ಹಾವೇರಿ: ಶರಣರು, ಶರೀಫರು, ಕನಕದಾಸರ ಪ್ರಭಾವದ ಈ ನೆಲದಲ್ಲಿ, ಬಿಜೆಪಿಯು ಮೋದಿ ಅಲೆ ಜೊತೆಗೆ ಲಿಂಗಾಯತ ಮತ ಸಮೀಕರಣಕ್ಕೆ ಮೊರೆ ಹೋದರೆ, ಕಾಂಗ್ರೆಸ್ ಸತತ 14 ಚುನಾವಣೆಗಳ ಬಳಿಕ ಮುಸ್ಲಿಮೇತರ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. 10 ಮಂದಿ ಕಣದಲ್ಲಿದ್ದರೂ, ಬಿಜೆಪಿಯ ಶಿವಕುಮಾರ ಉದಾಸಿ ಹಾಗೂ ಕಾಂಗ್ರೆಸ್‌ನ ಡಿ.ಆರ್. ಪಾಟೀಲ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
ಬಿಜೆಪಿ ಬೆಂಬಲದೊಂದಿಗೆ 1998ರಲ್ಲಿ ಸ್ಪರ್ಧಿಸಿದ್ದ ಲೋಕಶಕ್ತಿಯ ಬಿ.ಎಂ.ಮೆಣಸಿನಕಾಯಿ ಇಲ್ಲಿ ಗೆದ್ದಿದ್ದರು. ಅದು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಮೊದಲ ಸೋಲಾಗಿತ್ತು. ಆಗ, ‘ಲಿಂಗಾಯತ’ ಮತ ಸಮೀಕರಣದ ಸೂತ್ರ ಯಶಸ್ಸು ಕಂಡಿತ್ತು. ಇದೇ ‘ಸೂತ್ರ’ಕ್ಕೆ ಮೃದು ಹಿಂದುತ್ವ ಸೇರಿಸಿಕೊಂಡು2004ರಲ್ಲಿ ತಾನೇ ಕಣಕ್ಕಿಳಿದ ಬಿಜೆಪಿಯು ಹ್ಯಾಟ್ರಿಕ್ (2004, 2009, 2014) ಗೆಲುವು ಕಂಡಿದೆ.ಈಗ, ಇದೇ ಸೂತ್ರಕ್ಕೆ ಕಾಂಗ್ರೆಸ್ ಮಣೆ ಹಾಕಿದೆ. ಸತತ 14 ಚುನಾವಣೆಗಳ ಬಳಿಕ ‘ಹಿಂದೂ’ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.
2009ರಲ್ಲಿ ಬಿ.ಎಸ್. ಯಡಿಯೂರಪ್ಪ ಹಾಗೂ 2014ರಲ್ಲಿ ಮೋದಿ ಅಲೆಯಲ್ಲಿ ತೇಲಿ ದಡ ಸೇರಿದ್ದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ, ಈ ಬಾರಿಯೂ ‘ಮೋದಿ ಅಲೆ’ ನೆಚ್ಚಿಕೊಂಡು, ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದಾರೆ.
ಬಿಜೆಪಿ ಅಭ್ಯರ್ಥಿಯು ಶಾಸಕ ಸಿ.ಎಂ. ಉದಾಸಿ ಪುತ್ರ. ಕಾಂಗ್ರೆಸ್ ಅಭ್ಯರ್ಥಿ ಶಾಸಕ ಎಚ್.ಕೆ. ಪಾಟೀಲ ಸಹೋದರ. ಇಬ್ಬರೂ ಲಿಂಗಾಯತ ಮತಗಳ ಮೇಲೆ ಕಣ್ಣಿಟ್ಟಿದ್ದು, ‘ಒಳಪಂಗಡ’ಗಳ ಆಟಗಳು ಮುಂಚೂಣಿಗೆ ಬಂದಿವೆ. ವಿಧಾನಸಭಾ ಚುನಾವಣೆಯ ಟಿಕೆಟ್ ಹಂಚಿಕೆಯ ಗೊಂದಲಗಳೂ ಅಲ್ಲಲ್ಲಿ ಸದ್ದು ಮಾಡುತ್ತಿವೆ.
ಸಂಘ ಪರಿವಾರದ ‘ಯುವ ಪಡೆ’ ವರ್ಷದ ಹಿಂದಿನಿಂದಲೇ ಬಿಜೆಪಿ ಪರ ಕೆಲಸ ಮಾಡಿದೆ. ಇನ್ನೊಂದೆಡೆ ಬುರ್ಕಾ ವಿವಾದ, ಹಿರೂರು ಮತ್ತಿತರ ಪ್ರಕರಣಗಳು ಕ್ಷೇತ್ರದಲ್ಲಿ ಸದ್ದು ಮಾಡಿದ್ದವು.ಆದರೆ, ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಬಳಿಕ ಇವೆಲ್ಲ ತೆರೆಮರೆಗೆ ಸರಿದಿವೆ. 2004ರಿಂದ ಈ ತನಕ ಹೆಚ್ಚಾಗಿರುವ 4.98 ಲಕ್ಷ ಮತದಾರರ (ಬಹುತೇಕರು 35 ವರ್ಷದೊಳಗಿನವರು) ಕಡೆ ಬಿಜೆಪಿ ಒಲವು ನೆಟ್ಟಿದೆ. ದೇಶದ ಭದ್ರತೆ ವಿಚಾರ ಮುಂಚೂಣಿಗೆ ಬಂದಿದೆ.
ತಮ್ಮ ಕೆಲಸವನ್ನು ಪ್ರಶ್ನಿಸಿದವರಿಗೆ, ‘ಸಂಸತ್ತಿನಲ್ಲಿ ಅಧಿಕ ಹಾಜರಾತಿ, ಕೇಂದ್ರದ ಯೋಜನೆಗಳನ್ನು ರೂಪಿಸುವಲ್ಲಿ ನೀಡಿದ ಕೊಡುಗೆ, ಕ್ಷೇತ್ರದಲ್ಲಿನ ಫಲಾನುಭವಿಗಳು ಮತ್ತು ಕಾಮಗಾರಿಗಳ ಪಟ್ಟಿ, ಹಳ್ಳಿ ಹಳ್ಳಿಗೂ ಓಡಾಡಿದ ದಿನಚರಿಯನ್ನು’ ಸಂಸದರು ದಾಖಲೆ ಸಹಿತ ಮುಂದಿಡುತ್ತಿದ್ದಾರೆ.
ಡಿ.ಆರ್. ಪಾಟೀಲರು ಸತತ ನಾಲ್ಕು ಬಾರಿ ಗದಗದ ಶಾಸಕರಾಗಿದ್ದರು. ಗಾಂಧಿವಾದ, ವಿವೇಕಾನಂದ ವಿಚಾರಧಾರೆಗಳು, ಗ್ರಾಮೀಣಾಭಿವೃದ್ಧಿ ಹಾಗೂ ಸರಳ ವ್ಯಕ್ತಿತ್ವ ಅವರಿಗೆ ಪೂರಕವಾಗಿದೆ. ಕಾಂಗ್ರೆಸ್, ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಸಾಧನೆಗಳಿಗೆ ಒತ್ತು ನೀಡುತ್ತಿದೆ.
‘ಗದಗದಲ್ಲಿ ಈ ಬಾರಿಯ ಚಿತ್ರಣ ಬದಲಾಗಿದೆ. ಇದೇ ಪ್ರಭಾವ ಹಾವೇರಿಯಲ್ಲೂ ಕಾಣುತ್ತಿದೆ’ ಎಂದು ಡಿ.ಆರ್. ಪಾಟೀಲ ಹೇಳುತ್ತಾರೆ.
ಅಭ್ಯರ್ಥಿಗಳ ನಡುವೆ ಸಾತ್ವಿಕ ಸಮರವಿದೆ. ಆದರೆ, ‘ಮೋದಿ ಅಲೆ’ಯನ್ನು ಅಳಿಸಲು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ ವಿವಿಧ ಪ್ರಯತ್ನಗಳನ್ನು ನಡೆಸಿದ್ದಾರೆ. 83ರ ಹರೆಯದಲ್ಲೂ ಶಾಸಕ ಸಿ.ಎಂ. ಉದಾಸಿ ಅವರ ಸಂಘಟನಾತ್ಮಕ ಓಡಾಟ, ಬಿಜೆಪಿಗೆ ಬಲ ನೀಡಿದೆ.
ಕ್ಷೇತ್ರವು ಗದಗದ ಮೂರು ಹಾಗೂ ಹಾವೇರಿಯ ಐದು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಕಳೆದ ಬಾರಿ ಬಿಜೆಪಿಯು ಗದಗ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ 40,742 ಹಾಗೂ ಜಿಲ್ಲೆಯ ಹಿರೇಕೆರೂರಿನಲ್ಲಿ 15,425 ಮತಗಳನ್ನು ಪಡೆದಿತ್ತು.
ಇದನ್ನೂ ಓದಿ:ಹಾಜರಾತಿಯಲ್ಲಿ ಉದಾಸಿ, ಕಟೀಲ್, ಎಸ್ಪಿಎಂ ಮುಂದೆ
‘ನಮ್ಮ ಅಭ್ಯರ್ಥಿ ಗದುಗಿನವರು. ಹಿರೇಕೆರೂರಿನಲ್ಲಿ ಈಗ ಕಾಂಗ್ರೆಸ್ ಶಾಸಕರಿದ್ದಾರೆ. ಮಾಜಿ ಶಾಸಕ ಶ್ರೀಶೈಲ ಬಿದರೂರ ಕಾಂಗ್ರೆಸ್ ಸೇರಿದ್ದಾರೆ. ಬಲ ಹೆಚ್ಚುತ್ತಿದೆ’ ಎನ್ನುತ್ತಾರೆ ಕಾಂಗ್ರೆಸ್ಸಿಗರು. ಶಾಸಕ ಆರ್. ಶಂಕರ (ಕೆಪಿಜೆಪಿ) ಅಖಾಡದಿಂದ ‘ನಾಪತ್ತೆ’ಯಾಗಿದ್ದಾರೆ.
‘ಕಳೆದ ಬಾರಿ ಏಳು ಮಂದಿ ಕಾಂಗ್ರೆಸ್ ಹಾಗೂ ಒಬ್ಬರು ಬಿಜೆಪಿ ಶಾಸಕರಿದ್ದರು. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಶಿರಹಟ್ಟಿ, ರೋಣ, ಬ್ಯಾಡಗಿ, ಹಾವೇರಿಯಲ್ಲಿ ಬಿಜೆಪಿ ಭಾರಿ ಅಂತರದಿಂದ ಜಯಿಸಿದೆ. ಹೀಗಾಗಿ ನಮ್ಮ ಗೆಲುವಿನ ಅಂತರ ಹೆಚ್ಚಲಿದೆ’ ಎಂಬುದು ಬಿಜೆಪಿಯವರ ವಿಶ್ವಾಸ.
ಕಳೆದ ಬಾರಿಯ ಅಭ್ಯರ್ಥಿ ಸಲೀಂ ಅಹ್ಮದ್ ಹಾಗೂ ಈ ಬಾರಿ ಟಿಕೆಟ್‌ಗೆ ಪ್ರಯತ್ನಿಸಿದ್ದ ಮಾಜಿ ಸಚಿವ ಬಸವರಾಜ ಶಿವಣ್ಣನವರ ಬೆಂಬಲಿಗರೂ ಈಗ ನಿರ್ಣಾಯಕರಾಗಿದ್ದಾರೆ. ಆರು ಮುಸ್ಲಿಮರು ನಾಮಪತ್ರ ಸಲ್ಲಿಸಿದ್ದರು. ಐವರನ್ನು ಕಣದಿಂದ ಹಿಂದಕ್ಕೆ ಸರಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಆದರೆ, ಬಿಎಸ್ಪಿಯ ಅಯೂಬ್ ಖಾನ್ ಪಠಾಣ ಕಣದಲ್ಲಿದ್ದಾರೆ. ಉಭಯ ಜಿಲ್ಲೆಗಳಲ್ಲಿ ‘ಪಾರುಪತ್ಯ’ ಸಾಧಿಸುವ ಸಲುವಾಗಿ ಲಿಂಗಾಯತ ಒಳಪಂಗಡಗಳ ಪೈಪೋಟಿಯೂ ತೀವ್ರಗೊಂಡಿದೆ. ಜೆಡಿಎಸ್,ಕ್ಷೇತ್ರದಲ್ಲಿ 2014ರಲ್ಲಿ ಶೇ 0.88 (ಲೋಕಸಭೆ) ಹಾಗೂ 2018ರಲ್ಲಿ ಶೇ 1.15 (ವಿಧಾನಸಭೆ) ಮತಗಳನ್ನಷ್ಟೇ ಗಳಿಸಿದೆ. ಈ ಬಾರಿ ಕಾಂಗ್ರೆಸ್ ಬೆಂಬಲಿಸಿದೆ.
ರೈತರ ಸಂಖ್ಯೆ– ಸಂಘಟನೆಗಳು ಹೆಚ್ಚಿದ್ದರೂ, ರಾಜಕೀಯವಾಗಿ ನಿರ್ಣಾಯಕ ರೂಪ ಪಡೆದಿಲ್ಲ. ನಾಲ್ಕು ನದಿಗಳಿದ್ದೂ, ನೀರಿನ ಸಮಸ್ಯೆ ಬಗೆಹರಿದಿಲ್ಲ. ಹೇಳಿಕೊಳ್ಳುವ ಕೈಗಾರಿಕೆಗಳೂ ಇಲ್ಲ. ಯಾವುದೇ ಪ್ರಮುಖ ಯೋಜನೆಗಳು ಪೂರ್ಣಗೊಂಡಿಲ್ಲ. ಆದರೆ, ಯಾವುವೂ ಪ್ರಚಾರದಲ್ಲಿ ಸುದ್ದಿ ಮಾಡುತ್ತಿಲ್ಲ.
ಅಭ್ಯರ್ಥಿಗಳು, ಜನರಪ್ರತಿಕ್ರಿಯೆ
‘ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳು ಕ್ಷೇತ್ರದಲ್ಲಿ ಹೆಚ್ಚಿದ್ದಾರೆ. ದೇಶದ ಸುಭದ್ರ ಆಡಳಿತಕ್ಕಾಗಿ, ಜನತೆ ಮತ್ತೊಮ್ಮೆ ಮೋದಿ ಎನ್ನುತ್ತಿದ್ದಾರೆ’ ಎನ್ನುವುದು ಬಿಜೆಪಿ ಅಭ್ಯರ್ಥಿಶಿವಕುಮಾರ ಉದಾಸಿ ವಿಶ್ವಾಸ.
‘ನೋಟು ರದ್ದತಿ ಹಾಗೂ ಜಿಎಸ್‌ಟಿಯಿಂದ ವರ್ತಕರು, ಸಣ್ಣ ಉದ್ಯಮಿಗಳು ಹಾಗೂ ರೈತರು ಸಿಟ್ಟಿನಲ್ಲಿದ್ದಾರೆ. ಇದರಿಂದ ನನಗೆ ಅನುಕೂಲವಾಗಬಹುದು’ ಎನ್ನುವುದು ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್.ಪಾಟೀಲ ಲೆಕ್ಕಾಚಾರ.
‘ಧರ್ಮ– ಜಾತಿ ರಾಜಕೀಯಗಳಿಲ್ಲದ, ಕ್ಷೇತ್ರಕ್ಕೆ ಶ್ರಮಿಸುವ ನಾಯಕರು ಬೇಕು. ಕೇಂದ್ರದ ಯೋಜನೆಗಳ ಕುರಿತು ಜನರಿಗೆ ಸಮರ್ಪಕ ಮಾಹಿತಿ ನೀಡಬೇಕು’ ಎನ್ನುತ್ತಾರೆ ರೋಣದ ಗೃಹಿಣಿ ರೇಖಾ ಮಡಿವಾಳರ.
‘ರೈತರ ಸಮಸ್ಯೆಗಳಿಗೆ ತಕ್ಷಣದ ಸ್ಪಂದನೆ ಹಾಗೂ ನೀರಾವರಿ ಸೇರಿದಂತೆ ಶಾಶ್ವತ ಪರಿಹಾರಗಳು ಬೇಕು. ನಿರುದ್ಯೋಗ ಸಮಸ್ಯೆ ನಿವಾರಣೆ ಆದ್ಯತೆಯಾಗಬೇಕು’ ಎನ್ನುವುದು ಹಾವೇರಿಯ ರೈತ ದೀಪಕ್ ಘಂಟಿಸಿದ್ದಪ್ಪನವರ ಅಭಿಪ್ರಾಯ.
–––
ಇನ್ನಷ್ಟು ಹಾವೇರಿ ಕ್ಷೇತ್ರದ ಚುನಾವಣಾ ಸುದ್ದಿಗಳು
ಪ್ರಜಾವಾಣಿ ವಿಶೇಷಸಂದರ್ಶನಗಳು...
*ನಾನೆಂದೂ ಕುಟುಂಬ ರಾಜಕಾರಣ ಮಾಡಿಲ್ಲ: ದೇವೇಗೌಡ
*ಕುಟುಂಬ ರಾಜಕಾರಣದಿಂದಲೇ ಉಳಿದಿವೆ ಪ್ರಾದೇಶಿಕ ಪಕ್ಷಗಳು: ಕುಮಾರಸ್ವಾಮಿ
*ನಾನು ಈ ಜನ್ಮದಲ್ಲಿ ಯಾವ ರಾಜ್ಯದ ರಾಜ್ಯಪಾಲನೂ ಆಗಲ್ಲ: ಯಡಿಯೂರಪ್ಪ
*ಮೈತ್ರಿ ಸರ್ಕಾರಕ್ಕೆ ನಾನು ಮೂಗುದಾರ ಹಾಕಿಲ್ಲ: ಸಿದ್ದರಾಮಯ್ಯ
*ನಾಯಕರ ಮೌನದಿಂದ ಅವಮಾನವಾಗಿದೆ: ತೇಜಸ್ವಿನಿ ಅನಂತಕುಮಾರ್
*ಬಡವರದ್ದಲ್ಲ, ಕಾಂಗ್ರೆಸ್ನವರ ಗರೀಬಿ ಹಠಾವ್ ಆಯಿತು: ಸದಾನಂದಗೌಡ
*ದಲಿತರನ್ನು ಒಡೆಯಬೇಡಿ, ಎಡಗೈ–ಬಲಗೈ ಅಂತ ಎತ್ತಿಕಟ್ಟಿದರೆ ಯಾರಿಗೂ ಲಾಭವಿಲ್ಲ: ಮಲ್ಲಿಕಾರ್ಜುನ ಖರ್ಗೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.