ಬೆಂಗಳೂರು: ‘ರಾಜ್ಯ ಹಜ್ ಸಮಿತಿಯ ಅಧ್ಯಕ್ಷ ಮತ್ತು ಸದಸ್ಯರ ಅವಧಿಯನ್ನು ಮೂರು ವರ್ಷಕ್ಕಿಂತಲೂ ಹೆಚ್ಚಿನ ಅವಧಿಗೆ ವಿಸ್ತರಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು‘ ಎಂದು ಕೋರಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ರಾಜ್ಯ ಹಜ್ ಸಮಿತಿ ಅಧ್ಯಕ್ಷ ರೌಫುದ್ದೀನ್ ಕಚೇರಿವಾಲೆ ಸೇರಿದಂತೆ ಒಟ್ಟು 10 ಸದಸ್ಯರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
ಸರ್ಕಾರದ ಪರ ವಾದ ಮಂಡಿಸಿದ್ದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ‘ಹಜ್ ಸಮಿತಿಯ ಅಧ್ಯಕ್ಷ ಮತ್ತು ಸದಸ್ಯರ ಹುದ್ದೆಗೆ ಮೂರು ವರ್ಷಗಳ ಅವಧಿಯನ್ನು ನಿಗದಿಪಡಿಸಲಾಗಿದೆ. ಆದರೆ, ವಿಸ್ತರಣೆಗೆ ಅವಕಾಶವಿಲ್ಲ. ಅರ್ಜಿದಾರರ ಮನವಿ ಕಾನೂನು ಬಾಹಿರವಾಗಿದೆ ಮತ್ತು ವಿಸ್ತರಣೆಗೆ ನಿಯಮಗಳಲ್ಲಿ ಅವಕಾಶವೇ ಇಲ್ಲ‘ ಎಂದು ಪ್ರತಿಪಾದಿಸಿದ್ದರು.
ಇದನ್ನು ಮಾನ್ಯ ಮಾಡಿರುವ ನ್ಯಾಯಪೀಠ, ‘ಅಧ್ಯಕ್ಷರ ಹುದ್ದೆಗೆ ನಿರ್ದಿಷ್ಟ ಅವಧಿಯನ್ನು ನಿಗದಿಪಡಿಸಲಾಗಿರುತ್ತದೆ ಮತ್ತು ಆ ಅವಧಿಯು, ಸಮಿತಿ ಅಧಿಕಾರ ವಹಿಸಿಕೊಂಡ ದಿನದಿಂದಲೇ ಲೆಕ್ಕಕ್ಕೆ ಬರುತ್ತದೆ. ಹಜ್ ಸಮಿತಿ ಕಾಯ್ದೆ–2002ರ ಕಲಂ 21(1) ಪ್ರಕಾರ, ಸಮಿತಿಗೆ ಹೊಸದಾಗಿ ಅಧ್ಯಕ್ಷರು ಮತ್ತು ಸದಸ್ಯರು ಆಯ್ಕೆಯಾದ ನಂತರ 45 ದಿನಗಳಲ್ಲಿ ಮೊದಲ ಸಭೆಯನ್ನು ಕರೆಯಬೇಕು. ಆ ಸಭೆ ಕರೆಯಲು ವಿಳಂಬವಾಗಿದೆ ಎನ್ನುವ ಕಾರಣಕ್ಕೆ ಅಧ್ಯಕ್ಷರು ಮತ್ತು ಸದಸ್ಯರ ಅವಧಿಯನ್ನು ವಿಸ್ತರಿಸಲಾಗದು. ಅಧ್ಯಕ್ಷರ ಅವಧಿ ಸದಸ್ಯತ್ವದೊಂದಿಗೆ ಸೇರಿರುತ್ತದೆ. ಒಮ್ಮೆ ಅವರ ಸದಸ್ಯತ್ವದ ಅವಧಿ ಮುಗಿದರೆ ಅದರ ಜತೆ ಅಧ್ಯಕ್ಷರ ಅವಧಿಯೂ ಮುಕ್ತಾಯವಾಗುತ್ತದೆ’ ಎಂದು ಸ್ಪಷ್ಟಪಡಿಸಿದೆ.
ಪ್ರಕರಣವೇನು?: ಅರ್ಜಿದಾರರು ಕರ್ನಾಟಕ ರಾಜ್ಯ ಹಜ್ ಸಮಿತಿಗೆ 2020ರ ಜನವರಿ 20ರಂದು ಮೂರು ವರ್ಷಗಳ ಅವಧಿಗೆ ನಾಮ ನಿರ್ದೇಶನಗೊಂಡಿದ್ದರು. ನಂತರ ಹೈಕೋರ್ಟ್, ಖುಸ್ರೊ ಖುರೇಶಿ ಮತ್ತು ಕರ್ನಾಟಕ ರಾಜ್ಯ ಸರ್ಕಾರದ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ 2021ರ ಜುಲೈ 7ಕ್ಕೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ‘ಅಧ್ಯಕ್ಷ ಮತ್ತು ಸದಸ್ಯರ ಸ್ಥಾನಕ್ಕೆ ತಡವಾಗಿ ಚುನಾವಣೆ ನಡೆದ ಹಿನ್ನೆಲೆಯಲ್ಲಿ ಅವರ ಅವಧಿಯನ್ನೂ 2024ರ ಜುಲೈ 6ರವರೆಗೆ ವಿಸ್ತರಿಸಲು ನಿರ್ದೇಶಿಸಬೇಕು‘ ಎಂದು ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.