ಬೆಂಗಳೂರು: ಕೊರೊನಾ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಅಂಧ-ಅಂಗವಿಕಲ ನೌಕರರಿಗೆ ಕಚೇರಿಗೆ ಹಾಜರಾಗಲು ವಿನಾಯಿತಿ ನೀಡುವಂತೆ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘ ಒತ್ತಾಯಿಸಿದೆ.
‘ಸರ್ಕಾರದ ವಿವಿಧ ಇಲಾಖೆಗಳು, ನಿಗಮ, ಮಂಡಳಿ ಹಾಗೂ ಅನುದಾನಿತ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಂಗವಿಕಲ ನೌಕರರು ಅಂತರ ಕಾಯ್ದುಕೊಂಡು ಕಾರ್ಯನಿರ್ವಹಿಸಲು ಅಡೆತಡೆಗಳು ಸಾಕಷ್ಟಿವೆ. ಈ ಪರಿಸ್ಥಿತಿಯಲ್ಲಿ ಕಚೇರಿಗೆ ತೆರಳಿ ಕೆಲಸ ಮಾಡುವುದು ಸವಾಲಿನ ಕೆಲಸ. ಹಾಗಾಗಿ ಅಂಗವಿಕಲರಿಗೆ ಕಚೇರಿಗೆ ಹಾಜರಾಗಲು ವೇತನ ಸಹಿತ ವಿನಾಯಿತಿ ನೀಡಬೇಕು’ ಎಂದು ಸಂಘದ ಅಧ್ಯಕ್ಷ ರಮೇಶ್ ಸಂಕರೆಡ್ಡಿ ಒತ್ತಾಯಿಸಿದ್ದಾರೆ.
‘ನೌಕರರ ಸುರಕ್ಷತೆಯನ್ನು ಖಾತ್ರಿಪಡಿಸುವ ಮಾರ್ಗದರ್ಶಿ ನಿಯಮಾವಳಿಗಳನ್ನು ಯಾವುದೇ ಇಲಾಖೆ ಪ್ರಕಟಿಸಿಲ್ಲ. ಮನೆಯಿಂದಲೇ ನಿರ್ವಹಿಸಬಹುದಾದ ಕೆಲಸಗಳಿಗೆ ಅಂಗವಿಕಲರನ್ನು ನಿಯೋಜಿಸಬಹುದು. ಈಗಾಗಲೇ ವಿವಿಧ ಬ್ಯಾಂಕ್‍ಗಳ ಅಂಧ ನೌಕರರಿಗೆ ಕಚೇರಿ ಕೆಲಸದಿಂದ ವಿನಾಯಿತಿ ನೀಡಿದ್ದು, ಸರ್ಕಾರಿ ಅಂಗವಿಕಲ ನೌಕರರಿಗೂ ವಿನಾಯಿತಿ ಘೋಷಿಸಬೇಕು’ ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.