ADVERTISEMENT

ತೇಜಸ್‌ಗೆ ‘ತೇಜೋ ಬಲ’ ತುಂಬಲು ಎಚ್‌ಎಎಲ್ ಯತ್ನ

ವಿದೇಶಿ ಪಾಲುದಾರಿಕೆಯಲ್ಲಿ ‘ಕಾವೇರಿ’ ಎಂಜಿನ್‌ ಇನ್ನಷ್ಟು ಸುಧಾರಣೆಗೆ ಡಿಆರ್‌ಡಿಒ ಚಿಂತನೆ

ಎಸ್.ರವಿಪ್ರಕಾಶ್
Published 6 ಸೆಪ್ಟೆಂಬರ್ 2021, 2:53 IST
Last Updated 6 ಸೆಪ್ಟೆಂಬರ್ 2021, 2:53 IST
 ಸ್ವದೇಶಿ ಹಗುರ ಯುದ್ಧ ವಿಮಾನ ‘ತೇಜಸ್‌’
ಸ್ವದೇಶಿ ಹಗುರ ಯುದ್ಧ ವಿಮಾನ ‘ತೇಜಸ್‌’    

ಬೆಂಗಳೂರು: ಸ್ವದೇಶಿ ಹಗುರ ಯುದ್ಧ ವಿಮಾನ ‘ತೇಜಸ್‌’ ಇನ್ನೂ 99 ಎಂಜಿನ್‌ಗಳ ಖರೀದಿಗೆ ಜನರಲ್‌ ಎಲೆಕ್ಟ್ರಿಕ್‌ (ಜಿಇ) ಜತೆಗೆ ಎಚ್‌ಎಎಲ್‌ ಒಪ್ಪಂದ ಮಾಡಿಕೊಂಡಿದೆ. ಆದರೆ, ಈ ಯುದ್ಧ ವಿಮಾನಕ್ಕೆ ಅಪ್ಪಟ ಸ್ವದೇಶಿ ನಿರ್ಮಿತ ಎಂಜಿನ್ (ಕಾವೇರಿ) ಅಳವಡಿಸಬೇಕು ಎಂಬ ಬಹುಕಾಲದ ಕನಸು ನನಸಾಗುವ ಸಾಧ್ಯತೆ ಸದ್ಯಕ್ಕೆ ಇಲ್ಲ.

ಆದರೆ, ವಿದೇಶಿ ಪಾಲುದಾರಿಕೆ ಮೂಲಕ ‘ಕಾವೇರಿ’ ಎಂಜಿನ್‌ ಅಭಿವೃದ್ಧಿ ಯೋಜನೆಯನ್ನು ಮುನ್ನಡೆಸಲು ಡಿಆರ್‌ಡಿಒ ಮನಸ್ಸು ಮಾಡಿದ್ದು, ಇದರಿಂದ ‘ತೇಜಸ್‌’ಗೆ ಅಗತ್ಯ ‘ತೇಜೋ’ ಬಲ ಸಿಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ.

ಲಿಂಗಣ್ಣ

2001 ರಿಂದಲೂ ‘ತೇಜಸ್‌’ಗೆ ಅಮೆರಿಕದ ಜಿಇ ನಿರ್ಮಿತ ಎಫ್‌ 404–ಐಎನ್‌ 20 ಎಂಜಿನ್‌ ಅನ್ನೇ ಬಳಸಲಾಗುತ್ತಿದೆ. ಇದೀಗ ಎಚ್‌ಎಎಲ್‌ ದೊಡ್ಡ ಪ್ರಮಾಣದಲ್ಲಿ ಅಂದರೆ 99 ಎಂಜಿನ್‌ಗಳನ್ನು ಖರೀದಿಸುತ್ತಿದ್ದು, ಇದರ ಮೊತ್ತ ₹5,375 ಕೋಟಿ. ರಕ್ಷಣಾ ಇಲಾಖೆ 83 ತೇಜಸ್‌ ಮಾರ್ಕ್‌ 1 ಎ ಖರೀದಿಗೆ ಆದೇಶ ನೀಡಿದ್ದು, ಇದರ ಮೊತ್ತ ₹45,696 ಕೋಟಿ.

ADVERTISEMENT

ಮೋದಿ ಸರ್ಕಾರ ‘ಆತ್ಮನಿರ್ಭರ್‌’ ಮಂತ್ರ ಜಪಿಸುತ್ತಿರುವಾಗಲೇ ‘ಕಾವೇರಿ’ ಎಂಜಿನ್‌ನ ಅಭಿವೃದ್ಧಿಯ ಬಗ್ಗೆ ಪ್ರಶ್ನೆಗಳು ಏಳಲಾರಂಭಿಸಿವೆ. ವಿಮಾನಗಳಿಗೆ ಜೆಟ್‌ ಎಂಜಿನ್‌ ಅಭಿವೃದ್ಧಿಪಡಿಸುವುದು ವಾಯುಯಾನ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ. ದೇಶಿ ನಿರ್ಮಿತ ಯುದ್ಧ ವಿಮಾನಕ್ಕೆ ಸ್ವದೇಶಿ ಎಂಜಿನ್‌ ಇರಬೇಕು ಎಂಬ ಆಶಯದೊಂದಿಗೆ, 80 ರ ದಶಕದಷ್ಟು ಹಳೆಯ ಕಾವೇರಿ ಎಂಜಿನ್‌ ಯೋಜನೆಗೆ ಇನ್ನಷ್ಟು ವೇಗ ನೀಡಲಾಗಿತ್ತು. ಆದರೆ, ನಿರೀಕ್ಷೆ ಹುಸಿಯಾಗಿದ್ದರಿಂದ ಜಿ.ಇ ಎಂಜಿನ್‌ಗಳನ್ನೇ ನೆಚ್ಚಿಕೊಳ್ಳಬೇಕಾಯಿತು ಎನ್ನುತ್ತಾರೆ ತಜ್ಞರು.

ಡಿಆರ್‌ಡಿಒ ಎಂಜಿನ್‌ ಉತ್ಪಾದನೆಯ ಕಾರ್ಯವನ್ನು ಗ್ಯಾಸ್‌ ಟರ್ಬೈನ್‌ ರೀಸರ್ಚ್‌ ಎಸ್ಟಾಬ್ಲಿಷ್‌ಮೆಂಟ್‌ಗೆ ವಹಿಸಿತ್ತು. ಈ ಸಂಸ್ಥೆ ಮೂರು ದಶಕಗಳ ಸುದೀರ್ಘ ಅವಧಿಯಲ್ಲಿ ಎಂಜಿನ್‌ ಅಭಿವೃದ್ಧಿಪಡಿಸಿದರೂ ವಿಶ್ವದ ಅತ್ಯಂತ ಹಗುರ ಯುದ್ಧ ವಿಮಾನ ಎನಿಸಿರುವ ‘ತೇಜಸ್‌’ನ ಅಗತ್ಯಕ್ಕೆ ಅನುಗುಣವಾಗಿ ಇರಲಿಲ್ಲ. ಹೀಗಾಗಿ ವಿದೇಶಿ ಎಂಜಿನ್‌ ಅನ್ನೇ ಬಳಸಿ ಹಾರಾಟ ನಡೆಸಬೇಕಾಯಿತು.

ಎಂಜಿನ್‌ನ ಅಭಿವೃದ್ಧಿಯ ಕೆಲವು ನಿರ್ದಿಷ್ಟ ಹಂತಗಳಲ್ಲಿ ವಿದೇಶಿ ಪಾಲುದಾರಿಕೆ ಅಗತ್ಯವಿದೆ. ಆರಂಭದಿಂದಲೂ ಡಿಆರ್‌ಡಿಒ ಇಂತಹ ಪಾಲುದಾರಿಕೆಗೆ ಸಮ್ಮತಿ ಸೂಚಿಸಿರಲಿಲ್ಲ. ಇದೀಗ ತನ್ನ ಪಟ್ಟನ್ನು ಸಡಿಲಿಸಿದ್ದು, ವಿದೇಶಿ ಪಾಲುದಾರಿಕೆಗೆ ಆಸಕ್ತಿ ತೋರಿದೆ. ರಷ್ಯಾ ಅಲ್ಲದೆ, ರೋಲ್ಸ್‌ ರಾಯ್ಸ್‌ ಕೂಡ ಭಾರತದ ಜತೆ ಸಹಭಾಗಿತ್ವಕ್ಕೆ ಸಿದ್ಧವಾಗಿವೆ. ಎಲ್‌ಸಿಎಗೆ 90 ಕೆ ಮತ್ತು ಎಎಂಸಿಎಗೆ 110 ಕೆ ಥ್ರಸ್ಟ್‌ನ ಅಗತ್ಯವಿದೆ. ರೋಲ್ಸ್‌ ರಾಯ್ಸ್‌ ಜೊತೆಗಿನ ಸಹಭಾಗಿತ್ವ ಈ ಕೊರತೆಯನ್ನು ನೀಗಬಲ್ಲದು ಎಂದು ಮೂಲಗಳು ತಿಳಿಸಿವೆ.

‘ಎಂಜಿನ್‌ ನಿರ್ಮಾಣ ಅತಿ ಸಂಕೀರ್ಣ’
’ಜೆಟ್‌ ಎಂಜಿನ್‌ ಒಂದು ಕಾಂಪ್ಯಾಕ್ಟ್‌ ಗ್ಯಾಸ್‌ ಟರ್ಬೈನ್‌ ಆಗಿದ್ದು, ಇದು ವಿಮಾನ ಮೇಲಕ್ಕೆ ಹಾರಲು ಬೇಕಾದ ಶಕ್ತಿಯನ್ನು ಉತ್ಪಾದಿಸುತ್ತದೆ. ಎಂಜಿನ್‌ ಅನ್ನು ಐದು ಪ್ರಮುಖ ಭಾಗಗಳಿಂದ ತಯಾರಿಸಲಾಗುತ್ತದೆ. ಫ್ಯಾನ್‌, ಕಂಪ್ರೆಷನರ್‌, ಕಂಬಶನ್‌, ಟರ್ಬೈನ್‌, ಮಿಕ್ಸರ್ ಮತ್ತು ನಾಝಲ್. ಇಲ್ಲಿ ಉತ್ಪತ್ತಿ ಆಗುವ ಒತ್ತಡವು ಶಕ್ತಿಯುತವಾಗಿದ್ದು, ಸುಮಾರು 6 ಸಾವಿರ ಗಂಟೆಯವರೆಗೆ ಶಾಖ ತಡೆದುಕೊಳ್ಳುವ ವಿಶೇಷ ಲೋಹದ ಅಗತ್ಯವಿರುತ್ತದೆ’ ಎನ್ನುತ್ತಾರೆಎಡಿಡಿ ಎಂಜಿನಿಯರಿಂಗ್ ಇಂಡಿಯಾ ಲಿಮಿಟೆಡ್ ನಿರ್ದೇಶಕ ಗಿರೀಶ್ ಲಿಂಗಣ್ಣ.

ರಷ್ಯಾದ ಸೆಂಟ್ರಲ್‌ ಇನ್ಸ್‌ಟಿಟ್ಯೂಟ್‌ ಆಫ್ ಏವಿಯೇಷನ್‌ ಮೋಟರ್ಸ್‌(ಸಿಐಎಎಂ) ನೆರವಿನಿಂದ 2010 ರಲ್ಲಿ ನಡೆಸಿದ ಎತ್ತರದ (ಆಲ್ಟಿಟ್ಯೂಡ್‌) ಹಾರಾಟ ಪರೀಕ್ಷೆಯಲ್ಲಿ ಕಾವೇರಿ ತೇರ್ಗಡೆ ಹೊಂದಿದೆ. ರಷ್ಯಾದ ಗ್ರೊಮೊವ್‌ನಲ್ಲಿ ಈ ಎಂಜಿನ್‌ನೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲ 20 ಸಾವಿರ ಅಡಿಗಳಷ್ಟು ಎತ್ತರದಲ್ಲಿ ಹಾರಾಟ ನಡೆಸಿತು. 2021 ರಲ್ಲಿ ಡಿಆರ್‌ಡಿಒ ಸಿಂಗಲ್‌ ಕ್ರಿಸ್ಟಲ್‌ ಬ್ಲೇಟ್‌ಗಳು ಮತ್ತು ಅಗತ್ಯ ಘಟಕಗಳನ್ನು ಅಭಿವೃದ್ಧಿಪಡಿಸಿತು. ಇದನ್ನು ಸಾಧಿಸಿದ ಕೆಲವೇ ರಾಷ್ಟ್ರಗಳ ಪಟ್ಟಿಗೆ ಭಾರತ ಸೇರಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.