ಹಾಸನ: ಇಲ್ಲಿನ ಸರ್ಕಾರಿ ಕಚೇರಿಗಳಲ್ಲೀಗ ಮಹಿಳಾ ಸಿಬ್ಬಂದಿಗೆ ಸುದೀರ್ಘ ರಜೆ ಪಡೆಯಲು ಹಿಂಜರಿಕೆ. ಅನುಮಾನದ ವರ್ತುಲದಲ್ಲಿ ತಮ್ಮನ್ನೂ ಸೇರಿಸಿ ಬಿಡಬಹುದೆಂಬ ಅವ್ಯಕ್ತ ಭಯ ಅವರನ್ನು ಬೆಂಬಿಡದೆ ಕಾಡುತ್ತಿದೆ.
ಜಿಲ್ಲೆಯಲ್ಲಿ ನಡೆದಿರುವ ಲೈಂಗಿಕ ದೌರ್ಜನ್ಯ ಮತ್ತು ಪೆನ್‌ಡ್ರೈವ್ ಹಂಚಿಕೆ ಪ್ರಕರಣ, ನಂತರದ ಬೆಳವಣಿಗೆಗಳಿಂದ ಸರ್ಕಾರಿ ಮಹಿಳಾ ಉದ್ಯೋಗಿಗಳು ಕುಹಕದ ಮಾತುಗಳಿಗೆ ಬಲಿಪಶುಗಳಾಗುತ್ತಿ
ದ್ದಾರೆ. ‘ಬಾಗಲಕೋಟೆಯಿಂದ ಮೊನ್ನೆ ಹಳೆಯ ಸಹೋದ್ಯೋಗಿಯೊಬ್ಬರು ಕಾಲ್ ಮಾಡಿ ನಿಮ್ಮ ಆಫೀಸಿನ ಮಹಿಳೆಯ ಚಿತ್ರ ಪೆನ್‌ಡ್ರೈವ್‌ನಲ್ಲಿ ಓಡಾಡಿದೆಯಂತೆ ಎಂದು ಪ್ರಶ್ನಾರ್ಥಕವಾಗಿ ಮಾತನಾಡಿದಾಗ, ಆತ ನನ್ನನ್ನೇ ಉದ್ದೇಶಿಸಿ ಕೇಳಿದ್ದು ಎಂದು ತಕ್ಷಣಕ್ಕೆ ಹೊಳೆಯಲಿಲ್ಲ. ಪೆನ್‌ಡ್ರೈವ್ ಹಂಚಿಕೆ ಪ್ರಕರಣ ಸ್ತ್ರೀ ಸಮುದಾಯದ ಶೀಲ ಶಂಕಿಸುವ ಮಟ್ಟಕ್ಕೆ ತಲ್ಲಣ ಸೃಷ್ಟಿಸಿದೆ’ ಎಂದು ಸರ್ಕಾರಿ ಇಲಾಖೆಯ ಎಂಜಿನಿಯರ್ ಒಬ್ಬರು ಬೇಸರಿಸಿದರು.
‘ದೀರ್ಘಾವಧಿ ರಜೆ ಪಡೆಯಲು ಮಹಿಳೆಯರು ಹಿಂದೇಟು ಹಾಕುತ್ತಿದ್ದಾರೆ. ಸಹೋದ್ಯೋಗಿ ಮಹಿಳೆ ವೈಯಕ್ತಿಕ ಕಾರಣಕ್ಕೆ ಒಂದು ವಾರ ರಜೆಗೆ ಹೋಗಿದ್ದರು. ಹಿರಿಯ ಅಧಿಕಾರಿಯೊಬ್ಬರೂ ಇದೇ ಅವಧಿಯಲ್ಲಿ ರಜೆಯ ಮೇಲೆ ತೆರಳಿದ್ದರು. ಮರು ದಿನದಿಂದಲೇ ಕಚೇರಿಯಲ್ಲಿ, ಇವರಿಬ್ಬರೂ ಪೆನ್ ಡ್ರೈವ್ ಸಂತ್ರಸ್ತೆಯರಿರಬಹುದು ಎಂಬ ಗುಸುಗುಸು ಪುರುಷ ಸಹೋದ್ಯೋಗಿಗಳ ನಡುವೆ ಹರಿದಾಡಿತು’ ಎಂದು ಮಹಿಳಾ ಉದ್ಯೋಗಿಯೊಬ್ಬರು ನೊಂದುಕೊಂಡರು.
‘ಹಾಸನ ಸಮೀಪ ಯುವತಿ ಯೊಬ್ಬಳು ವಾರದ ಹಿಂದೆ ಯಾವುದೋ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಪೆನ್‌ಡ್ರೈವ್ ಹೊರಬಂದ ಮೇಲೆಯೇ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದು ಎಂಬ ಗಾಳಿಸುದ್ದಿ ಹರಡಿತು. ಸ್ತ್ರೀ ಸುತ್ತ ನಡೆಯುವ ಎಲ್ಲ ಘಟನೆಗಳ ಹಿಂದೆ ಪೆನ್ ಡ್ರೈವ್ ಕರಿನೆರಳು ಬೀಳುತ್ತಿರುವುದುಆಘಾತಕಾರಿಯಾಗಿದೆ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತೆ ಕೆ.ಟಿ. ಜಯಶ್ರೀ.
‘ತಪ್ಪೆಸಗಿದವರು ಕಾಣೆಯಾಗಿದ್ದಾರೆ. ಅವರ ಕುಟುಂಬಸ್ಥರು ಮಹಾನಗರ ದಲ್ಲಿ ಕುಳಿತಿದ್ದಾರೆ. ಒತ್ತಡವೋ, ಒಪ್ಪಿತವೋ, ಅಸಹಾಯಕತೆಯಿಂದ ಲೂ ಸಂತ್ರಸ್ತರಾದವರು ಬೇಗುದಿಯಲ್ಲಿ ದಿನ ಕಳೆಯುತ್ತಿದ್ದಾರೆ. ಇವ್ಯಾವುದರ ಪರಿವೆಯೇ ಇಲ್ಲದ, ಘನತೆಯಿಂದ ಬದುಕುತ್ತಿದ್ದ ಸಾಮಾನ್ಯ ಜನರು ನಿತ್ಯ ಸಂಘರ್ಷ ಎದುರಿಸುವಂತಾಗಿದೆ’ ಎಂದು
ಆತಂಕಗೊಂಡರು.
ಇನ್ನೊಂದು ಪ್ರಕರಣದಲ್ಲಿ, ಪೆನ್ ಡ್ರೈವ್ ನೋಡಿದ ಪತಿಯೊಬ್ಬರು ಪತ್ನಿ ಮೇಲೆ ಹಲ್ಲೆ ನಡೆಸಿದ್ದು, ಆ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೊಳೆನರಸೀಪುರದ ವಕೀಲರೊಬ್ಬರು ಮಾಹಿತಿ ನೀಡಿದರು.
‘ಅಣ್ಣ’ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದಾರೆ. ಧ್ವನಿ ಎತ್ತಿದವರೂ ಇನ್ನು ಮೌನಕ್ಕೆ ಶರಣಾಗುವ ಸಾಧ್ಯತೆಯೇ ಹೆಚ್ಚು. ಸಂತ್ರಸ್ತೆಯರ ಕುಟುಂಬವನ್ನು ‘ಸಮಾಧಾನಿಸುವ ಯತ್ನ’ಗಳು ಮರೆಯಲ್ಲಿ ಸಾಗಿವೆ ಎನ್ನುತ್ತಾರೆ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.