ADVERTISEMENT

ಅವಕಾಶವಾದಿತನ ಉಲ್ಲೇಖಿಸಿ ಹೇಳಿಕೆ ನೀಡಿದ್ದೆ: ನೋಟಿಸ್‌ಗೆ ಹರಿಪ್ರಸಾದ್‌ ಉತ್ತರ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2023, 15:43 IST
Last Updated 23 ಸೆಪ್ಟೆಂಬರ್ 2023, 15:43 IST
ಬಿ.ಕೆ ಹರಿಪ್ರಸಾದ್‌
ಬಿ.ಕೆ ಹರಿಪ್ರಸಾದ್‌   

ನವದೆಹಲಿ: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಕಾರಣಕ್ಕೆ ಎಐಸಿಸಿ ಶಿಸ್ತುಸಮಿತಿಯಿಂದ ಷೋಕಾಸ್‌ ನೋಟಿಸ್‌ ಪಡೆದಿದ್ದ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅದಕ್ಕೆ ಉತ್ತರ ನೀಡಿದ್ದಾರೆ. 

ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೆಪ್ಟೆಂಬರ್‌ 9ರಂದು ನಡೆದಿದ್ದ ಈಡಿಗ ಮತ್ತು ಅತಿ ಹಿಂದುಳಿದ ವರ್ಗಗಳ ಸಮಾನ ಮನಸ್ಕರ ಪೂರ್ವಭಾವಿ ಸಭೆಯಲ್ಲಿ ಹರಿಪ್ರಸಾದ್‌ ಅವರು ಸಿದ್ದರಾಮಯ್ಯರ ಹೆಸರು ಹೇಳದೆಯೇ ಭಾಷಣದುದ್ದಕ್ಕೂ ಟೀಕಾಪ್ರಹಾರ ನಡೆಸಿದ್ದರು. ‘ಹ್ಯೂಬ್ಲೋ ವಾಚ್‌ ಕಟ್ಟಿಕೊಂಡು, ಪಂಚೆ ಉಟ್ಟುಕೊಂಡು ಒಳಗೆ ಖಾಕಿ ಚಡ್ಡಿ ಧರಿಸುವುದು ಸಮಾಜವಾದವಲ್ಲ’ ಎಂದು ವ್ಯಂಗ್ಯವಾಗಿ ಹೇಳಿದ್ದರು. ಹರಿಪ್ರಸಾದ್‌ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹೈಕಮಾಂಡ್‌ಗೆ ಸಿದ್ದರಾಮಯ್ಯ ದೂರು ನೀಡಿದ್ದರು. 

ಸೆಪ್ಟೆಂಬರ್‌ 12ರಂದು ಷೋಕಾಸ್‌ ನೋಟಿಸ್‌ ನೀಡಿದ್ದ ಶಿಸ್ತುಸಮಿತಿ, 10 ದಿನಗಳಲ್ಲಿ ಉತ್ತರ ನೀಡುವಂತೆ ಸೂಚಿಸಿತ್ತು. 

ADVERTISEMENT

ಉತ್ತರದಲ್ಲಿ ಏನಿದೆ?: 

ಇದೀಗ ಉತ್ತರ ನೀಡಿರುವ ಹರಿಪ್ರಸಾದ್‌, ‘ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ರಾಷ್ಟ್ರೀಯ ಮಟ್ಟದಲ್ಲಿ ಅನೇಕ ಹುದ್ದೆಗಳನ್ನು ನಿಭಾಯಿಸಿದ ಅನುಭವಿ. ಯಾರನ್ನೂ ಉದ್ದೇಶಿಸಿ ಈ ಹೇಳಿಕೆ ನೀಡಿರಲಿಲ್ಲ. ರಾಜಕಾರಣದಲ್ಲಿ ಅವಕಾಶವಾದಿಗಳಿಗೆ ಹೇರಳ ಅವಕಾಶ ಸಿಗುತ್ತಿದೆ. ತತ್ವ ಸಿದ್ಧಾಂತಗಳಿಗೆ ಬೆಲೆ ಇಲ್ಲ ಎಂಬುದನ್ನು ಪ್ರಾಸಂಗಿಕವಾಗಿ ಹೇಳಿದ್ದೆ. ಪಕ್ಷದ ವರ್ಚಸ್ಸಿಗೆ ಹಾನಿ ಉಂಟು ಮಾಡುವಂತಹ ಕೆಲಸಗಳನ್ನು ಯಾವತ್ತೂ ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ಕೆಲವು ನಾಯಕರು ತಮ್ಮನ್ನು ನಡೆಸಿಕೊಂಡ ರೀತಿಯ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾರ್ಯತಂತ್ರ ಹೆಣೆಯುವಾಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ, ಪ್ರಚಾರ ಸಮಿತಿಯ ಅಧ್ಯಕ್ಷರಾಗಿದ್ದ ಎಂ.ಬಿ.ಪಾಟೀಲ ಹಾಗೂ ಪ್ರಣಾಳಿಕೆಯ ಸಮಿತಿಯ ಅಧ್ಯಕ್ಷರಾಗಿದ್ದ ಜಿ.ಪರಮೇಶ್ವರ ಹಾಗೂ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕನಾಗಿದ್ದ ನಾನು ಜತೆಗೂಡಿ ಕೆಲಸ ಮಾಡಿದ್ದೆವು. ಬಿಜೆಪಿ ಸರ್ಕಾರದ ವಿರುದ್ಧ ಜತೆಗೂಡಿ ಹೋರಾಟ ಮಾಡಿದ್ದೆವು. ಆದರೆ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ನಡೆದಿದ್ದೇ ಬೇರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಶಿವಕುಮಾರ್ ಉಪಮುಖ್ಯಮಂತ್ರಿಯಾದರು. ಉಳಿದ ಇಬ್ಬರು ಸಚಿವರಾದರು. ಆದರೆ, ಸಮಾನವಾಗಿ ದುಡಿದಿದ್ದ ನನಗೆ ಅವಕಾಶ ಸಿಗಲಿಲ್ಲ. ಯಾಕೆ ಈ ರೀತಿ ಆಯಿತು ಎಂಬ ಬಗ್ಗೆ ಈವರೆಗೂ ಯಾರೂ ನನ್ನೊಂದಿಗೆ ಚರ್ಚಿಸಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. 

‘ನಾನು ಈ ಹಿಂದೆ ರಾಜ್ಯಸಭಾ ಸದಸ್ಯನಾಗಿದ್ದೆ. ಅವಧಿ ಮುಗಿದ ಬಳಿಕ ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ ಕರೆ ಮಾಡಿದ್ದರು. ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಬೇಕಿದೆ. ಹೀಗಾಗಿ, ಈ ಸಲ ನಿಮಗೆ ಅವಕಾಶ ನೀಡಲು ಆಗುವುದಿಲ್ಲ ಎಂದೂ ಹೇಳಿದ್ದರು. ಪಕ್ಷದ ಅಧಿನಾಯಕಿ ಅವರಿಗೆ ಇರುವ ಸೌಜನ್ಯ ರಾಜ್ಯ ನಾಯಕರಲ್ಲಿ ಕಾಣಲಿಲ್ಲ’ ಎಂದು ಅವರು ಉತ್ತರದಲ್ಲಿ ಹೇಳಿದ್ದಾರೆ. 

ಜತೆಗೆ, ಶಿಸ್ತುಸಮಿತಿಯ ಅಧ್ಯಕ್ಷ ಎ.ಕೆ. ಆ್ಯಂಟನಿ, ಸದಸ್ಯರಾದ ಅಂಬಿಕಾ ಸೋನಿ ಹಾಗೂ ತಾರಿಕ್‌ ಅನ್ವರ್‌ ಅವರನ್ನು ಭೇಟಿ ಮಾಡಿ ವಿವರಣೆ ನೀಡಿದ್ದಾರೆ. ರಾಜ್ಯ ಕಾಂಗ್ರೆಸ್‌ ಸರ್ಕಾರ ಹಾಗೂ ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆಯೂ ವರಿಷ್ಠರಿಗೆ ಮಾಹಿತಿ ನೀಡಿದ್ದಾರೆ ಎಂದು ಹೈಕಮಾಂಡ್‌ ಮೂಲಗಳು ತಿಳಿಸಿವೆ. 

ತಾವು ನೀಡಿರುವ ಉತ್ತರ ಸಿಕ್ಕಿದೆ ಎಂದು ಶಿಸ್ತುಸಮಿತಿಯ ಸದಸ್ಯರು ಹರಿಪ್ರಸಾದ್‌ ಅವರಿಗೆ ತಿಳಿಸಿದ್ದಾರೆ. ಜತೆಗೆ, ಈ ಉತ್ತರವನ್ನು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಳುಹಿಸಿಕೊಟ್ಟಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.