ ಪ್ಲೇಟ್‌ಲೆಟ್ ರಿಚ್ ಪ್ಲಾಸ್ಮಾ ಸೇರಿ ವಿವಿಧ ಚಿಕಿತ್ಸೆಗಳು ಕೂಡ ಇವೆ’ ಎಂದು ತಿಳಿಸಿದರು.
9 ತಿಂಗಳ ಬಳಿಕ ಬೆಳವಣಿಗೆ
‘ಕೂದಲು ಚಕ್ರದಲ್ಲಿ ಅನಾಜೆನ್, ಕ್ಯಾಟಜೆನ್ ಮತ್ತು ಟೆಲೋಜೆನ್ ಎಂಬಮೂರು ಹಂತಗಳಿವೆ.ಟೆಲೋಜೆನ್ ಸುಮಾರು 100 ದಿನಗಳವರೆಗೆ ಇರುವ ವಿಶ್ರಾಂತಿ ಹಂತ. ಕೋವಿಡ್ ಪೀಡಿತರಾದಾಗ ಕೂದಲಿನ ಹೆಚ್ಚಿನ ಎಳೆಗಳು ಅಕಾಲಿಕವಾಗಿ ಟೆಲೋಜೆನ್ ಅಥವಾ ವಿಶ್ರಾಂತಿ ಹಂತವನ್ನು ತಲುಪುತ್ತವೆ. ಈ ವೇಳೆ ಕೂದಲು ಉದುರುತ್ತದೆ. ಹೊಸ ಕೂದಲು ಬೆಳೆಯಲು 9ರಿಂದ 12 ತಿಂಗಳು ಬೇಕಾಗುತ್ತದೆ’ ಎಂದು ಡಾ. ಕಲಾ ವಿಮಲ್ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.