ADVERTISEMENT

ಬಿಜೆಪಿಯದು ಹೃದಯಹೀನ ಸರ್ಕಾರ, ಕಾಂಗ್ರೆಸ್‌ನದು ಮರಣೋತ್ತರ ಪರೀಕ್ಷೆ ರಾಗ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2020, 10:12 IST
Last Updated 22 ಜುಲೈ 2020, 10:12 IST
ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ   

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ನಾಳೆಗೆ (ಗುರುವಾರ) ಒಂದು ವರ್ಷ. ಈ ಮಧ್ಯೆ ಮೈತ್ರಿ ಸರ್ಕಾರದ ಪತನದ ಕುರಿತು ಜೆಡಿಎಸ್‌– ಕಾಂಗ್ರೆಸ್‌ ಮಧ್ಯೆ ಜಟಾಪಟಿ ಆರಂಭವಾಗಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಳ್ಳದಿದ್ದರೆ 10 ಸ್ಥಾನ ಗೆಲ್ಲಬಹುದಿತ್ತು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಕುಮಾರಸ್ವಾಮಿ, ‘ಕಾಂಗ್ರೆಸ್ ಸ್ವತಂತ್ರವಾಗಿ ಸ್ಪರ್ಧಿಸಿದ್ದರೆ ರಾಜ್ಯದಲ್ಲಿ 8 ಇಲ್ಲವೆ 10 ಸ್ಥಾನ ಗೆಲ್ಲಬಹುದಿತ್ತು ಎಂದು ಸಿದ್ದರಾಮಯ್ಯ ಅವರು ಇತ್ತೀಚಿಗೆ 'ಮೆಲುಕು' ಹಾಕಿದ್ದರಿಂದಲೇ ನಾನು ಸಿದ್ಧೌಷಧದ ಬಗ್ಗೆ ನೆನಪಿಸಿಕೊಳ್ಳಬೇಕಾಯಿತು’ ಎಂದು ಹೇಳಿದ್ದಾರೆ.

ADVERTISEMENT

‘ಅವರ ಕನಸು–ಕನವರಿಕೆಗಳನ್ನು ಮೈತ್ರಿ ಸರ್ಕಾರ ಹೋದ ನಂತರವೂ ಜಪಿಸುತ್ತಿರುವುದರಿಂದಲೇ ಹಳೆಯದನ್ನು ನೆನಪಿಸಿಕೊಳ್ಳಬೇಕಾಯಿತು. ನಮ್ಮ ಮತ್ತು ಅವರ ದೋಸ್ತಿ ಕಳಚಿದ ನಂತರ ಈ ಬಗ್ಗೆ ನಾನು ಮಾತನಾಡಿರಲಿಲ್ಲ. ಕಾಂಗ್ರೆಸ್‌ ನಾಯಕರು ಪದೇ ಪದೇ ಮೈತ್ರಿ ಮುಗಿದ ಅಧ್ಯಾಯ ಎಂದು ಈಗ ತುಟಿ ಬಿಚ್ಚುತ್ತಿರುವುದರಿಂದ ಈಗ ನಾನು ಮೌನ ಮುರಿಯುಬೇಕಾಯಿತು’ ಎಂದಿದ್ದಾರೆ.

‘ಕಾಂಗ್ರೆಸ್ ನಾಯಕರು ಈಗ ಮರಣೋತ್ತರ ಪರೀಕ್ಷೆ ಬಗ್ಗೆ ರಾಗ ಎಳೆಯುತ್ತಿದ್ದಾರೆ. ಆದರೆ ವರದಿಯಲ್ಲಿ ಏನಿದೆ ಎಂಬ ಸತ್ಯಾಂಶವನ್ನು ನಾನು ಹೇಳಿದರೆ ಆ ಭಾಷೆ ನನಗೆ ಅರ್ಥವಾಗಲಿಲ್ಲ ಎಂದು ಜಾರಿಕೊಳ್ಳುವುದು ತರವಲ್ಲ’ ಎಂದು ಸಿದ್ದರಾಮಯ್ಯ ಅವರನ್ನು ಕುಟುಕಿದ್ದಾರೆ.

ಕಾರ್ಯಕರ್ತರಿಗೆ ಪತ್ರ: ಪಕ್ಷದ ಕಾರ್ಯಕರ್ತರಿಗೆ ಬರೆದ ಪತ್ರವೊಂದನ್ನು ಅವರು ಬುಧವಾರ ಬೆಳಿಗ್ಗೆ ಬಿಡುಗಡೆ ಮಾಡಿದ್ದು, ಅದರಲ್ಲಿ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರು ನನ್ನ ಸರ್ಕಾರ ಪತನಗೊಳಿಸುವ ವಿಷಯದಲ್ಲಿ ಎಷ್ಟೊಂದು ಒಳ ಮತ್ತು ಕುಟಿಲ ತಂತ್ರಗಳ ಮೊರೆ ಹೋದರು ಎಂಬುದನ್ನು ಆ ದೊಡ್ಡ ನಾಯಕರೇ ಆತ್ಮಾವಲೋಕನ ಮಾಡಿಕೊಳ್ಳಲಿ ಪತ್ರದಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್‌ ಜತೆ ಮೈತ್ರಿಗೆ ಜೆಡಿಎಸ್ ಎಂದೂ ಮುಂದಾಗಿರಲಿಲ್ಲ. ಮುಂದೆಯೂ ಕೂಡ ಮೈತ್ರಿಗೆ ನಾವು ಹಪಾಹಪಿಸುವುದಿಲ್ಲ ಎಂದು ತಿಳಿಸಿದ್ದಾರೆ.

‘ಜನರ ಸಮಸ್ಯೆಗಳಿಗೆ ಅತ್ಯಂತ ತ್ವರಿತವಾಗಿ ಸ್ಪಂದಿಸಬೇಕಾಗಿದ್ದ ಬಿಜೆಪಿ ಸರ್ಕಾರ ತಾನೇ ಕೋಮಾ ಸ್ಥಿತಿಯಲ್ಲಿ ಇರುವಂತೆ ನಿರ್ಲಜ್ಜ ಆಡಳಿತ ನಡೆಸುತ್ತಿರುವುದು ರಾಜ್ಯದ ಜನತೆಯ ಗಮನಕ್ಕೂ ಬಂದಿದೆ. ರೈತರು, ಬಡವರು, ಶ್ರಮಿಕ ವರ್ಗ ನಾಲ್ಕೈದು ತಿಂಗಳಿನಿಂದ ಕೆಲಸ ಕಳೆದುಕೊಂಡು ದುಡಿಮೆ ಇಲ್ಲದೆ, ಅರ್ಧ ಸಂಬಳಕ್ಕೆ ದುಡಿಯುತ್ತಾ ಹೇಗೋ ಕುಟುಕ ಜೀವ ಉಳಿಸಿಕೊಂಡಿದ್ದಾರೆ. ರಾಜ್ಯದ ಜನತೆ ಅನುಭವಿಸುತ್ತಿರುವ ಅನಾಥಪ್ರಜ್ಞೆಯ ಬದುಕು ಹಿಂದೆಂದೂ ಕಂಡಿರಲಿಲ್ಲ. ಈ ನಿತ್ಯ ನರಕಯಾತನೆಯನ್ನು ನೋಡುತ್ತಿದ್ದರೆ ನನ್ನ ಹೃದಯ ಕಿವುಚಿದಂತಾಗುತ್ತದೆ. ಜನರು ನೋವು-ನಿಟ್ಟುಸಿರುಗಳ ಕುಲುಮೆಯಲ್ಲಿ ಬೇಯುತ್ತಿರುವಾಗ ಸರ್ಕಾರ 'ರಾಜಕೀಯ'ದ ರಂಗಮಹಲಿನಲ್ಲಿ ಉಯ್ಯಾಲೆ ಆಡುತ್ತಿದ್ದರೆ ಅದರಂತ ಹೃದಯ ಹೀನ ಸರ್ಕಾರ ಮತ್ತೊಂದಿರಲಾರದು. ಬಿಜೆಪಿ ಸರ್ಕಾರ ಇಂತಹ ಹೃದಯಹೀನ ಸರ್ಕಾರವೆಂಬುದು ಸಾಬೀತಾಗುತ್ತಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.