ADVERTISEMENT

ಪೆನ್‌ಡ್ರೈವ್ ಪ್ರಕರಣ: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರಜ್ವಲ್ ರೇವಣ್ಣ ಬಂಧನ

ಜರ್ಮನಿಯಿಂದ ಬಂದ ಸಂಸದ, ಸಿಐಡಿ ಸೆಲ್‌ನಲ್ಲಿ ಇರಿಸಿ ಎಸ್‌ಐಟಿ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 30 ಮೇ 2024, 22:43 IST
Last Updated 30 ಮೇ 2024, 22:43 IST
<div class="paragraphs"><p>ಪ್ರಜ್ವಲ್ ರೇವಣ್ಣ</p></div>

ಪ್ರಜ್ವಲ್ ರೇವಣ್ಣ

   

ಬೆಂಗಳೂರು: ‘ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ’ ಆರೋಪದಡಿ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ತಡರಾತ್ರಿ ಬಂಧಿಸಿದ್ದಾರೆ.

ಲೋಕಸಭಾ ಚುನಾವಣೆಯ ಮತದಾನದ ನಂತರ ದೇಶದಿಂದ ಪರಾರಿಯಾಗಿದ್ದ ಪ್ರಜ್ವಲ್, 35 ದಿನಗಳ ಬಳಿಕ ಜರ್ಮನಿಯಿಂದ ನಗರದ ವಿಮಾನ ನಿಲ್ದಾಣಕ್ಕೆ ಗುರುವಾರ ತಡರಾತ್ರಿ 12.50 ಗಂಟೆಗೆ ಸುಮಾರಿಗೆ ಬಂದಿಳಿದರು. ನಿಲ್ದಾಣದಲ್ಲಿ ಮೊಕ್ಕಾಂ ಹೂಡಿದ್ದ ಎಸ್‌ಐಟಿ ಅಧಿಕಾರಿಗಳು, ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) ಸಿಬ್ಬಂದಿ ಹಾಗೂ ವಲಸೆ ಅಧಿಕಾರಿಗಳ ಸಹಾಯದಿಂದ ಪ್ರಜ್ವಲ್‌ ನನ್ನು ಬಂಧಿಸಿದರು.

ADVERTISEMENT

ಹೊಳೆನರಸೀಪುರ ಟೌನ್ ಹಾಗೂ ಸಿಐಡಿ ಠಾಣೆಗಳಲ್ಲಿ ದಾಖಲಾಗಿರುವ ‘ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ’ ಪ್ರಕರಣದ ಪ್ರಮುಖ ಆರೋಪಿ ಪ್ರಜ್ವಲ್, ಬಂಧನ ಭೀತಿಯಲ್ಲಿ ತಲೆಮರೆಸಿ ಕೊಂಡಿದ್ದ. ಇವರ ಬಂಧನಕ್ಕೆ ಬ್ಲೂ ಕಾರ್ನರ್ ನೋಟಿಸ್ ಹಾಗೂ ನ್ಯಾಯಾಲಯದಿಂದ ವಾರಂಟ್ ಜಾರಿಯಾಗಿತ್ತು.

ಪ್ರಕರಣದ ಸಂಬಂಧ ಅಜ್ಞಾತ ಸ್ಥಳದಿಂದ ಇತ್ತೀಚೆಗೆ ವಿಡಿಯೊ ಬಿಡುಗಡೆ ಮಾಡಿದ್ದ ಪ್ರಜ್ವಲ್, ‘ಮೇ 31ರಂದು ಶುಕ್ರವಾರ ಎಸ್‌ಐಟಿ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗುತ್ತೇನೆ’ ಎಂದು ಹೇಳಿದ್ದರು.

ಟರ್ಮಿನಲ್‌ 2ಕ್ಕೆ ಬಂದಿಳಿದ ವಿಮಾನ: ‘ಜರ್ಮನಿಯಲ್ಲಿ ಇದ್ದರು’ ಎನ್ನಲಾದ ಪ್ರಜ್ವಲ್ ರೇವಣ್ಣ, ಅಲ್ಲಿಯ ಮ್ಯೂನಿಕ್‌ ನಗರದ ನಿಲ್ದಾಣದಿಂದ ವಿಮಾನದಲ್ಲಿ (ಲುಫ್ತಾನ್ಸಾ ಏರ್‌ಲೈನ್ಸ್‌ನ ಎಲ್‌ಎಚ್‌–764) ಗುರುವಾರ ಮಧ್ಯಾಹ್ನ ಬೆಂಗಳೂರಿನತ್ತ ಹೊರಟಿದ್ದರು. ತಡರಾತ್ರಿ 12.50 ಗಂಟೆ ಸುಮಾರಿಗೆ ಬೆಂಗಳೂರಿನ ನಿಲ್ದಾಣದ ಟರ್ಮಿನಲ್‌–2ಕ್ಕೆ ವಿಮಾನ ಬಂದಿಳಿಯಿತು.

ಕೆಲ ನಿಮಿಷಗಳ ನಂತರ ವಿಮಾನದಿಂದ ಇಳಿದ ಪ್ರಜ್ವಲ್ ರೇವಣ್ಣ, ಗೇಟ್‌ ಮೂಲಕ ನಿಲ್ದಾಣದೊಳಗೆ ಪ್ರವೇಶಿಸಿದರು. ಸ್ಥಳದಲ್ಲಿ ಹಾಜರಿದ್ದ ಭದ್ರತಾ ಸಿಬ್ಬಂದಿ ಹಾಗೂ ವಲಸೆ ಅಧಿಕಾರಿಗಳು, ಪ್ರಜ್ವಲ್ ಅವರನ್ನು ವಶಕ್ಕೆ ಪಡೆದು ವಿಶೇಷ ಕೊಠಡಿಗೆ ಕರೆದೊಯ್ದು ಪರಿಶೀಲನೆ ನಡೆಸಿದರು. ಪ್ರಜ್ವಲ್ ಅವರ ಬೆರಳಚ್ಚು ಹಾಗೂ ಫೋಟೊ ಕ್ಲಿಕ್ಕಿಸಿಕೊಂಡು ದಾಖಲಿಸಿಕೊಂಡರು.

ನಿಲ್ದಾಣದಲ್ಲಿ ಹಾಜರಿದ್ದ ಎಸ್‌ಐಟಿ ಹಿರಿಯ ಅಧಿಕಾರಿಗಳು, ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಪ್ರಜ್ವಲ್ ಅವರನ್ನು ವಶಕ್ಕೆ ಪಡೆದು ನಿಲ್ದಾಣದಿಂದ ಹೊರಗೆ ಕರೆತಂದರು. ವಿಶೇಷ ವಾಹನದಲ್ಲಿ ಪ್ರಜ್ವಲ್ ಅವರನ್ನು ಬಳ್ಳಾರಿ ರಸ್ತೆ ಮೂಲಕ ಅರಮನೆ ರಸ್ತೆಯಲ್ಲಿರುವ ಸಿಐಡಿ ಕಟ್ಟಡದ ಎಸ್‌ಐಟಿ ಕಚೇರಿಗೆ ಕರೆದೊಯ್ದರು.

ವಿಮಾನ ನಿಲ್ದಾಣ, ಬಳ್ಳಾರಿ ರಸ್ತೆಯುದ್ದಕ್ಕೂ ಹಾಗೂ ಎಸ್‌ಐಟಿ ಕಚೇರಿ ಸುತ್ತಮುತ್ತ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬಿಗಿ ಭದ್ರತೆ ಕೈಗೊಂಡಿದ್ದರು.

‘ಆಸ್ಪತ್ರೆಯಲ್ಲಿ ತಪಾಸಣೆ’

ಎಸ್ಐಟಿ ಕಚೇರಿಗೆ ಕರೆದೊಯ್ಯುವುದಕ್ಕೂ ಮುನ್ನ ಪ್ರಜ್ವಲ್ ಅವರನ್ನು ವಿಮಾನ ನಿಲ್ದಾಣ ಬಳಿಯ ಖಾಸಗಿ ಆಸ್ಪತ್ರೆಗೆ 1.25 ಗಂಟೆ ಸುಮಾರಿಗೆ ಕರೆದೊಯ್ಯಲಾಯಿತು. ಅಲ್ಲಿಯೇ ಪ್ರಜ್ವಲ್ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ವೈದ್ಯರ ತಪಾಸಣೆ ಮುಕ್ತಾಯಗೊಂಡ ಬಳಿಕ ಪ್ರಜ್ವಲ್ ಅವರನ್ನು ವಿಶೇಷ ವಾಹನದಲ್ಲಿ ಎಸ್‌ಐಟಿ ಕಚೇರಿಯತ್ತ ಕರೆದೊಯ್ಯ ಲಾಯಿತು.

ವಿಮಾನ ನಿಲ್ದಾಣ, ಬಳ್ಳಾರಿ ರಸ್ತೆಯುದ್ದಕ್ಕೂ ಹಾಗೂ ಎಸ್‌ಐಟಿ ಕಚೇರಿ ಸುತ್ತಮುತ್ತ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬಿಗಿ ಭದ್ರತೆ ಕೈಗೊಂಡಿದ್ದರು.

‘ನ್ಯಾಯಾಲಯಕ್ಕೆ ಹಾಜರು ಸಾಧ್ಯತೆ’

ಸಿಐಡಿ ಕಟ್ಟಡದಲ್ಲಿರುವ ಸೆಲ್‌ನಲ್ಲಿ ಪ್ರಜ್ವಲ್ ಅವರನ್ನು ಇರಿಸಿರುವ ಎಸ್‌ಐಟಿ ಅಧಿಕಾರಿಗಳು, ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ. ಜೊತೆಗೆ, ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲು ಸಿದ್ಧತೆ ಮಾಡಿಕೊಂಡಿದ್ದಾರೆ.

‘ಪ್ರಜ್ವಲ್ ಬಂಧನಕ್ಕೆ ನ್ಯಾಯಾಲಯದಿಂದ ವಾರಂಟ್ ಜಾರಿಯಲ್ಲಿದೆ. ಹೀಗಾಗಿ, ಪ್ರಜ್ವಲ್ ಅವರನ್ನು ಬಂಧಿಸಲಾಗಿದೆ.  ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಪ್ರಕರಣದಲ್ಲಿ ಇದುವರೆಗೂ ಕಲೆಹಾಕಿರುವ ಮಾಹಿತಿಯನ್ನು ನ್ಯಾಯಾಲಯಕ್ಕೆ ತಿಳಿಸಲಾಗುವುದು. ಆರೋಪಿ ವಿಚಾರಣೆ ಅಗತ್ಯವಿರುವುದಾಗಿ ನ್ಯಾಯಾಲಯಕ್ಕೆ ಹೇಳಿ ಕಸ್ಟಡಿಗೆ ಪಡೆಯಲಾಗುವುದು’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.