ADVERTISEMENT

ಉಪ್ಪು ತಿಂದವರು ನೀರು ಕುಡಿಯಲೇಬೇಕು: ಪ್ರಜ್ವಲ್ ಪ್ರಕರಣದ ಬಗ್ಗೆ HDK ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2024, 8:09 IST
Last Updated 28 ಏಪ್ರಿಲ್ 2024, 8:09 IST
ಎಚ್‌.ಡಿ ಕುಮಾರಸ್ವಾಮಿ
ಎಚ್‌.ಡಿ ಕುಮಾರಸ್ವಾಮಿ    

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ತಪ್ಪು ಮಾಡಿದ್ದರೆ ಶಿಕ್ಷೆಯಾಗಲೇಬೇಕು. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಪ್ರಜ್ವಲ್‌ ರೇವಣ್ಣ ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದ ಕುರಿತು ಸುದ್ದಿಗಾರರಿಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ʼಆರೋಪದ ಕುರಿತು ತನಿಖೆಗೆ ಮುಖ್ಯಮಂತ್ರಿಯವರು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿರುವುದು ಗಮನಕ್ಕೆ ಬಂದಿದೆ. ಎಸ್‌ಐಟಿ ತನಿಖೆ ಪೂರ್ಣಗೊಳ್ಳಲಿ. ಸತ್ಯಾಂಶ ಏನು ಎಂಬುದು ಹೊರಬರಲಿʼ ಎಂದರು.

ಈ ನೆಲದ ಕಾನೂನಿನಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತದೆ. ತಪ್ಪು ಮಾಡಿದವರನ್ನು ನಾವು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ. ನಾನಾಗಲೀ, ಎಚ್‌.ಡಿ. ದೇವೇಗೌಡರಾಗಲೀ ಸಂಕಷ್ಟ ಹೇಳಿಕೊಂಡು ಬಂದ ಮಹಿಳೆಯರನ್ನು ಅತ್ಯಂತ ಗೌರವದಿಂದ ನಡೆಸಿಕೊಂಡಿದ್ದೇವೆ. ಮಹಿಳೆಯರ ಬಗ್ಗೆ ಸದಾ ಗೌರವದ ಭಾವನೆ ಹೊಂದಿದ್ದೇವೆ ಎಂದು ಹೇಳಿದರು.

ADVERTISEMENT

ಪ್ರಜ್ವಲ್‌ ವಿದೇಶಕ್ಕೆ ಪರಾರಿಯಾಗಿರುವ ಕುರಿತು ಪ್ರಶ್ನಿಸಿದಾಗ, ʼಪ್ರಜ್ವಲ್‌ ವಿದೇಶಕ್ಕೆ ಹೋಗಿದ್ದರೆ ಅದಕ್ಕೂ ನನಗೂ ಸಂಬಂಧ ಇಲ್ಲ. ಅವರು ತಪ್ಪಿಸಿಕೊಂಡಿದ್ದರೆ ಎಸ್‌ಐಟಿ ಅಧಿಕಾರಿಗಳು ಪತ್ತೆಹಚ್ಚಿ ಕರೆತರಲಿ. ಅದಕಾಗಿಯೇ ನೇಮಿಸಿರುವ ಅಧಿಕಾರಿಗಳಿದ್ದಾರೆʼ ಎಂದರು.

ಆರೋಪ ಬಿಟ್ಟು ಕೆಲಸ ಮಾಡಲಿ: ಕೇಂದ್ರ ಸರ್ಕಾರ ಸೂಕ್ತ ಪ್ರಮಾಣದಲ್ಲಿ ಬರ ಪರಿಹಾರ ನೀಡಿಲ್ಲ ಎಂಬ ಕಾಂಗ್ರೆಸ್‌ ಆರೋಪದ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ʼಆರಂಭದಲ್ಲಿ ರಾಜ್ಯ ಸರ್ಕಾರ ₹ 4,000 ಕೋಟಿ ಇನ್‌ಪುಟ್‌ ಸಬ್ಸಿಡಿ ಮಾತ್ರ ಕೇಳಿತ್ತು. ಅಷ್ಟು ಮೊತ್ತವನ್ನು ಕೇಂದ್ರ ನೀಡಿದೆ. ಈಗ ಸುಮ್ಮನೆ ಆರೋಪದ ಮಾಡುವುದನ್ನು ಬಿಟ್ಟು ಕೊಟ್ಟ ಹಣವನ್ನು ಮೊದಲು ಖರ್ಚು ಮಾಡಲಿʼ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.