ಬಳ್ಳಾರಿ: ಶುಕ್ರವಾರ ರಾತ್ರಿ 10.35ಕ್ಕೆ ನಗರದಿಂದ ಹೊರಡಬೇಕಿದ್ದ ಹಂಪಿ ಎಕ್ಸ್‌ಪ್ರೆಸ್ ರೈಲು ರಾತ್ರಿಯ ಬದಲು ಶನಿವಾರ ಬೆಳಗಿನ ಜಾವ ನಾಲ್ಕು ಗಂಟೆಯ ವೇಳೆಗೆ ನಿಲ್ದಾಣಕ್ಕೆ ಬಂದ ಪರಿಣಾಮ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು.
ಹುಬ್ಬಳ್ಳಿ–ಮೈಸೂರು ನಡುವೆ ಗುಂತಕಲ್–ಅನಂತಪುರ–ಹಿಂದೂಪುರ ಮಾರ್ಗದಲ್ಲಿ ಸಂಚರಿಸುವ ಈ ರೈಲು, ಮಾರ್ಗ ದುರಸ್ತಿ ಕಾರ್ಯದ ಕಾರಣದಿಂದ ಕೆಲವು ದಿನಗಳಿಂದ ರಾಯದುರ್ಗ–ತುಮಕೂರು ಮೂಲಕ ಬೆಂಗಳೂರಿಗೆ ತೆರಳುತ್ತಿದೆ. ಮಾರ್ಗ ಬದಲಾದ ಪರಿಣಾಮವಾಗಿ ವೇಳಾಪಟ್ಟಿಯಲ್ಲೂ ಅನಿರೀಕ್ಷಿತ ವ್ಯತ್ಯಾಸಗಳಾಗುತ್ತಿವೆ.
‘ಬೆಂಗಳೂರಿನಲ್ಲಿ ಶನಿವಾರದಿಂದ ಆರಂಭವಾಗಿರುವ ಕೆನರಾ ಬ್ಯಾಂಕ್ ಪಂಚ ವಾರ್ಷಿಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಶುಕ್ರವಾರ ರಾತ್ರಿ ಹೊರಟ ನಾವು ಇನ್ನೂ ಬೆಂಗಳೂರು ತಲುಪಿಲ್ಲ’ ಎಂದು ಬ್ಯಾಂಕ್ ಸಿಬ್ಬಂದಿಯೊಬ್ಬರು ಶನಿವಾರ ಮಧ್ಯಾಹ್ನ 1.45ರ ವೇಳೆಗೆ ದೂರವಾಣಿ ಮೂಲಕ ‘ಪ್ರಜಾವಾಣಿ’ಗೆ ಮಾಹಿತಿ ನೀಡಿ ವಿಷಾದಿಸಿದರು.
‘ರೈಲು ಇಷ್ಟೊಂದು ತಡವಾಗಿ ಸಂಚರಿಸುವುದಾದರೆ ಅದನ್ನು ಕೆಲ ದಿನಗಳ ಕಾಲ ನಿಲ್ಲಿಸಿಬಿಡುವುದೇ ಒಳಿತು. ರಾತ್ರಿಯ ರೈಲಿಗಾಗಿ ಬೆಳಗಿನ ಜಾವದರೆಗೂ ಕಾಯಬೇಕಾದ ಕಷ್ಟವನ್ನೇಕೆ ಪ್ರಯಾಣಿಕರು ಅನುಭವಿಸಬೇಕು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಮಾರ್ಗ ಬದಲಾಗಿರುವುದೇ ಈ ವಿಳಂಬಕ್ಕೆ ಕಾರಣ, ದುರಸ್ತಿ ಕಾರ್ಯ ಪೂರ್ಣಗೊಳ್ಳುವವರೆಗೂ ಬದಲಿ ಮಾರ್ಗದಲ್ಲೇ ರೈಲು ಸಂಚರಿಸಲಿದೆ’ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.