ADVERTISEMENT

‘ಕನ್ಯಾ ಸಂಸ್ಕಾರವನ್ನು ಅನಗತ್ಯವಾಗಿ ವಿರೋಧಿಸುವುದು ಏಕೆ?’

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2018, 5:35 IST
Last Updated 31 ಡಿಸೆಂಬರ್ 2018, 5:35 IST

ಬೆಂಗಳೂರು: ‘ಕನ್ಯಾ ಸಂಸ್ಕಾರವನ್ನು ವಿರೋಧಿಸುವವರು ಸ್ತ್ರೀ ಸಮಾಜದ ಪೋಷಕರೋ, ಅಲ್ಲವೋ ಎನ್ನುವ ಪ್ರಶ್ನೆಯನ್ನು ನಾವು ಹಾಕಿಕೊಳ್ಳಬೇಕಾದ ಅವಶ್ಯಕತೆ ಇದೆ’ ಎಂದು ವಿದ್ವಾನ್‌ ರಾಮಕೃಷ್ಣ ಭಟ್‌ ಕೂಟೇಲು ಹೇಳಿದರು.

‘ಹವ್ಯಕರ ಹಬ್ಬ ಹರಿದಿನಗಳು’ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಕನ್ಯಾ ಸಂಸ್ಕಾರವು ಸ್ತ್ರೀಯರಿಗೆ ನೀಡುವ ಅತ್ಯುತ್ತಮ ಸಂಸ್ಕಾರ.ಭೋದಾಯನಚಾರ್ಯರು ಹೇಳಿರುವ ಸಂಸ್ಕಾರವನ್ನು ನಾವು ಪುನಃ ಪ್ರಾರಂಭಿಸಿದ್ದೇವೆ ಅಷ್ಟೆ. ಯಾರು ಹೆಣ್ಣು ಮಕ್ಕಳ ಉಜ್ವಲ ಭವಿಷ್ಯವನ್ನು ಬಯಸುತ್ತಾರೋ ಅವರು ಇದಕ್ಕೆ ಸಹಕಾರ ನೀಡಬೇಕು. ಈ ಸಂಸ್ಕಾರವು ಯೋಗ್ಯವೆಂದು ಪೋಷಕರೇ ಹೇಳುತ್ತಿರುವಾಗ, ಈ ಹೆಣ್ಣು ಮಕ್ಕಳಿಗೆ ಯಾವ ರೀತಿಯಲ್ಲೂ ಸಂಬಂಧ ಪಡೆದವರು ಇದನ್ನು ವಿರೋಧಿಸುವುದು ಎಷ್ಟು ಸರಿ’ ಎಂದು ಅವರು ಪ್ರಶ್ನಿಸಿದರು.

ADVERTISEMENT

‘ಹೆಣ್ಣು ಕುಲದ ಕಣ್ಣು ಎನ್ನುತ್ತಾರೆ. ಅವರು ಹುಟ್ಟಿದಾಗ ಜಾತಕಾದಿಕರ್ಮಗಳು ಆಗದೇ ಇದ್ದಲ್ಲಿ, ಕನ್ಯಾ ಸಂಸ್ಕಾರ ನೀಡಲಾಗುತ್ತದೆ. ಸ್ವರ್ಣವಲ್ಲಿ ಮಠದಲ್ಲಿ ಮೊದಲಿದೆ ಇದು ಪ್ರಾರಂಭವಾದದ್ದು. ನಂತರ 2007ರಲ್ಲಿ ರಾಮಚಂದ್ರಾಪುರ ಮಠದಲ್ಲಿ ಇದನ್ನು ಪ್ರಾರಂಭಿಸಲಾಯಿತು. ಸ್ವರ್ಣವಲ್ಲಿ ಮಠದಲ್ಲಿ ಸೃಷ್ಟಿ ಆಗದ ವಿವಾದ ರಾಮಚಂದ್ರಾಪುರ ಮಠದಲ್ಲಿ ಸೃಷ್ಟಿ ಆಯಿತು. ಈ ಕುರಿತು ಸ್ಪಷ್ಟನೆ ನೀಡುತ್ತಿದ್ದೇನೆ. ಉಭಯ ಮಠದಲ್ಲಿ ನಡೆದದ್ದು ಶಾಸ್ತ್ರೀಯವೇ ಆಗಿದೆ’ ಎಂದು ಸ್ಪಷ್ಟಪಡಿಸಿದರು.

ವಿದ್ವಾನ್‌ ಉಮಾಕಾಂತ್‌ ಭಟ್‌ ಮಾತನಾಡಿ, ‘ಇವತ್ತು ಮನೆಯಲ್ಲಿ ದೇವರ ಪೂಜೆ ಮಾಡುವುದಕ್ಕೂ ಎಲ್ಲರಿಗೂ ಆಲಸ್ಯ ಪ್ರಾರಂಭವಾಗಿ ಬಿಟ್ಟಿದೆ. ಮನೆಯಲ್ಲಿ ನಾಲ್ಕು ಜನ ಮಕ್ಕಳಿದ್ದರೆ, ಯಾರೊಬ್ಬರೂ ಪೂಜೆ ಮಾಡುವುದಿಲ್ಲ. ಕೊನೆಗೆ ಮನೆಯ ಕೊನೇ ಮಗ, ಉಪನಯನ ಆಗದ, ದೇವರ ಬಗ್ಗೆ ಕಲ್ಪನೆಗಳಿಲ್ಲದ, ಶ್ರದ್ಧೆ ಇಲ್ಲದವ ದೇವರ ಪೂಜೆ ಮಾಡುವಂತಾಗಿದೆ. ವಿಶ್ವವೇ ನಮ್ಮನ್ನು ಯೋಗ್ಯರು ಎಂದು ಸಂಬೋಧಿಸುತ್ತಾರೆ. ಆದರೆ, ನಾವು ಹಾಗೆ ಕರೆಯಿಸಿಕೊಳ್ಳಲು ಯೋಗ್ಯರೇ ಎಂಬುದನ್ನು ಅರಿಯಬೇಕು ಎಂದು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.