ADVERTISEMENT

ನಗರ ಪ್ರದಕ್ಷಿಣೆ: ಎಚ್‌ಡಿಕೆ– ಸೋಮಣ್ಣ ಜಟಾಪಟಿ

ಕುಮಾರಸ್ವಾಮಿ ಆರೋಗ್ಯ ಕೆಣಕಿದ ಸಚಿವ

​ಪ್ರಜಾವಾಣಿ ವಾರ್ತೆ
Published 21 ಮೇ 2022, 18:45 IST
Last Updated 21 ಮೇ 2022, 18:45 IST
ಕುಮಾರಸ್ವಾಮಿ
ಕುಮಾರಸ್ವಾಮಿ   

ಬೆಂಗಳೂರು: ನಗರದಲ್ಲಿ ಮಳೆಯಿಂದ ಹಾನಿಗೀಡಾಗಿರುವ ಪ್ರದೇಶಗಳಿಗೆ ಭೇಟಿನೀಡಿ, ಪರಿಶೀಲನೆ ನಡೆಸುವ ವಿಚಾರದಲ್ಲಿ ವಸತಿ ಸಚಿವ ವಿ. ಸೋಮಣ್ಣ ಮತ್ತು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ
ಎಚ್‌.ಡಿ. ಕುಮಾರಸ್ವಾಮಿ ನಡುವೆ ಶನಿವಾರ ತೀವ್ರ ವಾಕ್ಸಮರ ನಡೆದಿದೆ.

ಕುಮಾರಸ್ವಾಮಿ ಅವರು ವಿವಿಧ ಪ್ರದೇಶಗಳಿಗೆ ಭೇಟಿ ನೀಡುತ್ತಿರುವ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸೋಮಣ್ಣ ಅವರು, ‘ಕುಮಾರಸ್ವಾಮಿ ಅವರು ನಡೆದಷ್ಟೂ ಆರೋಗ್ಯಕ್ಕೆ ಒಳ್ಳೆಯದು. ಅವರು ನಡೆಯಲಿ, ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲಿ. ಒಂದಷ್ಟು ಆರೋಗ್ಯವೂ ಸುಧಾರಿಸುತ್ತದೆ’ ಎಂದು ಹೇಳಿದರು.

‘ಅವರು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದರು. ಸಿದ್ದರಾಮಯ್ಯ ಅವರೂ ಮುಖ್ಯಮಂತ್ರಿ ಆಗಿದ್ದರು. ಯಾರ ಕಾಲದಲ್ಲಿ ಏನೇನು ಆಗಿದೆ ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ. ಅವರು ಓಡಾಡಿ ಆರೋಗ್ಯವನ್ನು
ಸರಿ ಮಾಡಿಕೊಳ್ಳಲಿ. ಎಲ್ಲವನ್ನೂ ಸರಿಪಡಿಸಿದ್ದೇವೆ ಎಂಬ ದುರಹಂಕಾರದ ಮಾತನ್ನು ನಾವು ಆಡುವುದಿಲ್ಲ. ಅವರ ಅಮೂಲ್ಯವಾದ ಸಲಹೆಗಳನ್ನು ಸ್ವೀಕರಿಸಲು ಸಿದ್ದರಿದ್ದೇವೆ’ ಎಂದು ಸೋಮಣ್ಣ ಹೇಳಿದರು.

ADVERTISEMENT

‘ನಮ್ಮ ಬಗ್ಗೆ ಕಾಳಜಿ ಬೇಡ’: ಸೋಮಣ್ಣ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ‘ನಮ್ಮ ಆರೋಗ್ಯದ ಬಗ್ಗೆ ಸೋಮಣ್ಣ ಅವರಿಗೆ ಕಾಳಜಿ ಬೇಡ. ಆರೋಗ್ಯ ಯಾವ ರೀತಿ ಇಟ್ಟುಕೊಳ್ಳಬೇಕು ಎಂಬುದನ್ನು ವೈದ್ಯರು ನಮಗೆ ಹೇಳಿದ್ದಾರೆ. ನಿಮಗೆ ಯೋಗ್ಯತೆ ಇದ್ದರೆ ಬೆಂಗಳೂರು ನಗರದ ಆರೋಗ್ಯ ಸರಿಪಡಿಸಿ’ ಎಂದು ಹೇಳಿದರು.

‘ಸೋಮಣ್ಣ ಜೆಡಿಎಸ್‌ ಪಕ್ಷದಲ್ಲಿದ್ದು, ದೇವೇಗೌಡರ ಹೆಸರು ಬಳಸಿಕೊಂಡು ಯಾವ ರೀತಿ ಬೆಳೆದರು ಎಂಬುದು ಗೊತ್ತಿದೆ. ಹಿಂದಿನಿಂದ ನೀರು ನಿಲ್ಲಿಸಲು ಅಧಿಕಾರಿಗಳಿಗೆ ಹೇಳಿ, ಜನರ ಮುಂದೆ ಬಂದು ಅಧಿಕಾರಿಗಳಿಗೆ ಬೈಯ್ಯುವ ಕೆಲಸವನ್ನು ನಾನು ಮಾಡುವುದಿಲ್ಲ. ರಾಜಕಾಲುವೆ, ರಸ್ತೆ ಕಾಮಗಾರಿ ಮಾಡದೆ ಕೋಟ್ಯಂತರ ರೂಪಾಯಿ ಲೂಟಿ ಮಾಡಿರುವುದೂ ಗೊತ್ತು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.