ಬೆಂಗಳೂರು: ರಾಜ್ಯದಲ್ಲಿ ಲೋಕಾಯುಕ್ತವೇ ಇದ್ದಿದ್ದರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಜೈಲೂಟ ತಿನ್ನುತ್ತಿದ್ದರು ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಭ್ರಷ್ಟಾಚಾರ ಆರೋಪ ಪ್ರಕರಣಗಳ ತನಿಖೆ ನಡೆಸಲು 2016ರಲ್ಲಿ ರಚಿಸಲಾಗಿದ್ದ ಭ್ರಷ್ಟಾಚಾರ ನಿಗ್ರಹ ದಳವನ್ನು (ಎಸಿಬಿ) ಹೈಕೋರ್ಟ್ ರದ್ದುಗೊಳಿಸಿರುವುದನ್ನು ಪ್ರಸ್ತಾಪಿಸಿ ಬಿಜೆಪಿ ಸರಣಿ ಟ್ವೀಟ್ ಮಾಡಿದೆ.
‘ಸಿದ್ದರಾಮಯ್ಯನವರೇ, ಸ್ವತಂತ್ರ ತನಿಖಾ ಸಂಸ್ಥೆಯಾದ ಎಸಿಬಿ ದೇಶದ ಅನೇಕ ರಾಜ್ಯಗಳಲ್ಲೂ ಇದ್ದಿರಬಹುದು. ಆದರೆ, ರಾಜ್ಯದಲ್ಲೂ ಸ್ಥಾಪಿಸಿದ್ದು ಮಾತ್ರ ನಿಮ್ಮ (ಸಿದ್ದರಾಮಯ್ಯ) ಮೇಲಿನ ಭ್ರಷ್ಟಾಚಾರ ಪ್ರಕರಣಗಳನ್ನು ಮುಚ್ಚಿಹಾಕಲು. ಒಂದು ವೇಳೆ ಲೋಕಾಯುಕ್ತವೇ ಇದ್ದಿದ್ದರೆ ಮಜಾವಾದಿ ಸಿದ್ದರಾಮಯ್ಯ ಜೈಲೂಟ ತಿನ್ನುತ್ತಿದ್ದರು’ ಎಂದು ಬಿಜೆಪಿ ಟೀಕಿಸಿದೆ.
‘ಅರ್ಕಾವತಿ ರೀಡು ಪ್ರಕರಣವೂ ಸೇರಿದಂತೆ ಸಿದ್ದರಾಮಯ್ಯ ಕಾಲದ ಹಲವು ಭ್ರಷ್ಟಾಚಾರ ಪ್ರಕರಣಗಳು ಲೋಕಾಯುಕ್ತದಲ್ಲಿ ದಾಖಲಾಗಿದ್ದವು. ಜೈಲು ಶಿಕ್ಷೆ ತಪ್ಪಿಸಿಕೊಳ್ಳುವುದಕ್ಕಾಗಿ ಸಿದ್ದರಾಮಯ್ಯ ಅವರು ಹಾಡುಹಗಲೇ ಲೋಕಾಯುಕ್ತದ ಕಗ್ಗೊಲೆ ನಡೆಸಿದರು. ಹೈಕೋರ್ಟ್ ತನ್ನ ತೀರ್ಪಿನ ಮೂಲಕ ಸಿದ್ದರಾಮಯ್ಯ ಅವರಿಗೆ ಕಪಾಳಮೋಕ್ಷ ಮಾಡಿದೆ’ ಎಂದು ಬಿಜೆಪಿ ಕಿಡಿಕಾರಿದೆ.
‘ಎಸಿಬಿ ರಚಿಸಿ, ಲೋಕಾಯುಕ್ತದಿಂದ ಅಧಿಕಾರ ಕಿತ್ತುಕೊಂಡು ತನಿಖಾ ಸಂಸ್ಥೆಯನ್ನೇ ಹಲ್ಲಿಲ್ಲದ ಹಾವು ಮಾಡಿದ ಕೀರ್ತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ. ಎಸಿಬಿ ರಚನೆ ಕರ್ನಾಟಕದ ಇತಿಹಾಸದಲ್ಲೇ ಒಂದು ಕಪ್ಪು ಚುಕ್ಕೆ. ತಮ್ಮನ್ನು ರಕ್ಷಿಸಲು ಸಿದ್ದರಾಮಯ್ಯ ಹೆಣೆದ ಕುಟಿಲ ತಂತ್ರಕ್ಕೆ ನ್ಯಾಯಾಂಗ ಛಡಿಯೇಟು ನೀಡಿದೆ’ ಎಂದು ಬಿಜೆಪಿ ಗುಡುಗಿದೆ.
ಲೋಕಾಯುಕ್ತವನ್ನು ನಾಶ ಮಾಡಲು ಸಿದ್ದರಾಮಯ್ಯ ಅವರು ವಿಧಾನಸಭೆಯನ್ನು ದುರ್ಬಳಕೆ ಮಾಡಿಕೊಂಡಿದ್ದು, ಪ್ರಜಾಪ್ರಭುತ್ವದ ಕ್ರೂರ ಅಣಕ. ಇಷ್ಟರ ಮೇಲೂ ಅನ್ಯ ರಾಜ್ಯಗಳಲ್ಲಿ ಎಸಿಬಿ ಇಲ್ಲವೇ ಎಂದು ಅವರು ಮಾಡಿಕೊಳ್ಳುವ ನಿರ್ಲಜ್ಜ ಸಮರ್ಥನೆ ಅಕ್ಷಮ್ಯ’ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಸ್ವತಂತ್ರ ತನಿಖಾ ಸಂಸ್ಥೆಯಾದ ಎಸಿಬಿ ದೇಶದ ಅನೇಕ ರಾಜ್ಯಗಳಲ್ಲೂ ಇತ್ತು, ಅದರಂತೆ ನಮ್ಮ ರಾಜ್ಯದಲ್ಲೂ ಸ್ಥಾಪಿಸಲಾಗಿತ್ತು. ಇಂದು ಕರ್ನಾಟಕ ಉಚ್ಚ ನ್ಯಾಯಾಲಯವು ಎಸಿಬಿ ಯನ್ನು ರದ್ದುಪಡಿಸಿ ಆದೇಶ ನೀಡಿದೆ, ನ್ಯಾಯಾಲಯದ ಈ ಆದೇಶವನ್ನು ನಾನು ಗೌರವಿಸುತ್ತೇನೆ ಎಂದು ಸಿದ್ದರಾಮಯ್ಯ ಗುರುವಾರ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.