ADVERTISEMENT

ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ಆಂಜನೇಯ ದೇಗುಲ: ಪಿಐಎಲ್‌

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2022, 21:00 IST
Last Updated 17 ನವೆಂಬರ್ 2022, 21:00 IST
   

ಬೆಂಗಳೂರು: ‘ಶ್ರೀರಂಗಪಟ್ಟಣದ ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಾಲಯವನ್ನು ಧ್ವಂಸಗೊಳಿಸಿದ ಟಿಪ್ಪು ಸುಲ್ತಾನ್ ವಿವಾದಿತ ಜಾಮಿಯಾ ಮಸೀದಿ ನಿರ್ಮಾಣ ಮಾಡಿದ್ದಾನೆ’ ಎಂದು ಆಪಾದಿಸಿ ಭಜರಂಗ ಸೇನೆ ಹೈಕೋರ್ಟ್‌ ಮೆಟ್ಟಿಲೇರಿದೆ.

ಮಂಡ್ಯ ಜಿಲ್ಲೆಯ ಹಾಲಹಳ್ಳಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಭಜರಂಗ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಬಿ. ಮಂಜುನಾಥ್ ಈ ಕುರಿತಂತೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು ಇದು ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

ಅರ್ಜಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಮುಜರಾಯಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಮಂಡ್ಯ ಜಿಲ್ಲಾಧಿಕಾರಿ, ರಾಜ್ಯ ಧಾರ್ಮಿಕ ಪರಿಷತ್, ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ADVERTISEMENT

ಆಪಾದನೆ: ‘ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಾಲಯವನ್ನು ವಿಜಯನಗರ ಸಾಮ್ರಾಜ್ಯ, ಮೈಸೂರು ಸಾಮ್ರಾಜ್ಯ ಹಾಗೂ ದಳವಾಯಿ ದೊಡ್ಡಯ್ಯ ಸೇರಿದಂತೆ ಅನೇಕ ಆಡಳಿತಗಾರರು ಪೋಷಿಸಿಕೊಂಡು ಬಂದಿದ್ದರು. ಆದರೆ, ಇದನ್ನು ಧ್ವಂಸಗೊಳಿಸಿದ ಟಿಪ್ಪು ಸುಲ್ತಾನ್, ಮಸೀದಿಯನ್ನಾಗಿ ಪರಿವರ್ತಿಸಿದ್ದಾನೆ’ ಎಂಬುದು ಅರ್ಜಿದಾರರ ಆರೋಪ.

‘ಈ ಬಗ್ಗೆ ಅಧ್ಯಯನ, ಸರ್ವೆ ಹಾಗೂ ಉತ್ಖನನ ನಡೆಸಿ 30 ದಿನಗಳ ಒಳಗಾಗಿ ಹೈಕೋರ್ಟ್‌ಗೆ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯಕ್ಕೆ ನಿರ್ದೇಶಿಸಬೇಕು. ದೇವಾಲಯದ ಆವರಣದಲ್ಲಿರುವ ಹಿಂದೂ ಸಂಸ್ಕೃತಿ ಹಾಗೂ ಪರಂಪರೆಯ ಕುರುಹುಗಳಾಗಿರುವ ಗರುಡ ಕಂಬ, ಕಲ್ಯಾಣಿ, ಸ್ತೂಪ, ಸ್ತಂಭ, ಹಿಂದೂ ದೇವ-ದೇವತೆಗಳ ಕಲ್ಲಿನ ಕೆತ್ತನೆಗಳು ಹಾಗೂ ಭೂಗತ ದೇವಸ್ಥಾನದ ಭಾಗ, ವಾಸ್ತು ಶಿಲ್ಪ, ಹೂತಿಟ್ಟ ವಿಗ್ರಹಗಳನ್ನು ಸಂರಕ್ಷಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ, ರಾಜ್ಯ ಸರ್ಕಾರ, ಜಿಲ್ಲಾಡಳಿತಕ್ಕೆ ನಿರ್ದೇಶಿಸಬೇಕು’ ಎಂದೂ ಅವರುಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.