ಬೆಂಗಳೂರು: ‘ಮಂಡ್ಯದ ಗಣಿ ಉದ್ಯಮಿ ಎಚ್.ಟಿ.ಮಂಜು ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣ ಗೌಡ ಅವರು ರಾಜಕೀಯ ಉದ್ದೇಶದಿಂದ ಕಿರುಕುಳ ನೀಡುತ್ತಿದ್ದು, ಹಲವು ಮನವಿ ನೀಡಿದ ಮೇಲೂ ಇದು ಕೊನೆಗೊಳ್ಳದ ಕಾರಣ ಇದೇ 29ರಂದು ಮುಖ್ಯಮಂತ್ರಿ ಗೃಹ ಕಚೇರಿಯ ಮುಂಭಾಗ ಧರಣಿ ನಡೆಸಲಿದ್ದೇನೆ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ದೇವೇಗೌಡರು ಈ ಸಂಬಂಧ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದು, ‘ಸಚಿವ ನಾರಾಯಣ ಗೌಡರ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಹೈಕೋರ್ಟ್ ಆದೇಶವನ್ನೂ ಧಿಕ್ಕರಿಸಿ ಟಿ.ಜೆ.ಸ್ಟೋನ್ ಕ್ರಷರ್ ಉದ್ಯಮ ನಡೆಯದಂತೆ ನೋಡಿಕೊಳ್ಳುತ್ತಿದ್ದಾರೆ. ಪಕ್ಷದ ಒಬ್ಬ ಕಾರ್ಯಕರ್ತನಿಗೆ ಇನ್ನಷ್ಟು ದಿನ ಇಂತಹ ಅನ್ಯಾಯ ಆಗುವುದನ್ನು ಸಹಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಪಕ್ಷದ ಸಂಸದರು, ಶಾಸಕರು ಹಾಗೂ ಮುಖಂ ಡ ರೊಂದಿಗೆ ಸೇರಿ ಧರಣಿ ನಡೆಸಲಿದ್ದೇನೆ’ ಎಂದು ಹೇಳಿದ್ದಾರೆ.
‘ಹೈಕೋರ್ಟ್ ಆದೇಶ ಹಾಗೂ ಗಣಿ ಇಲಾಖೆ ಅಧಿಕಾರಿಗಳ ಶಿಫಾರಸಿನಂತೆ ಗಣಿ ಉದ್ಯಮ ಪುನರಾ ರಂಭಿಸಲು ಪರವಾನಗಿ ನೀಡುವಂತೆ ಆದೇಶಿಸುವುದಾಗಿ ನೀವು ನನಗೆ ತಿಳಿಸಿದ್ದೀರಿ. ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ, ಗಣಿ ಸಚಿವ ಸಿ.ಸಿ.ಪಾಟೀಲ, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಸಹಿತ ಹಲವಾರು ಮಂದಿಯೊಂದಿಗೆ ನಾನು ಈ ವಿಚಾರ ಚರ್ಚಿಸಿದ್ದೇನೆ. ಎಲ್ಲರೂ ಕ್ರಮ ಕೈಗೊಳ್ಳುವುದಾಗಿ ಹೇಳಿದರೂ ಯಾವುದೇ ಕ್ರಮ ಜರುಗಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿರುವ ದೇವೇಗೌಡರು, ‘ಧರಣಿ ಹೊರತು ಬೇರೆ ದಾರಿ ಉಳಿದಿಲ್ಲ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.