ADVERTISEMENT

ಹಾನಗಲ್ | ಸಾಮೂಹಿಕ ಅತ್ಯಾಚಾರ: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 11 ಜನವರಿ 2024, 15:23 IST
Last Updated 11 ಜನವರಿ 2024, 15:23 IST
<div class="paragraphs"><p>ಬಂಧನ</p></div>

ಬಂಧನ

   

ಹಾನಗಲ್ (ಹಾವೇರಿ ಜಿಲ್ಲೆ): ತಾಲ್ಲೂಕಿನ ನಾಲ್ಕರ್‌ ಕ್ರಾಸ್‌ ಸಮೀಪದ ಖಾಸಗಿ ಹೋಟೆಲ್‌ನಲ್ಲಿ ನಡೆದಿದ್ದ ಮಹಿಳೆ ಮತ್ತು ಪುರುಷನ ಮೇಲಿನ ಹಲ್ಲೆ ಪ್ರಕರಣಕ್ಕೆ ಗುರುವಾರ ತಿರುವು ಸಿಕ್ಕಿದ್ದು, ಸಂತ್ರಸ್ತೆಯ ಹೇಳಿಕೆ ಆಧರಿಸಿ ಪೊಲೀಸರು ‘ಸಾಮೂಹಿಕ ಅತ್ಯಾಚಾರ’ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹಲ್ಲೆಗೊಳಗಾದ ಮಹಿಳೆಯನ್ನು ಗುರುವಾರ ಪೊಲೀಸರು ಹಾನಗಲ್‌ಗೆ ಕರೆತಂದು ಇಲ್ಲಿನ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಇನ್‌ ಕ್ಯಾಮೆರಾ ಪ್ರೊಸಿಜರ್‌ ಮೂಲಕ ನ್ಯಾಯಾಧೀಶ ಬಿ.ವೆಂಕಟಪ್ಪ ಅವರು ಮಹಿಳೆಯ ‘164’ ಹೇಳಿಕೆಯನ್ನು ದಾಖಲಿಸಿಕೊಂಡರು.

ADVERTISEMENT

‘ನ್ಯಾಯಾಲಯದ ಪ್ರಕ್ರಿಯೆ ಬಳಿಕ ಮಹಿಳೆಯನ್ನು ಹಾನಗಲ್ ಪೊಲೀಸ್‌ ಠಾಣೆಗೆ ಕರೆತರಲಾಯಿತು. ಬುಧವಾರ ದಾಖಲಾಗಿರುವ ಪ್ರಕರಣಕ್ಕೆ ಸಾಮೂಹಿಕ ಅತ್ಯಾಚಾರ ಆರೋಪದ 376–ಡಿ ಸೆಕ್ಷನ್‌ ಸೇರಿಸಲಾಗಿದೆ. ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗುವುದು ಮತ್ತು ಹೆಚ್ಚಿನ ತನಿಖೆ ನಡೆಸಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಂಶುಕುಮಾರ ಹೇಳಿದರು.

ಏನಿದು ಪ್ರಕರಣ:

ಶಿರಸಿ ಮೂಲದ ಪುರುಷ ಮತ್ತು ಮಹಿಳೆ ಇಬ್ಬರು ನಾಲ್ಕರ ಕ್ರಾಸ್‌ ಹತ್ತಿರದ ಹೋಟೆಲ್‌ನಲ್ಲಿ ತಂಗಿದ್ದರು. ಈ ವೇಳೆ ಹೋಟೆಲ್‌ ಕೊಠಡಿಗೆ ನುಗ್ಗಿದ ಮುಸ್ಲಿಂ ಯುವಕರ ಗುಂಪು ಮುಸ್ಲಿಂ ವಿವಾಹಿತ ಮಹಿಳೆ ಮತ್ತು ಹಿಂದೂ ಧರ್ಮದ ಪುರುಷನನ್ನು ಹಿಗ್ಗಾಮುಗ್ಗಾ ಥಳಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಹೋಟಲ್‌ ರೂಮ್‌ ಬಾಯ್‌ ದೂರು ಆಧರಿಸಿ ಬುಧವಾರ ಹಾನಗಲ್‌ ಪೊಲೀಸ್‌ ಠಾಣೆಯಲ್ಲಿ ಅಕ್ಕಿಆಲೂರು ಗ್ರಾಮದ 7 ಯುವಕರ ಮೇಲೆ ಪ್ರಕರಣ ದಾಖಲಾಗಿತ್ತು.

ಮೂವರ ಬಂಧನ:

ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಅಕ್ಕಿಆಲೂರಿನ ಅಫ್ತಾಬ್‌ ಮಕ್ಬೂಲ್‌ ಅಹಮದ್‌ ಚಂದನಕಟ್ಟಿ (24) ಮತ್ತು ಮದರ್‌ಸಾಬ್‌ ಮಹಮದ್‌ ಇಸಾಕ್‌ ಮಂಡಕ್ಕಿ (23) ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಯುವಕರ ಗುಂಪಿಗೆ ಮಾಹಿತಿ ನೀಡಿದ್ದ ಆಟೊ ಚಾಲಕನನ್ನು ಗುರುವಾರ ಬಂಧಿಸಲಾಗಿದೆ. 

‘ಒಬ್ಬ ಆರೋಪಿ ಬೈಕ್‌ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿದ್ದಾನೆ. ಇನ್ನೂ 3 ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ. ಇದೇ ರೀತಿಯ ಘಟನೆಗಳು ಹಿಂದೆ ನಡೆದಿದ್ದರೆ, ಅವುಗಳ ದೂರು ತೆಗೆದುಕೊಳ್ಳುತ್ತೇವೆ. ಈ ಆರೋಪಿಗಳ ಮೇಲೆ ಈ ಹಿಂದೆ ದೂರುಗಳು ಬಂದಾಗ ರಾಜಿ ಸಂಧಾನ ನಡೆದಿತ್ತು ಎನ್ನುವುದರ ಬಗ್ಗೆ ಮಾಹಿತಿ ಇಲ್ಲ’ ಎಂದು ಅಂಶುಕುಮಾರ ಹೇಳಿದರು.

‘ಏಳು ಜನರಿಂದ ಅತ್ಯಾಚಾರ’
‘ನಾನು ಹೋಟೆಲ್‌ ಕೊಠಡಿಗೆ ಆಗ ತಾನೆ ಹೋಗಿ ಕುಳಿತಿದ್ದೆ. ಅಷ್ಟರಲ್ಲಿ ಕೊಠಡಿಯೊಳಗೆ ನುಗ್ಗಿದ ಯುವಕರ ಗುಂಪು ಹಲ್ಲೆ ನಡೆಸಿ, ನನ್ನನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಕಾಡಿನತ್ತ ಕರೆದೊಯ್ದರು. ಅಲ್ಲಿ ನನ್ನನ್ನು ಮನಬಂದಂತೆ ಥಳಿಸಿ, ಏಳು ಯುವಕರು ಒಬ್ಬರ ನಂತರ ಒಬ್ಬೊರು ಅತ್ಯಾಚಾರ ಮಾಡಿದರು. ಕಾಲಿಗೆ ಬಿದ್ದು ಬೇಡಿಕೊಂಡರೂ ಬಿಡಲಿಲ್ಲ. ಆನಂತರ ಕಾರಿನಲ್ಲಿ ಕರೆದೊಯ್ದು ಬಸ್‌ ಹತ್ತಿಸಿದರು’ ಎಂದು ಸಂತ್ರಸ್ತೆ ಮಾತನಾಡಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 
ಜೋಡಿಹಕ್ಕಿಗಳೇ ಟಾರ್ಗೆಟ್‌!
ಪ್ರಕರಣ ದಾಖಲಾದ ಬೆನ್ನಲ್ಲೇ ಮತ್ತಷ್ಟು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕಾರಿನಲ್ಲಿ ಮುಸ್ಲಿಂ ಯುವತಿಗೆ ಯುವಕರ ಗುಂಪು ಕಿರುಕುಳ ನೀಡುತ್ತಿರುವ ದೃಶ್ಯಗಳು ಸೆರೆಯಾಗಿವೆ. ‘ನನ್ನನ್ನು ಬಿಟ್ಟುಬಿಡಿ ಮನೆಗೆ ಹೋಗುತ್ತೇನೆ’ ಎಂದರೂ ಬಿಡದೆ, ಯುವತಿಯ ಕಪಾಳಕ್ಕೆ ಹೊಡೆಯುತ್ತಿರುವ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವ ದೃಶ್ಯಗಳು ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿವೆ.  ಒಂಟಿಯಾಗಿ ಸಿಗುತ್ತಿದ್ದ ಜೋಡಿಗಳ ಬೆನ್ನು ಹತ್ತುತ್ತಿದ್ದ ಯುವಕರ ಗುಂಪು ಹುಡುಗನಿಗೆ ಥಳಿಸಿದ ನಂತರ ಯುವತಿಯನ್ನು ಕಾರಿನಲ್ಲಿ ಕರೆದೊಯ್ದು ಕಿರುಕುಳ ನೀಡುತ್ತಿದ್ದರು ಎಂಬ ಆರೋಪಗಳು ಕೇಳಿಬಂದಿದ್ದು, ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. 
ನೈತಿಕ ಪೊಲೀಸಗಿರಿ ದಾಳಿ ಮತ್ತು ಮಹಿಳೆ ಮೇಲೆ ಅತ್ಯಾಚಾರ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದೇವೆ. ಈ ಗ್ಯಾಂಗ್‌ ಹಿಂದೆ ಇರುವ ಶಕ್ತಿಗಳ ಬಗ್ಗೆಯೂ ತನಿಖೆ ನಡೆಯಲಿದೆ
– ಅಂಶುಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಹಾವೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.