ADVERTISEMENT

ಶಿಗ್ಗಾವಿ ಉಪಚುನಾವಣೆ: ಬಿಜೆಪಿಗೆ ಬಂಡಾಯದ ಬಿಸಿ

* ಬೆಂಬಲಿಗರ ಸಭೆ ನಡೆಸಿದ ಶ್ರೀಕಾಂತ ದುಂಡಿಗೌಡ್ರ * ಅ. 24ರ ನಂತರ ತೀರ್ಮಾನ ಘೋಷಣೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 0:09 IST
Last Updated 22 ಅಕ್ಟೋಬರ್ 2024, 0:09 IST
<div class="paragraphs"><p>ಶ್ರೀಕಾಂತ ದುಂಡಿಗೌಡ್ರ,&nbsp;ಭರತ್‌ ಬೊಮ್ಮಾಯಿ</p></div>

ಶ್ರೀಕಾಂತ ದುಂಡಿಗೌಡ್ರ, ಭರತ್‌ ಬೊಮ್ಮಾಯಿ

   

ಹಾವೇರಿ: ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಅವರ ಮಗ ಭರತ್‌ಗೆ ಬಿಜೆಪಿ ಟಿಕೆಟ್‌ ಘೋಷಣೆಯಾಗುತ್ತಿದ್ದಂತೆ, ಬಂಡಾಯದ ಬಿಸಿ ಶುರುವಾಗಿದೆ. ಕ್ಷೇತ್ರದ ಬಿಜೆಪಿಯ ಪ್ರಭಾವಿ ಮುಖಂಡ ಶ್ರೀಕಾಂತ ದುಂಡಿಗೌಡ್ರ, ‘ಬಸವರಾಜ ಬೊಮ್ಮಾಯಿ ಅವರು ನನಗೆ ಟಿಕೆಟ್ ಕೊಡಿಸುವುದಾಗಿ  ಭರವಸೆ ನೀಡಿದ್ದರು. ಆದರೆ ಅನ್ಯಾಯ ಮಾಡಿದ್ದಾರೆ. ಅ. 24ರ ನಂತರ ನನ್ನ ನಿರ್ಧಾರ ತಿಳಿಸುವೆ’ ಎಂದು ಬಂಡಾಯದ ಸೂಚನೆ ನೀಡಿದರು.

ಬಿಜೆಪಿ ಟಿಕೆಟ್ ಸಿಗುವ ವಿಶ್ವಾಸದಿಂದಿದ್ದ ಮುಖಂಡ ಶ್ರೀಕಾಂತ ದುಂಡಿಗೌಡ್ರ, ‘ಬಸವರಾಜ ಬೊಮ್ಮಾಯಿ ಅವರು ನನಗೆ ಹಾಗೂ ಕಾರ್ಯಕರ್ತರಿಗೆ ಸುಳ್ಳು ಹೇಳಿಕೊಂಡು ಬಂದರು. ಮಗನಿಗೆ ಟಿಕೆಟ್ ಸಿಗುವ ಬಗ್ಗೆ ನಿಜಾಂಶವನ್ನು ತಿಳಿಸಲಿಲ್ಲ. ಭರತ್‌ಗೆ ಟಿಕೆಟ್ ಬೇಡವೆಂದು ವರಿಷ್ಠರಿಗೆ ತಿಳಿಸಿರುವುದಾಗಿಯೂ ಹೇಳಿದ್ದರು. ಆದರೆ, ಇದೀಗ ಭರತ್‌ಗೆ ಟಿಕೆಟ್ ಸಿಕ್ಕಿದೆ. ನನಗೂ ಹಾಗೂ ಬೆಂಬಲಿಗರಿಗೆ ಬಹಳ ನೋವಾಗಿದೆ. ಬೊಮ್ಮಾಯಿ ಅವರು ಟಿಕೆಟ್ ಘೋಷಣೆಯಾಗುವವರೆಗೂ ಸತ್ಯವನ್ನು ಹೇಳದೇ ಅನ್ಯಾಯ ಮಾಡಿದರು’ ಎಂದು ದೂರಿದರು.

ADVERTISEMENT

ಭಾರತ್ ಸೇವಾ ಸಂಸ್ಥೆಯ ಅಧ್ಯಕ್ಷರಾಗಿರುವ ಅವರು ಹಲವು ವರ್ಷಗಳಿಂದ ಬಿಜೆಪಿಯಲ್ಲಿದ್ದಾರೆ. ಅವರ ಪತ್ನಿ ಶಕುಂತಲಾ, ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಸದಸ್ಯೆ.

ಶಿಗ್ಗಾವಿ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಅವಧಿಯಲ್ಲಿ ಶಾಸಕರಾಗಿದ್ದ ಬಸವರಾಜ ಬೊಮ್ಮಾಯಿ, ಉಪ ಚುನಾವಣೆಯಲ್ಲಿ ಕಾರ್ಯಕರ್ತರಿಗೆ ಟಿಕೆಟ್ ಕೊಡಿಸಬಹುದೆಂಬ ಲೆಕ್ಕಾಚಾರ ಮುಖಂಡರದ್ದಾಗಿತ್ತು. ಆದರೆ, ಅವರ ಪುತ್ರನಿಗೆ ಇದೀಗ ಟಿಕೆಟ್ ಸಿಕ್ಕಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕೆಲ ಕಾರ್ಯಕರ್ತರು, ಸೋಮವಾರ ಸಭೆ ನಡೆಸಿ ತಮ್ಮ ಮುಂದಿನ ನಡೆ ಬಗ್ಗೆ ಚರ್ಚಿಸಿದರು.

‘ಶ್ರೀಕಾಂತ ದುಂಡಿಗೌಡ್ರ ಅವರು ನಮ್ಮ ನಾಯಕರು’ ಎಂಬುದಾಗಿ ಹೇಳಿಕೊಂಡು ಸಭೆ ಸೇರಿದ್ದ ಬೆಂಬಲಿಗರು, ‘ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಆಸ್ಪದವಿಲ್ಲವೆಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿದ್ದಾರೆ. ಆದರೆ, ಇಲ್ಲಿ ಶಾಸಕರ ಮಗನೇ ಶಾಸಕ ಸ್ಥಾನದ ಅಭ್ಯರ್ಥಿಯಾಗಿದ್ದಾರೆ. ಇದು ಯಾವ ಸಾಮಾಜಿಕ ನ್ಯಾಯ’ ಎಂದು ಪ್ರಶ್ನಿಸಿದರು.

‘ಕುಟುಂಬ ರಾಜಕಾರಣವನ್ನು ಕ್ಷೇತ್ರದ ಜನರು ಒಪ್ಪುವುದಿಲ್ಲ. ಜನಪರವಾಗಿರುವ ಶ್ರೀಕಾಂತ ದುಂಡಿಗೌಡ್ರ ಅವರು ಈ ಬಾರಿ ಪಕ್ಷೇತರರಾಗಿ ಸ್ಪರ್ಧಿಸಬೇಕು’ ಎಂದು ಬೆಂಬಲಿಗರು ಒತ್ತಾಯಿಸಿದರು.

ಸಭೆಯಲ್ಲಿ ಮಾತನಾಡಿದ ಶ್ರೀಕಾಂತ ದುಂಡಿಗೌಡ್ರ, ‘ಬಸವರಾಜ ಬೊಮ್ಮಾಯಿ ನಮ್ಮ ನಾಯಕರು. ನಾಲ್ಕು ಅವಧಿಯಲ್ಲಿಯೂ ಅವರ ಪರವಾಗಿ ಕೆಲಸ ಮಾಡಿದ್ದೇವೆ. ನನಗೆ ಟಿಕೆಟ್ ಕೊಡಿಸುವುದಾಗಿ ಅವರು ಭರವಸೆ ನೀಡಿದ್ದು ಹುಸಿ ಹೋಗಿದೆ.  ಮುಂದಿನ ನಡೆ ಬಗ್ಗೆ ಬೆಂಬಲಿಗರ ಜೊತೆ ಸೇರಿ ಚರ್ಚಿಸುವೆ’ ಎಂದು ಹೇಳಿದರು.

ಯಾರಿಗೂ ಮಾತು ಕೊಟ್ಟಿಲ್ಲ: ಬೊಮ್ಮಾಯಿ

ಶ್ರೀಕಾಂತ್ ದುಂಡಿಗೌಡ್ರ ಅವರು ಬೆಂಬಲಿಗರ ಸಭೆ ನಡೆಸಿದ್ದ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ಬಸವರಾಜ ಬೊಮ್ಮಾಯಿ ‘ಟಿಕೆಟ್ ಕೊಡಿಸುವ ಬಗ್ಗೆ ನಾನು ಯಾರಿಗೂ ಭರವಸೆ ನೀಡಿರಲಿಲ್ಲ’ ಎಂದರು. ‘ಸುಮಾರು 50 ಆಕಾಂಕ್ಷಿಗಳಿದ್ದರು. ಪಕ್ಷದ ನಿರ್ಧಾರಕ್ಕೆ ಬದ್ಧವಾಗಿರುವಂತೆ ಎಲ್ಲರಿಗೂ ಹೇಳಲಾಗಿತ್ತು. ಟಿಕೆಟ್ ಘೋಷಣೆಯಾಗಿರುವುದು ನನ್ನ ನಿರ್ಣಯವಲ್ಲ. ಅದರು ಪಕ್ಷದ ನಿರ್ಣಯ. ನನ್ನ ಮಗನನ್ನು ನಿಲ್ಲಿಸಲು ಆಸಕ್ತಿ ಇರಲಿಲ್ಲ. ಕೊನೆ ಗಳಿಗೆಯವರೆಗೂ ಟಿಕೆಟ್ ಬೇಡವೆಂದು ಹೇಳಿದ್ದೆ. ಅಂತಿಮವಾಗಿ ಹೈಕಮಾಂಡ್ ಟಿಕೆಟ್ ನೀಡಿದೆ. ಗೆಲ್ಲುವ ದೃಷ್ಟಿಯಿಂದ ಟಿಕೆಟ್ ನೀಡಿದೆ. ಪಕ್ಷದ ಆದೇಶ ಪಾಲನೆ ನನ್ನ ಕಾರ್ಯ’ ಎಂದು ಹೇಳಿದರು. ‘ನನ್ನ ಕಾರ್ಯಕರ್ತರಿಗೆ ಅನ್ಯಾಯ ಮಾಡಿಲ್ಲ. ಶ್ರೀಕಾಂತ್ ದುಂಡಿಗೌಡ್ರ ಅವರಿಗೆ ಕ್ಯಾಬಿನೆಟ್ ಸ್ಥಾನ ನೀಡಿದ್ದೇನೆ. ಬೆಂಬಲಿಗರ ಜೊತೆ ಸಭೆ ನಡೆಸಿರುವ ಅವರ ಜೊತೆ ಮಾತನಾಡುವೆ’ ಎಂದರು.

ಬಸವರಾಜ ಬೊಮ್ಮಾಯಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.