ಹರಪನಹಳ್ಳಿ:ತಾಲ್ಲೂಕಿನಲ್ಲಿ 25 ವರ್ಷದ ಯುವತಿಯೊಬ್ಬಳನ್ನು ದೇವದಾಸಿ ಪದ್ಧತಿಯ ಕೂಪಕ್ಕೆ ತಳ್ಳಿರುವ ಪ್ರಕರಣ ಬಯಲಾಗಿದೆ.
ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘ ಮತ್ತು ದೇವದಾಸಿ ಪುನರ್ವಸತಿ ಕಾರ್ಯಕರ್ತರು ಈ ಅನಿಷ್ಟ ಪದ್ಧತಿಗೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದು, ಈ ಪದ್ಧತಿಯಿಂದ ಯುವತಿಯನ್ನು ರಕ್ಷಿಸಲು ಮುಂದಾಗಿದ್ದಾರೆ.
ಯುವತಿ ಮತ್ತು ಆಕೆಯ ಪೋಷಕರನ್ನು ಕಾರ್ಯಕರ್ತರು ಸಂಪರ್ಕಿಸಿ ಅನಿಷ್ಟ ಪದ್ಧತಿ ಆಚರಿಸಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ. ಯುವತಿಯ ಕೊರಳಲ್ಲಿ ಐದು ಬಿಳಿ ಮುತ್ತುಗಳಿರುವ ದಾರ, ಕೈಯಲ್ಲಿ ಹಸಿರು ಬಳೆಗಳಿರುವ ವಿಡಿಯೊ ಚಿತ್ರೀಕರಣ ಮಾಡಿಕೊಂಡಿದ್ದಾರೆ.
ಮಗಳಿಗೆ ವರ ಹುಡುಕಿ ಮದುವೆ ಮಾಡಲು ಅಶಕ್ತರಾಗಿರುವ ಹಿನ್ನೆಲೆಯಲ್ಲಿ ಅನಕ್ಷರಸ್ಥ ಪೋಷಕರು ಕಾನೂನಿನ ಅರಿವಿಲ್ಲದೇ ಮಗಳನ್ನು ದೇವದಾಸಿಯಾಗಿ ಬಿಟ್ಟಿದ್ದಾರೆ ಎನ್ನಲಾಗಿದೆ.
‘ಆ.23ರಂದು ಉಚ್ಚಂಗಿದುರ್ಗದ ಉಚ್ಚೆಂಗೆಮ್ಮ ದೇವಸ್ಥಾನದಲ್ಲಿ ಪ್ರಕರಣ ನಡೆದಿರುವ ಬಗ್ಗೆ ಅನುಮಾನವಿದೆ. ಐದಾರು ದಿನಗಳಿಂದ ಯುವತಿಯ ಮನೆಗೆ ಹೋಗಿ, ಪೋಷಕರು, ಸುತ್ತಮುತ್ತಲಿನ ಜನರನ್ನು ವಿಚಾರಿಸಿದಾಗ ದೇವದಾಸಿ ಪದ್ಧತಿಗೆ ನೂಕಿರುವುದು ಖಚಿತವಾಗಿದೆ. ಈ ಅನಿಷ್ಟ ಪದ್ಧತಿಯನ್ನು ಬೆಂಬಲಿಸಿದವರಿಗೆ ತಕ್ಕ ಶಿಕ್ಷೆ ಆಗಬೇಕು’ ಎಂದು ದೇವದಾಸಿ ಮಹಿಳಾ ವಿಮೋಚನಾ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷೆ ಟಿ.ವಿ. ರೇಣುಕಮ್ಮ ಒತ್ತಾಯಿಸಿದ್ದಾರೆ.
ದೇವದಾಸಿ ಪುನರ್ವಸತಿ ಯೋಜನೆ ಅನುಷ್ಠಾನ ಅಧಿಕಾರಿ ಪ್ರಜ್ಞಾ ಜಯರಾಜ್, ‘ಪೋಷಕರಿಗೆ ತಿಳಿವಳಿಕೆ ನೀಡಿದ್ದೇವೆ. ಅವರ ಸಂಬಂಧಿ ಯುವಕನೊಂದಿಗೆ ಮದುವೆ ಮಾಡುತ್ತೇವೆ ಎಂದು ಒಪ್ಪಿಕೊಂಡಿದ್ದಾರೆ. ವಿವಾಹ ನೋಂದಣಿ ಮಾಡದಿದ್ದರೆ ಪೋಷಕರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುತ್ತೇವೆ’ ಎಂದು ಎಚ್ಚರಿಸಿದ್ದಾರೆ.
ಈ ಪ್ರಕರಣದ ಬಗ್ಗೆ ಅರಸೀಕೆರೆ ಠಾಣೆಗೆ ದೂರು ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.