ಮೈಸೂರು: ‘ಮುಂಬರುವ
ವಿಧಾನಸಭಾ ಚುನಾವಣೆಯಲ್ಲಿ ನಾನು ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲ. ಕೆಪಿಸಿಸಿ
ಕಾರ್ಯಾಧ್ಯಕ್ಷರಾಗಿದ್ದ ಆರ್.ಧ್ರುವನಾರಾಯಣ ಪುತ್ರ ದರ್ಶನ್‌ಗೆ ಸಂಪೂರ್ಣ ಬೆಂಬಲ ನೀಡುತ್ತೇನೆ’ ಎಂದು ಟಿಕೆಟ್ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್ ಮುಖಂಡ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು.
ಪುತ್ರ ಸುನೀಲ್ ಬೋಸ್ ಅವರೊಂದಿಗೆ ಬುಧವಾರ ಧ್ರುವನಾರಾಯಣ ಅವರ ಮನೆಗೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ ಮಾಧ್ಯಮ ಪ್ರತಿನಿಧಿ
ಗಳೊಂದಿಗೆ ಅವರು ಮಾತನಾಡಿದರು.
‘ನಂಜನಗೂಡಿನಲ್ಲಿ ಸ್ಪರ್ಧಿಸಬೇಕೆಂಬ ನಿರ್ಧಾರದಿಂದ ಹಿಂದೆ ಸರಿದಿದ್ದೇನೆ. ನನ್ನ ಆತ್ಮಸಾಕ್ಷಿ ಪ್ರಕಾರ, ದರ್ಶನ್‌ಗೆ ಬೆಂಬಲ ನೀಡಲು ನಿರ್ಧರಿಸಿದ್ದೇನೆ. ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅಥವಾ ಇನ್ಯಾವುದೇ ರಾಜಕೀಯ ನಾಯಕರ ಜೊತೆಯೂ ನಾನು ಈ ಬಗ್ಗೆ ಚರ್ಚೆ ಮಾಡಿಲ್ಲ. ಈಗಿನಿಂದಲೇ, ನಂಜನಗೂಡು ಕ್ಷೇತ್ರದ ಚುನಾವಣೆ ಸಂಬಂಧಿಸಿದ ವಿಚಾರದಲ್ಲಿ ದರ್ಶನ್ ಪರವಾಗಿ ನಿಲ್ಲುತ್ತೇನೆ’ ಎಂದರು.
‘ಧ್ರುವನಾರಾಯಣ ಅವರೊಂದಿಗೆ ನನಗೆ ಯಾವತ್ತೂ ರಾಜಕೀಯ ಭಿನ್ನಾಭಿಪ್ರಾಯವಿರಲಿಲ್ಲ. ನಂಜನಗೂಡು ಉಪ ಚುನಾವಣೆಯಲ್ಲಿ ನನ್ನ ಪುತ್ರ ಸುನೀಲ್ ಬೋಸ್‌ಗೆ ಟಿಕೆಟ್ ಕೊಡಬೇಕೆಂದು ಹಲವರು ಒತ್ತಾಯಿಸಿದ್ದರು. ಆದರೆ, ಹೈಕಮಾಂಡ್ ಕಳಲೆ ಕೇಶವಮೂರ್ತಿ ಅವರಿಗೆ ಟಿಕೆಟ್ ಕೊಟ್ಟಿತ್ತು. ನಾನು ನಂಜನಗೂಡು ಅಭಿವೃದ್ಧಿಪಡಿಸಿದ್ದು ನೋಡಿ, ಅಲ್ಲಿಯೇ ಸ್ಪರ್ಧಿಸುವಂತೆ ಜನ ಕರೆದಿದ್ದರು. ಈ ಕಾರಣದಿಂದ ಅಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೆ’ ಎಂದರು.
‘ಟಿಕೆಟ್‌ಗಾಗಿ ನಾನು ಹಾಗೂ ಧ್ರುವನಾರಾಯಣ ಇಬ್ಬರೂ ಅರ್ಜಿ ಹಾಕಿದ್ದು ಸತ್ಯ. ಅವರ ಹಠಾತ್ ನಿಧನದಿಂದ ದಲಿತ ಸಮುದಾಯಕ್ಕೆ ಬಹು ದೊಡ್ಡ ನಷ್ಟವಾಗಿದೆ. ಸಮಾಧಿಯ ಮೇಲೆ ರಾಜಕೀಯ ಬೆಳೆ ತೆಗೆಯುವ ವ್ಯಕ್ತಿತ್ವ ನನ್ನದ್ದಲ್ಲ. ಅಧಿಕಾರದ ರಾಜಕಾರಣಕ್ಕೆ ಯಾವತ್ತೂ ಅಂಟಿಕೊಂಡು ಕುಳಿತಿಲ್ಲ. ವ್ಯಕ್ತಿಗಿಂತ ಅಧಿಕಾರ–ಅಂತಸ್ತು ಮುಖ್ಯವಲ್ಲ. ನನ್ನ ಮಗ ಸುನೀಲ್ ಬೋಸ್ ಬೇರೆ ಅಲ್ಲ. ದರ್ಶನ್ ಧ್ರುವನಾರಾಯಣ ಬೇರೆಯಲ್ಲ. ದರ್ಶನ್ ಜೊತೆ ನಿಲ್ಲುವುದು ನನ್ನ ಕರ್ತವ್ಯ’ ಎಂದರು.
‘ಧ್ರುವನಾರಾಯಣ ಸಾವಿನಲ್ಲೂ ಗಳ ಇರಿಯುವ ಕೆಲಸ ಮಾಡಬಾರದು. ಕೆಲವರು ಈ ಕೆಲಸ ಮಾಡಿದ್ದಕ್ಕೆ ನನಗೆ ಬೇಸರವಿದೆ’ ಎಂದು ಹೇಳಿದರು.
ದರ್ಶನ್‌ಗೆ ಟಿಕೆಟ್ ಬಹುತೇಕ ಖಚಿತ?
ದರ್ಶನ್‌ಗೆ ಟಿಕೆಟ್ ನೀಡುವಂತೆ ಧ್ರುವನಾರಾಯಣ ಅಭಿಮಾನಿಗಳು ಮೈಸೂರಿನ ಅವರ ಮನೆ ಬಳಿ ಹಾಗೂ ಚಾಮರಾಜನಗರ ತಾಲ್ಲೂಕು ಹೆಗ್ಗವಾಡಿಯಲ್ಲಿ ಅಂತ್ಯಕ್ರಿಯೆ ಸಂದರ್ಭದಲ್ಲೂ ಒತ್ತಾಯಿಸಿದ್ದರು. ಸಾಮಾಜಿಕ ಜಾಲತಾಣದಲ್ಲೂ ಪೋಸ್ಟ್‌ಗಳ ಮೂಲಕವೂ ಒತ್ತಡ ಹಾಕುತ್ತಿದ್ದಾರೆ.
‘ಮಾರ್ಚ್ 21ರಂದು ಕುಟುಂಬದವರಿಗೆ ಸಾಂತ್ವನ ಹೇಳಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬರುತ್ತಿದ್ದಾರೆ. ಅವರಿಂದ ಅಥವಾ ನಂಜನಗೂಡಿನಲ್ಲಿ ದೊಡ್ಡ ಪ್ರಮಾಣದಲ್ಲಿ ಶ್ರದ್ಧಾಂಜಲಿ ಸಭೆ ಆಯೋಜಿಸಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೊದಲಾದವರಿಂದ ಟಿಕೆಟ್ ಘೋಷಣೆ ಮಾಡಿಸಲು ಚಿಂತಿಸ
ಲಾಗಿದೆ. ದರ್ಶನ್ ಟಿಕೆಟ್ ಸಿಗು
ವುದು ಬಹುತೇಕ ಖಚಿತ’ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.