ಬೆಂಗಳೂರು: ‘ನಾನು ಆರೋಪಿಯೇ ಇರಬಹುದು. ಆದರೆ, ಲೋಕಾಯುಕ್ತ ಎಸ್‌ಐಟಿ ಎಡಿಜಿಪಿ ಎಂ.ಚಂದ್ರಶೇಖರ್ ಸರಣಿ ಅಪರಾಧಗಳನ್ನು ಎಸಗಿರುವ, ಅಧಿಕಾರಿ ಸೋಗಿನಲ್ಲಿರುವ ಕ್ರಿಮಿನಲ್. ಆ ಅಧಿಕಾರಿಯ ವಿರುದ್ಧ ನೂರಾರು ಕೋಟಿ ಭ್ರಷ್ಟಾಚಾರದ ಆರೋಪವಿದೆ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
‘ಎಂ.ಚಂದ್ರಶೇಖರ್ ಒಬ್ಬ ಭ್ರಷ್ಟ ಅಧಿಕಾರಿ’ ಎಂದು ಕುಮಾರಸ್ವಾಮಿ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದರು. ಶನಿವಾರ ಸಂಜೆಯೇ ಈ ಬಗ್ಗೆ ಚಂದ್ರಶೇಖರ್ ತಮ್ಮ ಸಹೋದ್ಯೋಗಿಗಳಿಗೆ ಪತ್ರ ಬರೆದಿದ್ದರು.
‘ಎಚ್.ಡಿ.ಕುಮಾರಸ್ವಾಮಿ ಆರೋಪಿ. ಅವರ ಒತ್ತಡ ತಂತ್ರಕ್ಕೆ ಮಣಿಯುವುದಿಲ್ಲ. ತನಿಖೆ ಮೇಲೆ ಪ್ರಭಾವ ಬೀರದಂತೆ ನೋಡಿಕೊಳ್ಳುತ್ತೇನೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು. ‘ಹಂದಿಗಳೊಂದಿಗೆ ಗುದ್ದಾಡಿದರೆ ಹೊಲಸು ಮೆತ್ತಿಕೊಳ್ಳುತ್ತದೆ’ ಎಂದು ಜಾರ್ಜ್ ಬರ್ನಾರ್ಡ್ ಶಾ ಮಾತನ್ನು ಉಲ್ಲೇಖಿಸಿದ್ದರು. ಈ ಪತ್ರ ಮಾಧ್ಯಮಗಳಿಗೆ ಸೋರಿಕೆಯಾಗಿತ್ತು. ಈ ಪತ್ರಕ್ಕೆ ಜೆಡಿಎಸ್ ನಾಯಕರು ಮತ್ತು ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪತ್ರದಲ್ಲಿರುವ ವಿಷಯಗಳ ಬಗ್ಗೆ ಭಾನುವಾರ ಬೆಳಿಗ್ಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ‘ಸುದ್ದಿಗೋಷ್ಠಿಯಲ್ಲಿ ನಾನು ಎತ್ತಿರುವ ಪ್ರಶ್ನೆಗಳಿಗೆ ಆ ಅಧಿಕಾರಿ ಉತ್ತರಿಸಬೇಕಿತ್ತು. ಬದಲಿಗೆ ಒಬ್ಬ ಕೇಂದ್ರ ಸಚಿವರ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಕೆ ಮಾಡಿದ್ದಾರೆ. ಕೊಳಕು ಪದಗಳನ್ನು ಬಳಸಿ ಪತ್ರ ಬರೆದಿರುವುದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಇದಕ್ಕೆಲ್ಲಾ ಎಲ್ಲಿ, ಹೇಗೆ ಉತ್ತರ ಕೊಡಬೇಕೋ ಹಾಗೆ ಕೊಡುತ್ತೇನೆ’ ಎಂದಿದ್ದಾರೆ.
‘ಆ ಅಧಿಕಾರಿ ಒಬ್ಬ ಬ್ಲಾಕ್‌ಮೇಲರ್. ಅವರ ವಿರುದ್ಧ, ಸರಣಿ ಅಪರಾಧ ಕೃತ್ಯಗಳನ್ನು ಎಸಗಿದ ಆರೋಪಗಳಿವೆ. ಕೋಟ್ಯಂತರ ರೂಪಾಯಿ ವಸೂಲಿ ಮಾಡಿದ ಸಂಬಂಧ ಹಲವು ಪ್ರಕರಣಗಳಿವೆ. ಈ ಪ್ರಕರಣಗಳನ್ನು ನಾನು ದಾಖಲಿಸಿಲ್ಲ, ಅವರ ಸಹೋದ್ಯೋಗಿಯೇ ₹20 ಕೋಟಿ ವಸೂಲಿಗೆ ಒತ್ತಡ ಹೇರಿದ್ದರು ಎಂದು ದೂರು ನೀಡಿದ್ದಾರೆ. ಎಫ್‌ಐಆರ್ ದಾಖಲಾಗಿದೆ. ಇದನ್ನೇ ದಾಖಲೆ ಸಮೇತ ಸುದ್ದಿಗೋಷ್ಠಿಯಲ್ಲಿ ಹೇಳಿದ್ದೆ. ಪ್ರತಿಯಾಗಿ ಸಿಟ್ಟು, ಆಕ್ರೋಶದಲ್ಲಿ ಪತ್ರ ಬರೆದಿದ್ದಾರೆ’ ಎಂದು ಅವರು ಹೇಳಿದ್ದಾರೆ.
‘ಹೀಗೆಯೇ ಪತ್ರ ಬರಿ ಎಂದು ಹೇಳಿಕೊಟ್ಟು ಅಧಿಕಾರಿಯಿಂದ ಪತ್ರ ಬರೆಸಲಾಗಿದೆ. ಆ ಪತ್ರ ಬರೆಸಿದವರು ಯಾರು ಎಂಬುದು ನನಗೆ ಗೊತ್ತಾಗಿದೆ. ಕೆಪಿಸಿಸಿ ಕಚೇರಿಯಿಂದಲೇ ಪತ್ರ ಬಹಿರಂಗವಾಗಿದೆ ಎಂಬುದೂ ಗೊತ್ತು’ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ‘ಆ ಅಧಿಕಾರಿ ನಿನ್ನೆ ಸಂಜೆ ಎಲ್ಲಿಗೆ ಹೋಗಿದ್ದರು ಅಲ್ಲಿ ಎಷ್ಟೊತ್ತು ಇದ್ದರು ಮತ್ತು ಯಾರನ್ನೆಲ್ಲಾ ಭೇಟಿಯಾದರು ಆ ಪತ್ರ ಬರೆ ಎಂದು ಹೇಳಿದ ವ್ಯಕ್ತಿ ಯಾರು ಮತ್ತು ಆಗ ಅಲ್ಲಿದ್ದ ಇನ್ನೊಬ್ಬ ವ್ಯಕ್ತಿ ಯಾರು ಆ ಪತ್ರವನ್ನು ಬರೆದುಕೊಟ್ಟ ಕಾನೂನು ಪಂಡಿತ ಯಾರು ಎಂಬ ಮಾಹಿತಿ ಇದೆ’ ಎಂದಿದ್ದಾರೆ.
‘ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಏನು ಮಾತನಾಡುತ್ತಾರೆ ಎಂಬುದು ಅವರಿಗೇ ಗೊತ್ತಿರುವುದಿಲ್ಲ. ಕೆಪಿಸಿಸಿ ಕಚೇರಿಗೂ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಅವರಿಗೂ ಏನು ಸಂಬಂಧ’ ಎಂದು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಪ್ರಶ್ನಿಸಿದರು. ಕುಮಾರಸ್ವಾಮಿ ಅವರು ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್ ‘ಚಂದ್ರಶೇಖರ್ ಅವರನ್ನು ನಾನು ನೋಡಿಯೂ ಇಲ್ಲ. ಮಾತನಾಡಿಯೂ ಇಲ್ಲ. ನನಗೆ ಅವರು ಸಿಕ್ಕಿಲ್ಲ. ನನಗೆ ಅವರು ಗೊತ್ತೇ ಇಲ್ಲ’ ಎಂದರು. ‘ಕುಮಾರಸ್ವಾಮಿ ಅವರು ಕೆಪಿಸಿಸಿಯನ್ನು ನೆನೆಸಿಕೊಂಡರೆ ನಾನು ಏನು ತಾನೇ ಮಾತನಾಡಲು ಸಾಧ್ಯ’ ಎಂದು ವ್ಯಂಗ್ಯವಾಡಿದರು. ‘ಕುಮಾರಸ್ವಾಮಿ ತಮ್ಮ ಬಳಿ ಏಳು ಸಚಿವರ ಅಕ್ರಮಗಳ ದಾಖಲೆಗಳಿವೆ ಎಂದು ಹೇಳುತ್ತಿದ್ದಾರೆ’ ಎಂದು ಹೇಳಿದಾಗ ‘ಅವರ ಬಳಿ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ’ ಎಂದು ಮತ್ತೊಮ್ಮೆ ಸವಾಲು ಹಾಕಿದರು.
ಅಧಿಕಾರಿ ಗೌರವಯುತವಾಗಿ ಪ್ರತಿಕ್ರಿಯೆ ನೀಡಬಹುದಿತ್ತು. ಕೇಂದ್ರ ಸಚಿವರನ್ನು ಏಕವಚನದಲ್ಲಿ ಹಂದಿ ಎಂಬ ಪದ ಬಳಸಿದ್ದು ಅಕ್ಷಮ್ಯ-ಪ್ರಲ್ಹಾದ ಜೋಶಿ, ಕೇಂದ್ರ ಸಚಿವ
ಬರ್ನಾರ್ಡ್ ಶಾ ಮಾತನ್ನು ಉಲ್ಲೇಖಿಸಿದ್ದಾರೆ. ಕುಮಾರಸ್ವಾಮಿ ಅವರನ್ನು ಹಂದಿ ಎಂದು ಕರೆದಿಲ್ಲ. ಇದಕ್ಕೆಲ್ಲಾ ಉತ್ತರ ಕೊಡುವುದಿಲ್ಲ-ಸಿದ್ದರಾಮಯ್ಯ, ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.