ಮಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ಅವರೊಬ್ಬರೇ ದೇಶಭಕ್ತರಲ್ಲ. ದೇಶದ 130 ಕೋಟಿ ಜನರಿಗೂ ದೇಶಭಕ್ತಿ ಇದೆ’ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ವಾಗ್ದಾಳಿ ನಡೆಸಿದರು.
ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಯೋತ್ಪಾದನೆ ನಿಗ್ರಹದ ವಿಚಾರ ಬಂದಾಗ ಇಡೀ ದೇಶ ಒಗ್ಗಟ್ಟಾಗಿ ನಿಲ್ಲುತ್ತದೆ. ದೇಶಪ್ರೇಮವನ್ನು ಮೋದಿಯವರಿಂದ ಕಲಿಯಬೇಕಿಲ್ಲ’ ಎಂದರು.
ಮೋದಿ ಎಲ್ಲೇ ಹೋದರೂ ಅಭಿವೃದ್ಧಿಗಾಗಿ ಪ್ರಬಲ ಸರ್ಕಾರ ಬೇಕು ಎಂದು ಹೇಳುತ್ತಾರೆ. ಸ್ಥಿರ ಸರ್ಕಾರ ಇದ್ದಾಗಲೇ ಭಯೋತ್ಪಾದಕರ ದಾಳಿ ನಡೆದಿಲ್ಲವೇ? ಮಾತೆತ್ತಿದರೆ ತಾನು ಮತ್ತು ತನ್ನ ಸರ್ಕಾರ ಎನ್ನುತ್ತಾರೆ. ಹೇಳಿದ್ದನ್ನೇ ಪದೇ ಪದೇ ಹೇಳುವುದನ್ನು ಜನ ನಂಬುವುದಿಲ್ಲ. ಮಾತನಾಡುವುದು ಸುಲಭ, ಅನುಷ್ಠಾನಕ್ಕೆ ತರುವುದು ಕಷ್ಟ ಎಂದರು.
ಮೋದಿ ಭಾಷಣ ಮಾಡುವುದರಲ್ಲಿ ಚತುರ. ವಾಜಪೇಯಿ ಅವರಿಗಿಂತಲೂ ಬುದ್ಧಿವಂತ. ಮೋದಿ ನಂತರ ಯಾರು? ಎಂಬ ಪ್ರಶ್ನೆ ಮುಂದಿಡುತ್ತಿದ್ದಾರೆ. ಮೋದಿ ನಂತರ ದೇಶದ ಜನ ಇದ್ದಾರೆಎಂದು ಹೇಳಿದರು.
‘ನಾನು ಪ್ರಧಾನಿಯಾಗಿ ಹತ್ತು ತಿಂಗಳ ಕಾಲ ಇದ್ದೆ. ಅದಕ್ಕೂ ಮೊದಲು ಹತ್ತು ವರ್ಷ ಕಾಲ ಪ್ರಧಾನಿ ಹುದ್ದೆಯಲ್ಲಿದ್ದವರು ಕಾಶ್ಮೀರಕ್ಕೆ ಭೇಟಿ ನೀಡಿರಲಿಲ್ಲ. ಅಲ್ಲಿ ಚುನಾವಣೆ ನಡೆಸಿರಲಿಲ್ಲ. ನಾನು ಹತ್ತು ತಿಂಗಳಲ್ಲಿ ಐದು ಬಾರಿ ಕಾಶ್ಮೀರಕ್ಕೆ ಭೇಟಿ ನೀಡಿದೆ. ಅಲ್ಲಿ ಶಾಂತಿಯುತವಾಗಿ ಚುನಾವಣೆಯನ್ನೂ ನಡೆಸಿದ್ದೆ’ ಎಂದರು.
ಈಗ ಕಾಶ್ಮೀರದ ಬೀದಿ ಬೀದಿಯಲ್ಲಿ ಸಂಘರ್ಷ ನಡೆಯುತ್ತಿದೆ. ಅಲ್ಲಿ ಮುಸ್ಲಿಮರ ಜೊತೆಗೆ ಬೌದ್ಧರು, ಕಾಶ್ಮೀರಿ ಪಂಡಿತರು ಸೇರಿದಂತೆ ಹಲವು ಸಮುದಾಯಗಳ ಜನರಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.