ಬೆಂಗಳೂರು: ‘ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್. ಧರ್ಮೇಗೌಡ ಅವರು ಸದನದಲ್ಲಿ ನಡೆದಿದ್ದ ಬೆಳವಣಿಗೆಗಳಿಂದ ತೀವ್ರವಾಗಿ ನೊಂದಿದ್ದರು. ಈ ರಾಜಕೀಯ ವ್ಯವಸ್ಥೆಯಿಂದಲೇ ಅವರ ಕೊಲೆಯಾಗಿದೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಮಂಗಳವಾರ ಕಣ್ಣೀರು ಹಾಕಿದರು.
ಧರ್ಮೇಗೌಡರ ಸಾವಿನ ಕುರಿತು ಪ್ರತಿಕ್ರಿಯಿಸಿದ ಅವರು, ‘ತೀವ್ರವಾಗಿ ನೊಂದಿದ್ದ ಅವರಿಗೆ ನಾನು ಮತ್ತು ಎಚ್.ಡಿ. ದೇವೇಗೌಡರು ಧೈರ್ಯ ತುಂಬಿದ್ದೆವು. ಕಾನೂನು ಮತ್ತು ಸದನದ ನಿಯಮಗಳಿಗೆ ವಿರುದ್ಧವಾಗಿ ಯಾವುದೇ ಒತ್ತಡಗಳಿಗೆ ಮಣಿಯಬೇಡ ಎಂದೂ ದೇವೇಗೌಡರು ಸಲಹೆ ನೀಡಿದ್ದರು. ಆ ಪ್ರಕರಣದಲ್ಲಿ ನನ್ನ ಪಾತ್ರವೇನೂ ಇರಲಿಲ್ಲ’ ಎಂದರು.
‘ಪರಿಷತ್ತಿನ ಕಾರ್ಯದರ್ಶಿ ಮಹಾಲಕ್ಷ್ಮಿ ಅವರಿಗೆ ಸಭಾಪತಿ ಕೊಟ್ಟ ನೋಟಿಸ್‌ಗೆ ಉತ್ತರಿಸಲು ಸಾಧ್ಯವಾಗಿರಲಿಲ್ಲ. ಧರ್ಮೇಗೌಡರ ವಿರುದ್ಧ ಆಪಾದನೆ ಹೊರಿಸಿ ಒಂದೂವರೆ ಪುಟಗಳ ವರದಿಯನ್ನು ಸಭಾಪತಿಗೆ ಸಲ್ಲಿಸಿದ್ದರು. ಸತ್ಯಾಸತ್ಯತೆ ಪರಿಶೀಲನೆಗೆ ನಮ್ಮ ಪಕ್ಷದ ‘ಪ್ರಾಮಾಣಿಕ’, ನೇರವಾದಿ ರಾಜಕಾರಣಿ ಮರಿತಿಬ್ಬೇಗೌಡ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದರು ಎಂಬ ಮಾಹಿತಿ ನನಗೆ ಮಂಗಳವಾರ ಬೆಳಿಗ್ಗೆ ಲಭಿಸಿದೆ’ ಎಂದು ಹೇಳಿದರು.
ನಿಜವಾದ ಧರ್ಮರಾಯ: ‘ರಾಜಕೀಯ ವ್ಯವಸ್ಥೆಯಿಂದ ಆ ವ್ಯಕ್ತಿಯ ಕೊಲೆಯಾಗಿದೆ. ಧರ್ಮೇಗೌಡ ನಿಜವಾದ ಅರ್ಥದಲ್ಲಿ ಧರ್ಮರಾಯ ಆಗಿದ್ದರು. ಅವರ ತಮ್ಮ ಭೋಜೇಗೌಡ ಎಲ್ಲವನ್ನೂ ಧೈರ್ಯದಿಂದ ಎದುರಿಸುತ್ತಿದ್ದರು. ಇವತ್ತಿನ ರಾಜಕಾರಣದ ಧರ್ಮರಾಯ
ನನ್ನು ನಾನು ಕಳೆದುಕೊಂಡಿದ್ದೇನೆ’ ಎಂದು ಕಣ್ಣೀರು ಹಾಕಿದರು.
‘ಬಹುಮತ ಇಲ್ಲದಿರುವುದು ಖಾತರಿ ಆದ ಮೇಲೆ ರಾಜೀನಾಮೆ ಸಲ್ಲಿಸಿದ್ದರೆ ಏನಾಗುತ್ತಿತ್ತು? ದೇವೇಗೌಡರ ಬದ್ಧತೆಯನ್ನು ಪ್ರಶ್ನಿಸಲು ರಾಜಕೀಯ ಆಟ ಆಡಿದರು. ಧರ್ಮೇಗೌಡರ ಸಾವನ್ನು ಆತ್ಮಹತ್ಯೆ ಎಂದು ಬಿಂಬಿಸುವುದು ತಪ್ಪು. ಇದು ವ್ಯವಸ್ಥೆಯ ಕೊಲೆ. ಸಾವಿನ ಕಾರಣ ತಿಳಿಯಲು ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.
ಟ್ವೀಟ್‌ನಲ್ಲೂ ವಾಗ್ದಾಳಿ: ಧರ್ಮೇಗೌಡರ ಸಾವಿಗೆ ಸಂಬಂಧಿಸಿ ಕುಮಾರಸ್ವಾಮಿ ಮಂಗಳವಾರ ಹಲವು ಟ್ವೀಟ್‌ಗಳನ್ನು ಮಾಡಿದ್ದಾರೆ. ‘ಸಭಾಪತಿ ಸ್ಥಾನಕ್ಕಾಗಿ ಜೆಡಿಎಸ್‌ನ ಜಾತ್ಯತೀತತೆ ಪರೀಕ್ಷಿಸಲಾಯಿತು. ಈ ಪರೀಕ್ಷೆಯಲ್ಲಿ ಧರ್ಮೇಗೌಡ ಎಂಬ ಹೃದಯವಂತನ ಬಲಿಯಾಗಿದೆ. ಪರೀಕ್ಷೆ ಮಾಡಿದವರಿಗೆ ಈಗ ಉತ್ತರ ಸಿಕ್ಕಿರಬಹುದು. ಈ ಫಲಿತಾಂಶದಿಂದಲಾದರೂ ಆತ್ಮಾವಲೋಕನ ಆಗಲಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಸಿದ್ಧಾರ್ಥ ಆತ್ಮಹತ್ಯೆ ಕುರಿತು ಚರ್ಚೆ’
‘ಧರ್ಮೇಗೌಡರು ಸಾಯುವ ನಿರ್ಧಾರಕ್ಕೆ ಮೊದಲೇ ಬಂದಿದ್ದರು ಎಂಬಂತೆ ಕಾಣುತ್ತಿದೆ. ಅವರಿಗೆ ಚೆನ್ನಾಗಿ ಈಜಲು ಬರುತ್ತದೆ. ಆದ್ದರಿಂದ ನೀರಿಗೆ ಹಾರಿದರೆ ಬದುಕಿ ಉಳಿಯುವ ಸಾಧ್ಯತೆ ಇದೆ ಎಂದು ಭಾವಿಸಿದ್ದರು. ಎಸ್.ಎಂ.ಕೃಷ್ಣ ಅವರ ಅಳಿಯ ವಿ.ಜಿ.ಸಿದ್ಧಾರ್ಥ ಅವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಕುರಿತು ಎರಡು ದಿನಗಳ ಹಿಂದೆ ಮನೆಯಲ್ಲಿ ಚರ್ಚಿಸಿದ್ದರು ಎಂಬ ಮಾಹಿತಿ ಗೊತ್ತಾಗಿದೆ’ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಧರ್ಮೇಗೌಡ ಆಪ್ತ ಸ್ನೇಹಿತ: ಸಿದ್ದರಾಮಯ್ಯ
‘ಎಸ್.ಎಲ್.ಧರ್ಮೇಗೌಡ ನನಗೆ ಆಪ್ತ ಸ್ನೇಹಿತನಾಗಿದ್ದರು. ಅವರ ತಂದೆ ಲಕ್ಷ್ಮಯ್ಯ ಕೂಡಾ ಶಾಸಕರಾಗಿದ್ದರು. ಆಗಿನಿಂದಲೂ ಅವರ ಕುಟುಂಬದವರು ನನಗೆ ಆತ್ಮೀಯರು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಧರ್ಮೇಗೌಡರು ಕೆಳಹಂತದಿಂದ ರಾಜಕಾರಣ ಪ್ರಾರಂಭ ಮಾಡಿದವರು. ಸಹಕಾರ ಸಂಘಗಳು, ಗ್ರಾಮ ಪಂಚಾಯಿತಿ, ಮಂಡಲ ಪಂಚಾಯಿತಿ ಹಂತದಿಂದ ಮೇಲೆ ಬಂದವರು. ಸಹಕಾರಿ ಕ್ಷೇತ್ರದಲ್ಲಿ ಹೆಚ್ಚು ಸಕ್ರಿಯವಾಗಿದ್ದರು. ಜನ ಮತ್ತು ರೈತರ ಪರ ಕಾಳಜಿಯಿಂದ ಕೆಲಸ ಮಾಡುತ್ತಿದ್ದರು ಎಂದು ಸ್ಮರಿಸಿದರು.
‘ಸಭಾಪತಿ ಪೀಠದಲ್ಲಿ ಕುಳಿತುಕೊಳ್ಳಲು ಧರ್ಮೇಗೌಡರಿಗೆ ಇಷ್ಟವಿರಲಿಲ್ಲ. ಬಿಜೆಪಿ ಮತ್ತು ಜೆಡಿಎಸ್‌ನವರು ಬಲವಂತದಿಂದ ಕೂರಿಸಿದ್ದರು. ಕುಮಾರಸ್ವಾಮಿ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಅವರ ದುರುದ್ದೇಶಪೂರಿತ ಮಾತು, ಸುಳ್ಳುಗಳಿಗೆ ಏಕೆ ಪ್ರತಿಕ್ರಿಯಿಸಲಿ’ ಎಂದೂ ಸಿದ್ದರಾಮಯ್ಯ ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.