ಬೆಂಗಳೂರು: ಗೆಲ್ಲುವುದಕ್ಕಿಂತಲೂ ಮುಖ್ಯವಾಗಿ ಜೆಡಿಎಸ್ ನ ಎಲ್ಲ 19 ಶಾಸಕರ ಒಗ್ಗಟ್ಟು ಪ್ರದರ್ಶನಕ್ಕಾಗಿ ರಾಜ್ಯಸಭಾ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ರಾಜ್ಯಸಭಾ ಚುನಾವಣೆಯಲ್ಲಿ ಮಂಗಳವಾರ ಮತದಾನ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, 'ನಮ್ಮ ಶಾಸಕರ ಒಗ್ಗಟ್ಟನ್ನು ಒಡೆಯಲು ನಡೆಸಿದ ಪ್ರಯತ್ನಗಳನ್ನು ವಿಫಲಗೊಳಿಸುವುದಕ್ಕಾಗಿ ಡಿ. ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಿದ್ದೇವೆ. ಶರಣಗೌಡ ಕಂದಕೂರ ನಮ್ಮ ಕುಟುಂಬದ ಸದಸ್ಯ. ನಾವೆಲ್ಲರೂ ಒಗ್ಗಟ್ಟಾಗಿ ಇದ್ದೇವೆ ಎಂಬ ಸಂದೇಶ ರವಾನಿಸುವುದು ನಮ್ಮ ಗುರಿ' ಎಂದರು.
ತಮ್ಮ ಪಕ್ಷದ ಶಾಸಕರಿಗೆ ಕುಮಾರಸ್ವಾಮಿ ಆಮಿಷ ಒಡ್ಡಿದ್ದರು ಎಂಬ ಕಾಂಗ್ರೆಸ್ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, 'ಆಮಿಷ ಒಡ್ಡುವುದು, ಧಮ್ಕಿ ಹಾಕುವುದು ಕಾಂಗ್ರೆಸ್ ಸಂಸ್ಕೃತಿ. ಕಾಂಗ್ರೆಸ್ ಸರ್ಕಾರ ರಚನೆಯಾದ ದಿನದಿಂದಲೂ ನಮ್ಮ ಶಾಸಕರಿಗೆ ಆಮಿಷ ಒಡ್ಡುವುದು ನಡೆಯುತ್ತಲೇ ಇದೆ' ಎಂದು ಹೇಳಿದರು.
ಎಸ್.ಟಿ. ಸೋಮಶೇಖರ್ ನಿಲುವಿನ ಕುರಿತು ಕೇಳಿದಾಗ, 'ಅಭಿವೃದ್ಧಿ ರಾಜಕೀಯಕ್ಕಾಗಿ ಅವರು ಬಿಜೆಪಿ ಸೇರಿದ್ದರು. ಮೂರು ವರ್ಷ ಮಂತ್ರಿಯೂ ಆಗಿದ್ದರು. ಹಾಗಿದ್ದರೆ ಯಾರ ಅಭಿವೃದ್ಧಿ ಆಯಿತು' ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.