ಬೆಂಗಳೂರು: ಗುಟ್ಕಾ ಮತ್ತು ಪಾನ್ ಮಸಾಲಾಗಳಲ್ಲಿ ಫ್ಲೋರೈಡ್ ಅಂಶವು ಅಪಾಯಕಾರಿ ಪ್ರಮಾಣದಲ್ಲಿ ಇರುವುದರಿಂದ ಇದನ್ನು ಸೇವಿಸುವವರ ಬಾಯಿಯ ಕೆಳ ಲೋಳ್ಪೊರೆಯಲ್ಲಿ ನಾರುಗಟ್ಟುವಿಕೆಗೆ (ಬಾಯಿ ಬಿಗಿತ) ಕಾರಣವಾಗುತ್ತಿದೆ. ಅಡಿಕೆ ಕಾರಣವಲ್ಲ ಎಂದು ಎಚ್‌ಸಿಜಿ ಆಸ್ಪತ್ರೆ ಅಧ್ಯಯನ ತಿಳಿಸಿದೆ.
ಗುಟ್ಕಾ ಜಗಿಯುವ ದುರಭ್ಯಾಸದಿಂದ ಉಂಟಾಗುವ ಕ್ಯಾನ್ಸರ್ ಪೂರ್ವಸ್ಥಿತಿಯಾದ ಬಾಯಿಯ ಕೆಳ ಲೋಳ್ಪೊರೆ ನಾರುಗಟ್ಟುವಿಕೆಗೆ (ಓರಲ್ ಸಬ್ ಮ್ಯೂಕಸ್ ಫೈಬ್ರೋಸಿಸ್) ಫ್ಲೋರೈಡ್ ಅಂಶವೇ ಮುಖ್ಯ ಕಾರಣ. ಇದು ಕ್ರಮೇಣ ಕ್ಯಾನ್ಸರ್ ಆಗಿ ಬದಲಾಗುತ್ತದೆ ಎಂದು ವೈದ್ಯರ ತಂಡ ನಡೆಸಿರುವ ಅಧ್ಯಯನ ತಿಳಿಸಿದೆ ಎಂದು ಎಚ್‌ಜಿಸಿ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.
ವೈದ್ಯಕೀಯ ನಿಯತಕಾಲಿಕೆಗಳಾದ ಓರಲ್ ಪೆಥಾಲಜಿ ಮತ್ತು ಮೆಡಿಸಿನ್ ಜರ್ನಲ್, ಬ್ರಿಟಿಷ್ ಜರ್ನಲ್ ಆಫ್ ಓರಲ್ ಮತ್ತು ಮ್ಯಾಕ್ಸಿಲೋಫೇಶಿಯಲ್ ಸರ್ಜರಿ ಮತ್ತು ಮೆಡಿಕಲ್ ಹೈಪಾಥಿಸಿಸ್ ಗಳಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿದೆ. ಗುಟ್ಕಾ ಮತ್ತು ಪಾನ್ ಮಸಾಲಾ ಉತ್ಪನ್ನಗಳಲ್ಲಿ ಹೆಚ್ಚಿನ ಮಟ್ಟದ ಫ್ಲೋರೈಡ್ ಇರುವುದರಿಂದ ಬಾಯಿಯಲ್ಲಿ ಜಗಿಯುವಾಗ ಬಾಯಿಯ ಲೋಳ್ಪೊರೆಯಲ್ಲಿ ಅಧಿಕ ಪ್ರಮಾಣದಲ್ಲಿ ಸ್ರವಿಸಲ್ಪಟ್ಟು, ಅಲ್ಲೇ ಸಂಗ್ರಹಗೊಳ್ಳುತ್ತದೆ. ಬಾಯಿಯ ಲೋಳ್ಪೊರೆ ಮತ್ತು ಇತರ ಅಂಗಾಂಶಗಳಿಗೂ ಧಕ್ಕೆ ಉಂಟು ಮಾಡಿ ನಾರುಗಟ್ಟುವಿಕೆಗೆ ಕಾರಣವಾಗುತ್ತದೆ ಎಂದು ಅಧ್ಯಯನ ಹೇಳಿದೆ.
ಈ ಮೊದಲು ಅಡಿಕೆಯಲ್ಲಿರುವ ತಾಮ್ರದ ಅಂಶವೇ ಬಾಯಿಯ ಲೋಳ್ಪೊರೆ ನಾರುಗಟ್ಟುವಿಕೆಗೆ ಕಾರಣ ಎಂದು ನಂಬಲಾಗಿತ್ತು. ಆದರೆ ಎಚ್‌ಜಿಸಿ ನಡೆಸಿರುವ ಅಧ್ಯಯನ ಭಿನ್ನ ವಾಸ್ತವವನ್ನೇ ತೆರೆದಿದೆ. ಗುಟ್ಕಾ–ಪಾನ್ ಮಸಾಲಾ ಜಗಿಯುವವರಲ್ಲಿ ಕಂಡು ಬರುವ ದುಷ್ಪರಿಣಾಮದ ತೀವ್ರತೆ ಕೇವಲ ಅಡಿಕೆ ಜಗಿಯುವವರಿಗಿಂತ ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಡಾ.ಗುರುರಾಜ್ ಅರಕೇರಿ, ಡಾ.ವಿಶಾಲ್‌ರಾವ್ ಮತ್ತು ಡಾ.ಶೇಖರ್ ಪಾಟೀಲ ನೇತೃತ್ವದಲ್ಲಿ ಈ ಅಧ್ಯಯನ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.