ಮದ್ದೂರು: ಪಕ್ಷದಲ್ಲಿ ಸ್ಥಾನಮಾನ ಪಡೆದವರು, ಬಳಿಕ ಅಧಿಕಾರ ಸಿಗದಿದ್ದರೆ ಹೊರ ಹೋಗುತ್ತಾರೆ... ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಪಕ್ಷ ತೊರೆದ ಬಗ್ಗೆಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ನೀಡಿದ ಪ್ರತಿಕ್ರಿಯೆ ಇದು.
ಮದ್ದೂರಿನಲ್ಲಿ ಮಾತನಾಡಿರುವ ಅವರು,‘ವಿಧಾನ ಪರಿಷತ್ ಮಾಜಿ ಸದಸ್ಯರಾದ ರಮೆಶ್ ಬಾಬು ರಾಜೀನಾಮೆ ನೀಡಿರುವುದಕ್ಕೆ ಪ್ರಾಶಸ್ತ್ಯ ನೀಡಬೇಕಾದ ಅವಶ್ಯಕತೆ ಇಲ್ಲ. ಜೆಡಿಎಸ್ ಪಕ್ಷ ನಿಂತಿರುವುದು ಕಾರ್ಯಕರ್ತರಿಂದ. ಪಕ್ಷದಲ್ಲಿ ಸ್ಥಾನಮಾನ ಪಡೆದು ಅನುಭವಿಸಿ ಬಳಿಕ ಅಧಿಕಾರ ಸಿಗದಿದ್ದರೆ ಹೊರ ಹೋಗುತ್ತಾರೆ ಎಂದು,’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಮಂಡ್ಯ ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರ ಮೇಲೆ ನಿರಂತರವಾಗಿ ಕಿರುಕುಳ ನಡೆಯುತ್ತಿದ್ದು ಎಂದು ಇದೇ ವೇಳೆ ಅವರು ಆರೋಪಿಸಿದರು.
ಮಂಡ್ಯ ಜಿಲ್ಲೆಯ ಮೈ ಷುಗರ್ ಹಾಗೂ ಪಾಂಡವಪುರ ಸಕ್ಕರೆ ಕಾರ್ಖಾನೆಗಳನ್ನು ಖಾಸಗಿಯವರಿಗೆ ನೀಡಲು ಮುಂದಾಗಿರುವ ಸರ್ಕಾರದ ಕ್ರಮವು ನಾಚಿಕೆಗೇಡಿನ ಸಂಗತಿ.ಸರ್ಕಾರ ಮುಂದೆ ಏನು ಕ್ರಮ ಕೈಗೊಳ್ಳುವುದೋ ಎಂಬುದನ್ನು ಕಾದು ನೋಡಬೇಕಾಗಿದೆ.ಜೆಡಿಎಸ್–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಬಜೆಟ್ ನಲ್ಲಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಪುನಶ್ಚೇತನಕ್ಕಾಗಿ ನೂರು ಕೋಟಿ ರೂ. ಅನುದಾನ ನೀಡಿದ್ದೆ. ಜತೆಗೆ ಹೊಸ ಕಾರ್ಖಾನೆ ಪ್ರಾರಂಭ ಮಾಡಲು ಯೋಚಿಸಿದ್ದರೂ ಸರ್ಕಾರ ಪತನವಾಯಿತು. ಬಳಿಕ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ವಿಷಯದಲ್ಲಿ ಸ್ಪಷ್ಟತೆ ಕಾಣುತ್ತಿಲ್ಲ,’ ಎಂದು ಹೇಳಿದರು.
ಸಿಎಂ ಬಿ.ಎ.ಎಸ್.ಯಡಿಯೂರಪ್ಪ ಮಂಡಿಸಿದ ಬಜೆಟ್ ನಲ್ಲಿ ಮಂಡ್ಯ ಜಿಲ್ಲೆಯನ್ನು ಕಡೆಗಣಿಸಲಾಗಿದೆ.ಜಿಲ್ಲೆಗೆ ಈ ಹಿಂದೆ ನೀಡಿದ್ದ ಅನುದಾನವನ್ನು ವಾಪಸ್ ಪಡೆಯುವ ಮೂಲಕ ಜಿಲ್ಲೆಯ ಜನತೆಯ ತಾಳ್ಮೆ ಪರೀಕ್ಷೆ ಮಾಡಲಾಗುತ್ತಿದೆ. ಕುಂಠಿತವಾಗಿರುವ ಜಿಲ್ಲೆಯ ಅಭಿವೃದ್ಧಿಯನ್ನು ಸರಿಪಡಿಸದೆ ಹೋದರೆ ಮುಂದಿನ ದಿನಗಳಲ್ಲಿ ಜಿಲ್ಲೆಯ ಜನರೇ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆಂದು ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.