ADVERTISEMENT

ಗ್ರಾಮವಾಸ್ತವ್ಯ: ನಾಳೆ ಉದ್ಯಾನ್ ಎಕ್ಸ್‌ಪ್ರೆಸ್‌ನಲ್ಲಿ ರಾಯಚೂರಿಗೆ ಸಿಎಂ

​ಪ್ರಜಾವಾಣಿ ವಾರ್ತೆ
Published 25 ಜೂನ್ 2019, 11:04 IST
Last Updated 25 ಜೂನ್ 2019, 11:04 IST
   

ರಾಯಚೂರು: ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕರೇಗುಡ್ಡದಲ್ಲಿ ಜೂನ್‌ 26 ರಂದು ಗ್ರಾಮವಾಸ್ತವ್ಯ ಮಾಡಲು ಬರುತ್ತಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು, ಮಂಗಳವಾರ ರಾತ್ರಿ 9 ಗಂಟೆಗೆ ಬೆಂಗಳೂರಿನ ಕಂಟೊನ್ಮೆಂಟ್‌ ರೈಲು ನಿಲ್ದಾಣದಿಂದ ಉದ್ಯಾನ್ ಎಕ್ಸ್‌ಪ್ರೆಸ್‌ ರೈಲಿನಲ್ಲಿಸಂಚರಿಸಿ ಬೆಳಿಗ್ಗೆ 5.20 ಕ್ಕೆ ರಾಯಚೂರಿಗೆ ತಲುಪಲಿದ್ದಾರೆ.

ರಾಯಚೂರಿನ ಪ್ರವಾಸಿ ಮಂದಿರದಲ್ಲಿ ಸ್ವಲ್ಪ ಸಮಯ ವಿಶ್ರಾಂತಿ ಪಡೆದು, ಸರ್ಕಾರಿ ಬಸ್‌ನಲ್ಲಿ ಮಾನ್ವಿಯತ್ತ ಪ್ರಯಾಣಿಸುವರು. ಕರೇಗುಡ್ಡ ಗ್ರಾಮದ ಹೊರಭಾಗದಲ್ಲಿ ಬೃಹತ್‌ ವೇದಿಕೆಯನ್ನು ನಿರ್ಮಾಣ ಮಾಡಲಾಗಿದ್ದು, ಮನವಿ ಸಲ್ಲಿಸುವವರಿಗಾಗಿ 14 ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಲಾಗಿದೆ. ಬೆಳಿಗ್ಗೆಯಿಂದ ಸಂಜೆವರೆಗೂ ಸಾರ್ವಜನಿಕರ ಅಹವಾಲುಗಳನ್ನು ಮುಖ್ಯಮಂತ್ರಿ ಆಲಿಸಲಿದ್ದಾರೆ. ಬಳಿಕ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸುವರು. ಬಳಿಕ ಕರೇಗುಡ್ಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತೆರಳಿ ವಾಸ್ತವ್ಯ ಮಾಡುವರು.

ಜೂನ್‌ 27 ರ ಬೆಳಿಗ್ಗೆ ಹೆಲಿಕಾಪ್ಟರ್‌ ಮೂಲಕ ಬೀದರ್ ಜಿಲ್ಲೆಗೆ ಪ್ರಯಾಣಿಸುವರು. ಇದು ಸದ್ಯ ನಿಗದಿಯದ ಮುಖ್ಯಮಂತ್ರಿ ಪ್ರವಾಸ ವಿವರ.

ADVERTISEMENT

ಸಿಎಂ ಸ್ವಾಗತಕ್ಕೆ ಸಜ್ಜಾದ ಕರೇಗುಡ್ಡ
ಕರೇಗುಡ್ಡ:
ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕರೇಗುಡ್ಡದಲ್ಲಿ ಸರ್ಕಾರಿ ಅಧಿಕಾರಿಗಳು ಬೀಡು ಬಿಟ್ಟು ಕಾರ್ಯನಿರ್ವಹಿಸಿದ್ದು, ಮುಖ್ಯಮಂತ್ರಿಯನ್ನು ಜೂನ್‌ 26 ರಂದು ಸಂಭ್ರಮದಿಂದ ಬರಮಾಡಿಕೊಳ್ಳಲು ಗ್ರಾಮವನ್ನು ಸಜ್ಜುಗೊಳಿಸಿದ್ದಾರೆ.

ಗ್ರಾಮವಾಸ್ತವ್ಯ ಮಾಡುತ್ತಿರುವ ಹಿನ್ನೆಲೆಯಲ್ಲಿ ಜನರಿಂದ ಮುಖ್ಯಮಂತ್ರಿ ಅಹವಾಲುಗಳನ್ನು ಸ್ವೀಕರಿಸಲು ಜನತಾದರ್ಶನದ ಬೃಹತ್ ವೇದಿಕೆ ನಿರ್ಮಿಸಲಾಗಿದೆ. ಜನರು ಕುಳಿತುಕೊಳ್ಳಲು ಕುರ್ಚಿ ವ್ಯವಸ್ಥೆ, ಪಾರ್ಕಿಂಗ್ ಹಾಗೂ ಇನ್ನಿತರ ವ್ಯವಸ್ಥೆಗಳನ್ನು ಮಾಡಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡ ಅವರು ಮಂಗಳವಾರ ಪರಿಶೀಲಿಸಿದರು. ಇನ್ನೂ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು. ಶಾಸಕ ರಾಜಾ ವೆಂಕಟಪ್ಪ ನಾಯಕ ಜೊತೆಗಿದ್ದರು.

ಎಡದಂಡೆ ನಾಲೆಯ ಸಮಸ್ಯೆ ಕುರಿತು ಬೆಂಗಳೂರಿಗೆ ಹೋಗಿ ಎಲ್ಲರನ್ನು ಕರೆದು ಐಸಿಸಿ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ. 31 ಟಿಎಂಸಿ ಹೂಳೆತ್ತುವುದರ, ಸಮಾನಾಂತರ ಜಲಾಶಯ ಮತ್ತು ನದಿ ಜೋಡಣೆ ಕುರಿತು ಮಾಹಿತಿ ಹಂಚಿಕೊಳ್ಳಲಾಗಿದ್ದು, ನವಲಿ ಬಳಿ ಸಮಾನಂತರ ಜಲಾಶಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಡಿಪಿಎಆರ್ ಮಾಡಿ ಬೋರ್ಡ್‌ ನೀಡಲಾಗುವುದು. ಉಭಯ ರಾಜ್ಯಗಳೊಂದಿಗೆ ಚರ್ಚಿಸಿ ಇದೇ ವರ್ಷವೇ ಕಾಮಗಾರಿ ಆರಂಭಿಸಲಾಗುವುದು ಎಂದರು.

ರಾಯಚೂರು ವಿಶ್ವವಿದ್ಯಾಲಯ ಸ್ಥಾಪನೆಗೆ ಸಂಬಂಧಿಸಿದಂತೆ ರಾಜ್ಯಪಾಲರನ್ನು ಭೇಟಿಯಾಗಿ ಇದರ ತುರ್ತು ಕ್ರಮವನ್ನು ವಿವರಿಸಿ ಮನವರಿಕೆ ಮಾಡಲಾಗುವುದು. ವಿಶ್ವವಿದ್ಯಾಲಯದ ಸ್ಥಾಪನೆಗೆ ಕಾರ್ಯಾರಂಭಕ್ಕೆ ಕ್ರಮವಹಿಸಲಾಗುವುದು.

ಮಾನ್ವಿಗೆ ಮಿನಿವಿಧಾನಸೌಧ, ರಿಂಗ್ ರೋಡ್ ನಿರ್ಮಾಣ, ರಾಯಚೂರು ಐಐಐಟಿ, ಮಾನ್ವಿ ತಾಲ್ಲೂಕಿನ ಕ್ರೀಡಾಂಗಣ ನಿರ್ಮಾಣ ಸೇರಿದಂತೆ ಬಹುತೇಕ ಬೇಡಿಕೆಗಳನ್ನು ಮುಖ್ಯಮಂತ್ರಿಗಳು ಈಡೇರಿಸಲಿದ್ದಾರೆ ಎಂದರು.

ಬಿಜೆಪಿಯವರು 25ಸಾವಿರ ಜನರೊಂದಿಗೆ ಜನತಾದರ್ಶನ ವೇದಿಕೆ ಎದುರುಗಡೆಯೇ ಪ್ರತಿಭಟನೆ ಮಾಡುವುದಾಗಿ ತಿಳಿಸಿರುವುದಕ್ಕೆ ಪ್ರತಿಕ್ರಿಯಿಸಿದ ಸಚಿವ ನಾಡಗೌಡ ಅವರು ಅದನ್ನು ಪೊಲೀಸ್ ಇಲಾಖೆ ನೋಡಿಕೊಳ್ಳುತ್ತದೆ. ಸಿಎಂ ಬಂದ ಸಂಧರ್ಭದಲ್ಲಿ ಯಾವ ರೀತಿ ಭದ್ರತಾ ವ್ಯವಸ್ಥೆ ಮಾಡಬೇಕು ಎಂಬುದನ್ನು ಎಂದು ಹೇಳಿದರು.

ಗಲಾಟೆ ಮಾಡಿದರೇ ಮುಖ್ಯಮಂತ್ರಿಗಳು ಸ್ಪಂದಿಸುತ್ತಾರೆ ಎನ್ನುವ ತಪ್ಪು ಕಲ್ಪನೆಯನ್ನು ಹೋರಾಟಗಾರರು ಕೈಬಿಡಬೇಕು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.