ಬೆಂಗಳೂರು: ನಗರದಲ್ಲಿ ಶನಿವಾರ ಹೊಸ ವರ್ಷಾಚರಣೆ ಸಂಭ್ರಮಕ್ಕೆ 10 ಸಾವಿರಕ್ಕೂ ಹೆಚ್ಚು ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು. ಬ್ರಿಗೇಡ್ ರಸ್ತೆ, ಎಂ.ಜಿ. ರಸ್ತೆ ಹಾಗೂ ಚರ್ಚ್‌ಸ್ಟ್ರೀಟ್‌ನಲ್ಲಿ ತಡರಾತ್ರಿ ಸೇರಿದ್ದ ಜನರನ್ನು ಚದುರಿಸಲು ಪೊಲೀಸರು ಹೈರಾಣಾದರು.
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು, ಶನಿವಾರ ಬೆಳಿಗ್ಗೆಯಿಂದ ಭಾನುವಾರ ನಸುಕಿನವರೆಗೂ ಹಲವು ಸ್ಥಳಗಳಲ್ಲಿ ಕಾವಲು ಕಾಯ್ದರು.
ಬ್ರಿಗೇಡ್ ರಸ್ತೆ, ಎಂ.ಜಿ. ರಸ್ತೆ, ಚರ್ಚ್‌ಸ್ಟ್ರೀಟ್, ಇಂದಿರಾನಗರ, ಕೋರಮಂಗಲ, ಎಚ್‌ಎಸ್‌ಆರ್ ಲೇಔಟ್, ವೈಟ್‌ಫೀಲ್ಡ್‌ಗಳಲ್ಲಿ ಭದ್ರತೆಗೆ ಒತ್ತು ನೀಡಲಾಗಿತ್ತು.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಬ್ರಿಗೇಡ್ ರಸ್ತೆಗೆ ಭೇಟಿ ನೀಡಿ, ಭದ್ರತೆ ಪರಿಶೀಲಿಸಿದರು.
ಬ್ರಿಗೇಡ್ ರಸ್ತೆಯಲ್ಲಿ ಪ್ರವೇಶಿಸಿ ಅಪೇರಾ ಜಂಕ್ಷನ್ ಮೂಲಕ ಹೊರಹೋಗಲು ಅವಕಾಶ ಮಾಡಿಕೊಡಲಾಗಿತ್ತು. ಆದರೆ, ಹಲವರು ತಮ್ಮಿಷ್ಟದ ರಸ್ತೆಗಳಲ್ಲಿ ಸುತ್ತಾಡಿದರು. ಇದನ್ನು ತಡೆದ ಪೊಲೀಸರು, ಲಾಠಿ ಹಿಡಿದು ಜನರನ್ನು ಚದುರಿಸಿದರು. ಈ ವೇಳೆ ಕೆಲವರು ಪೊಲೀಸರ ಜೊತೆ ವಾಗ್ವಾದ ನಡೆಸಿದರು.
ಡ್ರಗ್ಸ್ ವ್ಯಸನಿಗಳು ವಶಕ್ಕೆ: ಎಂ.ಜಿ. ರಸ್ತೆಯಲ್ಲಿ ಗಾಂಜಾ ಸೇವಿಸುತ್ತಿದ್ದ ಇಬ್ಬರು ಯುವಕರನ್ನು ಕಬ್ಬನ್ ಪಾರ್ಕ್ ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು.
ಲಘು ಲಾಠಿ ಪ್ರಹಾರ
ಕೋರಮಂಗಲದಲ್ಲಿ ಪಬ್‌ಗಳ ಎದುರು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ನೂಕುನುಗ್ಗಲು ಸಹ ಉಂಟಾಯಿತು. ಹೀಗಾಗಿ, ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದರು.
ಬ್ರಿಗೇಡ್ ರಸ್ತೆಯಲ್ಲೂ ಪೊಲೀಸರು ಲಾಠಿ ಹಿಡಿದು ಜನರನ್ನು ಸ್ಥಳದಿಂದ ಕಳುಹಿಸಲು ಯತ್ನಿಸಿದರು. ಆದರೆ, ಬಹುತೇಕ ಜನರು ರಸ್ತೆ ಬಿಟ್ಟು ಕದಲಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.