ರಾಮನಗರ: ‘ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರಿಗೆ ತಮ್ಮ ಯೋಗ್ಯತೆ ಮತ್ತು ಘನತೆ ಬಗ್ಗೆ ಅರಿವಿಲ್ಲ. ಕೇಂದ್ರ ಸಚಿವರಾದರೂ ಅದನ್ನು ಅರಿತುಕೊಂಡಿಲ್ಲ. ಪ್ರತಿ ವಿಷಯಕ್ಕೂ ಡಿ.ಕೆ. ಶಿವಕುಮಾರ್ ಅವರನ್ನು ಎಳೆದು ತಂದು, ಒಕ್ಕಲಿಗ ಸಮುದಾಯದ ಬಾಸ್ ಆಗಲು ಹೊರಟಿದ್ದಾರೆ. ಮೊದಲು ಅವರು ಚಿಲ್ಲರೆಯಾಗಿ ಮಾತನಾಡುವುದನ್ನು ಬಿಡಬೇಕು’ ಎಂದು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದರು.
ತಾಲ್ಲೂಕಿನ ಕೂಟಗಲ್‌ನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾನತಾಡಿದ ಅವರು, ‘ಲೋಕಾಯುಕ್ತ ಎಸ್‌ಐಟಿ ಎಡಿಜಿಪಿ ಚಂದ್ರಶೇಖರ್ ಅವರು ತನ್ನ ಸಹೋದ್ಯೋಗಿಗಳಿಗೆ ಬರೆದಿರುವ ಪತ್ರವನ್ನು ಕಾಂಗ್ರೆಸ್‌ನವರೇ ಬರೆದಿದ್ದಾರೆ ಎನ್ನುವ ಎಚ್‌ಡಿಕೆ, ಅದಕ್ಕೆ ತಮ್ಮ ಬಳಿ ದಾಖಲೆ ಇದ್ದರೆ ಬಿಡುಗಡೆ ಮಾಡಲಿ’ ಎಂದು ಸವಾಲು ಹಾಕಿದರು.
‘ಅಧಿಕಾರಿ ತನ್ನ ಪತ್ರದಲ್ಲಿ ನಾಟಕಕಾರ ಜಾರ್ಜ್ ಬರ್ನಾರ್ಡ್ ಷಾ ಅವರ ಸಾಲುಗಳನ್ನು ಉಲ್ಲೇಖಿಸಿದ್ದಾರೆಯೇ ವಿನಾ, ಎಚ್‌ಡಿಕೆ ಅವರನ್ನು ಹಂದಿ ಎಂದು ಕರೆದಿಲ್ಲ. ಆ ಸಾಲುಗಳನ್ನು ಯಾರು, ಹೇಗೆ ಬೇಕಾದರೂ ಅರ್ಥೈಸಿಕೊಳ್ಳಬಹುದು. ಇದೇ ಎಚ್‌ಡಿಕೆ ಆ ಅಧಿಕಾರಿಯನ್ನು ಹೇಗೆ ಸಂಬೋಧಿಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಅಧಿಕಾರಿಗಳ ಬಗ್ಗೆ ಏಕವಚನದಲ್ಲಿ ಮಾತನಾಡುವುದನ್ನು ಎಚ್‌ಡಿಕೆ ನಿಲ್ಲಿಸಬೇಕು’ ಎಂದು ಹೇಳಿದರು.
ಸರ್ಕಾರ ಅಸ್ಥಿರಕ್ಕೆ ಯತ್ನ: ‘ರಾಜ್ಯ ಸರ್ಕಾರ ಉರುಳಿಸಲು ಬಿಜೆಪಿಯವರೇ ₹1,200 ಕೋಟಿ ಸಂಗ್ರಹ ಮಾಡಿದ್ದಾರೆ. ಅದನ್ನೇ ಶಾಸಕ ಬಸವರಾಜ ಪಾಟೀಲ ಯತ್ನಾಳ ಹೇಳಿದ್ದಾರೆ. ಇದೇ ಕಾರಣಕ್ಕೆ ಸಿದ್ದರಾಮಯ್ಯ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ನಾವೆಲ್ಲರು ಒಗ್ಗಟ್ಟಾಗಿದ್ದು ಸರ್ಕಾರ ಉರುಳಿಸಲು ಬಿಡುವುದಿಲ್ಲ. ಬಿಜೆಪಿ ಷಡ್ಯಂತ್ರದ ಬಗ್ಗೆ ನಮ್ಮ ಶಾಸಕ ಗಣಿಗ ರವಿ ಮುಂಚೆಯೇ ಹೇಳಿದ್ದರು. ಆಗ ಅಲ್ಲಗಳೆದಿದ್ದ ಬಿಜೆಪಿಯವರು, ಈಗ ಕಾಂಗ್ರೆಸ್‌ನವರೇ ಮಾಡುತ್ತಿದ್ದಾರೆ ಎನ್ನುತ್ತಾ ನಮ್ಮ ನಡುವೆ ಜಗಳ ತಂದಿಟ್ಟು ಸರ್ಕಾರ ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲೋಕಸಭಾ ಚುನಾವಣೆಗೆ ಮುಂಚೆ ಯೋಗೇಶ್ವರ್ ಕಾಂಗ್ರೆಸ್‌ಗೆ ಬಂದಿದ್ದರೆ ಸ್ವಾಗತಿಸುತ್ತಿದ್ದೆವು. ಆಗ ನಮ್ಮ ವಿರುದ್ಧ ಚುನಾವಣೆ ಮಾಡಿ, ತೊಂದರೆ ಕೊಟ್ಟವರನ್ನು ಈಗ ಕರೆದು ಉಪ ಚುನಾವಣೆ ಟಿಕೆಟ್ ಕೊಡಲು ಆಗುತ್ತದೆಯೇ?ಎಚ್.ಸಿ. ಬಾಲಕೃಷ್ಣ, ಮಾಗಡಿ ಶಾಸಕ
‘ಸಿದ್ದರಾಮಯ್ಯ ಅವರು ಉತ್ತಮವಾಗಿ ಆಡಳಿತ ನಡೆಸುತ್ತಿದ್ದಾರೆ. ಅವರ ಬಳಿಕ ರಾಮನಗರ ಜಿಲ್ಲೆಯವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ನಾವು ದನಿ ಎತ್ತುತ್ತೇವೆ. ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಅಧಿಕಾರಕ್ಕೆ ತರುವ ಜೊತೆಗೆ, ಉಪ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರಿಗೆ ಸಾಥ್ ನೀಡುತ್ತಿದ್ದಾರೆ. ಹಾಗಾಗಿ, ಸಿದ್ದರಾಮಯ್ಯ ಬಳಿಕ ನಮ್ಮ ಜಿಲ್ಲೆಗೆ ಸಿ.ಎಂ ಸ್ಥಾನ ಸಿಗಬೇಕು ಎಂಬುದು ನನ್ನ ಆಸೆಯಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಬಾಲಕೃಷ್ಣ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.