ಬೆಂಗಳೂರು: ‘ಹಿಂದೂ ಸಮಾಜದ ಎಲ್ಲರೂ ಒಂದಾಗಬೇಕು ಎಂಬುದು ನಮ್ಮ ಕನಸು. ಇದನ್ನು ಸಾಕಾರಗೊಳಿಸುವಲ್ಲಿ ಹವ್ಯಕ ಸಮಾಜದಿಂದ ಹೆಚ್ಚಿನ ಸೇವೆ ದೊರೆಯಲಿ’ ಎಂದು ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಆಶಿಸಿದರು.
ಅಖಿಲ ಹವ್ಯಕ ಮಹಾಸಭಾ ಆಯೋಜಿಸಿರುವ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಬ್ರಾಹ್ಮಣರು ತಮ್ಮ ಜಾತಿಗಾಗಿ ಮಾತ್ರ ಶ್ರಮಿಸಿದರೆ ಸಾಲದು. ಇಡೀ ಹಿಂದೂ ಸಮಾಜದ ಕಲ್ಯಾಣಕ್ಕಾಗಿ ಕೆಲಸ ಮಾಡುವ ಜವಾಬ್ದಾರಿ ಅವರ ಮೇಲಿದೆ’ ಎಂದು ಹೇಳಿದರು.
ಪೇಜಾವರ ಕಿವಿಮಾತು: ‘ಸಮ್ಮೇಳನಕ್ಕೆ ಸಂಬಂಧಿಸಿದ ಒಂದು ಬಿಕ್ಕಟ್ಟಿನಿಂದ ನನಗೆ ಗೊಂದಲ ಮೂಡಿತ್ತು. ನಾನು ಯಾವ ಗುಂಪಿಗೂ ಸೇರಿದವ ಅಲ್ಲ. ಎಷ್ಟೇ ಭಿನ್ನಾಭಿಪ್ರಾಯ ಇದ್ದರೂ ಹವ್ಯಕರ ಮೇಲಿನ ಅಭಿಮಾನದಿಂದಾಗಿ ಇಲ್ಲಿಗೆ ಬಂದಿದ್ದೇನೆ’ ಎಂದು ಪೇಜಾವರ ಸ್ವಾಮೀಜಿ ಹೇಳಿದರು.
ಆರೋಪ ಎದುರಿಸುತ್ತಿರುವ ರಾಘವೇಶ್ವರ ಸ್ವಾಮೀಜಿ ಅವರಿಗೆ ಸಮ್ಮೇಳನದಲ್ಲಿ ವೇದಿಕೆ ಒದಗಿಸಬಾರದು ಎಂದು ಅಖಿಲ ಹವ್ಯಕ ಒಕ್ಕೂಟದ ನಿರ್ದೇಶಕ ಅಶೋಕ್ ಜಿ.ಭಟ್ ಒತ್ತಾಯಿಸಿದ್ದರು. ‘ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅವರು ಸಮ್ಮೇಳನದಲ್ಲಿ ಭಾಗವಹಿಸುವುದಿಲ್ಲ. ಮಠದ ಶಿಷ್ಯರೂ ಕಾರ್ಯಕ್ರಮಕ್ಕೆ ಹೋಗಬಾರದೆಂದು ವಿನಂತಿಸಿದ್ದಾರೆ’ ಎಂದು ಸ್ವರ್ಣವಲ್ಲಿ ಮಠ ಪ್ರಕಟಣೆ ಹೊರಡಿಸಿತ್ತು.
‘ವೀರಶೈವ – ಲಿಂಗಾಯತರಿಗೆ ಕೂಡ ಜಗಳ ಆಡಬೇಡಿ ಎಂದು ನಾನು ಹೇಳುತ್ತೇನೆ. ಹಿಂದೂ ಸಮಾಜದ ನಾವೆಲ್ಲ ಅಣ್ಣ–ತಮ್ಮಂದಿರು. ಸ್ವರ್ಣವಲ್ಲಿ ಮತ್ತು ರಾಮಚಂದ್ರಾಪುರ ಮಠಗಳು ಹವ್ಯಕರ ಪಾಲಿಗೆ ಸೂರ್ಯ–ಚಂದ್ರ ಇದ್ದಂತೆ. ಎರಡೂ ಪೀಠಗಳ ಬಗ್ಗೆ ನನಗೆ ಪ್ರೇಮ ಇದೆ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಕೆ.ಎಸ್. ಈಶ್ವರಪ್ಪ, ‘ಭಕ್ತರಲ್ಲಿ ಗೊಂದಲ ಇರುವುದಿಲ್ಲ. ಸಣ್ಣಪುಟ್ಟ ಗೊಂದಲಗಳಿಗೆ ಅಂತ್ಯ ಇದ್ದೇ ಇರುತ್ತದೆ’ ಎಂದರು.
‘ಸಮಾವೇಶಕ್ಕೆ ಹೋಗಬೇಡಿ ಎಂಬ ಸಂದೇಶ ಇದ್ದರೂ ಜನ ಅದನ್ನು ಧಿಕ್ಕರಿಸಿ ಇಲ್ಲಿಗೆ ಬಂದಿದ್ದಾರೆ. ಹವ್ಯಕರನ್ನು ಸದಾ ಕಾಲ ಮೋಸ ಮಾಡಲು ಸಾಧ್ಯವಿಲ್ಲ. ಯಾವುದು ತಪ್ಪು ಎಂಬುದನ್ನು ಗ್ರಹಿಸುವ ಬುದ್ಧಿಮತ್ತೆ ಹವ್ಯಕರಿಗೆ ಇದೆ. ಸಮಾವೇಶದಲ್ಲಿ ಪಾಲ್ಗೊಳ್ಳಬಾರದು ಎಂಬ ಸಂದೇಶ ಪೇಜಾವರ ಶ್ರೀಗಳಿಗೂ ಬಂದಿತ್ತು. ಆದರೂ ಅವರು ಬಂದಿದ್ದಾರೆ’ ಎಂದು ಹವ್ಯಕ ಮಹಾಸಭಾ ಅಧ್ಯಕ್ಷ ಡಾ. ಗಿರಿಧರ ಕಜೆ ಹೇಳಿದರು.
ಉದ್ಯಮಿ ವಿಜಯ ಸಂಕೇಶ್ವರ, ಕರ್ಣಾಟಕ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಎಂ.ಎಸ್. ಮಹಾಬಲೇಶ್ವರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
‘ಸರ್ಕಾರ ಮಾಡದ್ದನ್ನು ಧರ್ಮಸರ್ಕಾರ ಮಾಡುತ್ತದೆ’
ಸರ್ಕಾರವು ಸಮಾಜಕ್ಕೆ ಮಾಡಬಹುದಾದ ಅಥವಾ ಮಾಡಲು ಸಾಧ್ಯವಿಲ್ಲದ ಒಳಿತನ್ನು ಮಠ ಮಾಡಬಲ್ಲದು ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಮಠ ಎಂಬುದು ಧರ್ಮ ಸರ್ಕಾರ. ಮಠವು ಸಮಾಜಕ್ಕೆ ಏನು ಒಳಿತು ಮಾಡಬಲ್ಲದು ಎಂಬುದು ಚರಿತ್ರೆಯಲ್ಲಿ ದಾಖಲಾಗಿದೆ. ಮುಂದೆಯೂ ಮಠ ಒಳಿತನ್ನು ಮಾಡಲಿದೆ. ನಮ್ಮ ಕೈಕಟ್ಟಿಹಾಕದೆ ಇದ್ದರೆ ನಿಮಗೆ ಏನು ಬೇಕಿದ್ದರೂ ಒಳಿತು ಮಾಡಲು ಮಠಕ್ಕೆ ಸಾಧ್ಯವಿದೆ’ ಎಂದರು.
‘ಬೇಡಿಕೆಗಳ ಪಟ್ಟಿಯನ್ನು ಸರ್ಕಾರದ ಮುಂದೆ ಇರಿಸುವುದು ಇಂತಹ ಸಮ್ಮೇಳನಗಳ ಸಂದರ್ಭದಲ್ಲಿ ಇರುತ್ತದೆ. ಸರ್ಕಾರವನ್ನು ಕೇಳುವ ಹಕ್ಕು ನಿಮಗೆ ಇದೆ, ಏಕೆಂದರೆ ನೀವು ಸರ್ಕಾರಕ್ಕೆ ತೆರಿಗೆ ಪಾವತಿಸುತ್ತೀರಿ. ಸರ್ಕಾರದಿಂದ ಏನನ್ನೂ ಕೇಳಬೇಡಿ ಎಂದು ನಾವು ಹೇಳುವುದಿಲ್ಲ’ ಎಂದೂ ಅವರು ಸ್ಪಷ್ಟಪಡಿಸಿದರು.
ಜೀವ–ಜೀವದ ಅದ್ವೈತ: ಜೀವ ಮತ್ತು ಪರಮಾತ್ಮನ ಅದ್ವೈತ ಸಾಧನೆ ಮಾಡುವ ಮೊದಲು ಜೀವ–ಜೀವದ ಅದ್ವೈತ ಸಾಧನೆ ಮಾಡಬೇಕು. ಜೀವ–ಜೀವದ ಅದ್ವೈತ ಸಾಧನೆ ಮಾಡಲಾಗದ ವ್ಯಕ್ತಿ ಜೀವ–ಪರಮಾತ್ಮನ ಅದ್ವೈತ ಸಾಧನೆಯನ್ನೂ ಮಾಡಲಾರ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.
‘ಹವ್ಯಕತ್ವ ಎಂಬುದು ನಮ್ಮನ್ನು ಒಗ್ಗೂಡಿಸುವ ಸೂತ್ರ. ಇನ್ನಾದರೂ ಆ ಸೂತ್ರದ ಅಡಿ ಒಂದಾಗೋಣ. ಕೆಲವು ಹವ್ಯಕರು, ಹವ್ಯಕರಲ್ಲದವರು ಸಮಾವೇಶಕ್ಕೆ ಬರದಂತೆ ತಡೆಯುವ ಯತ್ನಗಳು ನಡೆದಿವೆ. ಆದರೆ, ನಮಗೆ ಯಾರ ಮೇಲೆಯೂ ಅಸೂಯೆ ಇಲ್ಲ. ಸಮಾಜಕ್ಕೆ ಒಳಿತಾಗುತ್ತದೆ ಎಂದಾದರೆ ಯಾರ ಜೊತೆ ಬೇಕಿದ್ದರೂ ಕೂರಬಹುದು’ ಎಂದರು.
‘ಗೊಂದಲದಿಂದ ದೂರ ಇದ್ದೇನೆ’
ಉಡುಪಿಯಲ್ಲಿ ಹೇಳಿಕೆ ನೀಡಿರುವ ವಿಶ್ವೇಶತೀರ್ಥರು, ವಿಶ್ವ ಹವ್ಯಕ ಸಮ್ಮೇಳನದಲ್ಲಿ ಉದ್ಭವಿಸಿರುವ ಭಿನ್ನಮತ ಹಾಗೂ ಗೊಂದಲಗಳಿಂದ ದೂರ ಇರುವುದಾಗಿ ಹೇಳಿದ್ದಾರೆ.
‘ಹವ್ಯಕ ಸಮಾಜದ ಮೇಲೆ ವಿಶೇಷವಾದ ಅಭಿಮಾನವಿದೆ. ಎರಡೂ ಪೀಠಗಳ ಮೇಲೆ ಗೌರವ ಇದೆ. ಹಾಗಾಗಿ ವಿವಾದಗಳಿಂದ ದೂರ ಉಳಿಯಲು ಬಯಸಿದ್ದೇನೆ. ಸಮಗ್ರ ಬ್ರಾಹ್ಮಣ ಸಮಾಜದ ಸಂಘಟನೆ ದೃಷ್ಟಿಯಿಂದ ಹಾಗೂ ಟಸ್ಥನಾಗಿದ್ದೇನೆ’ ಎಂದು ಶ್ರೀಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
* ಬ್ರಾಹ್ಮಣರನ್ನು ನಿಂದಿಸುವುದು ಉದ್ಯಮ ಆಗಿರುವಾಗ, ಅದಕ್ಕೆ ಕಿವಿಗೊಡದೆ ಎಲ್ಲ ರೀತಿಯಲ್ಲೂ ಉನ್ನತಿ ಸಾಧಿಸುತ್ತಿರುವ ಸಮಾಜ ಹವ್ಯಕರದ್ದು.
–ಎಸ್. ಸುರೇಶ್ ಕುಮಾರ್,ರಾಜಾಜಿನಗರ ಶಾಸಕ
* ಹವ್ಯಕರ ಋಣ ತೀರಿಸುವಂಥದ್ದು ಏನೂ ಇಲ್ಲ. ಅವರು ವಿದ್ಯುತ್ ಕೇಳುವುದಿಲ್ಲ, ಸಬ್ಸಿಡಿಗೆ ಬೇಡಿಕೆ ಇಡುವುದಿಲ್ಲ. ಮತವನ್ನು ಕೂಟ ಪುಕ್ಕಟೆಯಾಗಿ ಹಾಕುತ್ತಾರೆ!
–ದಿನಕರ ಶೆಟ್ಟಿ,ಕುಮಟಾ ಶಾಸಕ
* ಬ್ರಾಹ್ಮಣರು ಮೈಗಳ್ಳರು, ವ್ಯವಸಾಯ ಮಾಡುವುದಿಲ್ಲ ಎಂದು ಕೆಲವರು ಟೀಕಿಸುತ್ತಾರೆ. ಆದರೆ ಹವ್ಯಕ ಬ್ರಾಹ್ಮಣರದ್ದು ವ್ಯವಸಾಯ ಪ್ರಧಾನ ಸಮುದಾಯ
–ನ್ಯಾಯಮೂರ್ತಿ ಕೆ. ಶ್ರೀಧರ ರಾವ್
* ರಾಮಚಂದ್ರಾಪುರ – ಸ್ವರ್ಣವಲ್ಲಿ ಮಠಗಳು ಸೂರ್ಯ–ಚಂದ್ರ ಇದ್ದಂತೆ
–ವಿಶ್ವೇಶತೀರ್ಥ ಸ್ವಾಮೀಜಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.