ADVERTISEMENT

ವಿದ್ಯುತ್, ಅದಿರು ಅಕ್ರಮಗಳ ತನಿಖೆ ವರದಿ ಬಹಿರಂಗಕ್ಕೆ HD ಕುಮಾರಸ್ವಾಮಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 8 ಜೂನ್ 2023, 20:36 IST
Last Updated 8 ಜೂನ್ 2023, 20:36 IST
ಎಚ್‌.ಡಿ ಕುಮಾರಸ್ವಾಮಿ
ಎಚ್‌.ಡಿ ಕುಮಾರಸ್ವಾಮಿ    

ಬೆಂಗಳೂರು: ಇಂಧನ ಇಲಾಖೆಯಲ್ಲಿ ನಡೆದ ಸೋಲಾರ್ ವಿದ್ಯುತ್ ಖರೀದಿ ಅಕ್ರಮ ಹಾಗೂ ಅಕ್ರಮ ಅದಿರು ಸಾಗಣೆ ಕುರಿತು ತನಿಖೆಗೆ ನೇಮಿಸಿದ್ದ ಸದನ ಸಮಿತಿಯ ವರದಿಗಳನ್ನು ರಾಜ್ಯ ಸರ್ಕಾರ ಬಹಿರಂಗಪಡಿಸಬೇಕು ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಒತ್ತಾಯಿಸಿದರು.

ಪಕ್ಷದ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿವಿಧ ಜಿಲ್ಲೆಗಳ ಮುಖಂಡರ ಜತೆಗಿನ ಆತ್ಮಾವಲೋಕನ ಸಭೆಯ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು.

ಮುಕ್ತ ಮಾರುಕಟ್ಟೆಯಲ್ಲಿ ₹ 2.30 ರೂಪಾಯಿಗೆ ಲಭ್ಯವಿದ್ದ ಸೋಲಾರ್ ವಿದ್ಯುತ್ತನ್ನು ₹ 9.50 ರೂಪಾಯಿ ಕೊಟ್ಟು ಖರೀದಿಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅಂದು ವಿಧಾನಸಭಾಧ್ಯಕ್ಷರಾಗಿದ್ದ ಕಾಗೋಡು ತಿಮ್ಮಪ್ಪ ಅವರು ಸದನ ಸಮಿತಿ ರಚಿಸಿದ್ದರು. ಇದುವರೆಗೂ ವರದಿ ಏನಾಯಿತು ಎಂಬ ಮಾಹಿತಿ ಇಲ್ಲ. ಈಗ ಕುರಿ ಕಾಯೋಕೆ ತೋಳ ತಂದ ಹಾಗಾಯ್ತು. ಸರ್ಕಾರಕ್ಕೆ ತಾಕತ್ತು ಇದ್ದರೆ ಒಪ್ಪಂದವನ್ನು ರದ್ದು ಮಾಡಲಿ ಎಂದು ಸವಾಲು ಹಾಕಿದರು.

ADVERTISEMENT

2013-18ರಲ್ಲಿ ಎಚ್.ಕೆ.ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಅಕ್ರಮ ಅದಿರು ಸಾಗಣೆ ಕುರಿತಂತೆ ಸದನ ಸಮಿತಿ ರಚನೆ ಮಾಡಲಾಗಿತ್ತು. 35 ಕೋಟಿ ಟನ್ ಅದಿರು ಅಕ್ರಮವಾಗಿ ರಫ್ತಾಗಿದೆ ಎನ್ನುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅದಿರಿನ ಮೌಲ್ಯ ₹ 1.43 ಲಕ್ಷ ಕೋಟಿ. ತಿಂದವರಿಂದ ವಸೂಲಿ ಮಾಡಿದರೆ ’ಗ್ಯಾರಂಟಿ‘ಗಳಿಗೆ ಹಣ ಸಿಗುತ್ತದೆ. ಬಿಜೆಪಿಯನ್ನು ’40 ಪರ್ಸೆಂಟ್ ಪಕ್ಷ‘ ಎಂದವರು ಈ ವರದಿ ಬಹಿರಂಗಪಡಿಸಲಿ ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ವರ್ಗಾವಣೆ ದಂಧೆ ಶುರುವಾಗಿದೆ. ಪ್ರತಿ ಹುದ್ದೆಗೂ ದರ ನಿಗದಿ ಮಾಡಲಾಗಿದೆ. ಹಿಂದಿನ ಬಿಜೆಪಿ ಸರ್ಕಾರವನ್ನು ಟೀಕೆ ಮಾಡುತ್ತಿದ್ದ ಕಾಂಗ್ರೆಸ್ ನಾಯಕರು ಪೇಸಿಎಂ ಅಭಿಯಾನ ಹಮ್ಮಿಕೊಂಡಿದ್ದರು. ಈಗ ಅದಕ್ಕಿಂತ ಜಾಸ್ತಿ ದರ ನಿಗದಿಯಾಗುತ್ತಿದೆ. ಇದನ್ನು ಎಷ್ಟು ಪರ್ಸೆಂಟ್‌ ಸರ್ಕಾರ ಎಂದು ಕರೆಯಬೇಕು ಎಂದು ಪ್ರಶ್ನಿಸಿದರು.

undefined undefined

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.