ADVERTISEMENT

ಮೈಕ್ರೋನ್‌ಗೆ ಕೇಂದ್ರ ನೆರವು; ಮಾತು ಬದಲಿಸಿದ ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2024, 16:26 IST
Last Updated 15 ಜೂನ್ 2024, 16:26 IST
<div class="paragraphs"><p>ಎಚ್‌.ಡಿ. ಕುಮಾರಸ್ವಾಮಿ</p></div>

ಎಚ್‌.ಡಿ. ಕುಮಾರಸ್ವಾಮಿ

   

ಬೆಂಗಳೂರು: ಗುಜರಾತ್‌ನಲ್ಲಿ ಸೆಮಿಕಂಡಕ್ಟರ್‌ ಉದ್ಯಮದಲ್ಲಿ ಹೂಡಿಕೆ ಮಾಡುತ್ತಿರುವ ಕಂಪನಿಗೆ ₹16,710 ಕೋಟಿ (ಎರಡು ಬಿಲಿಯನ್‌ ಡಾಲರ್‌) ಸಹಾಯಧನ ನೀಡಿರುವುದಕ್ಕೆ ಶುಕ್ರವಾರ ಆಕ್ಷೇಪ ವ್ಯಕ್ತಪಡಿಸಿದ್ದ ಕೇಂದ್ರದ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌.ಡಿ. ಕುಮಾರಸ್ವಾಮಿ, ಒಂದೇ ದಿನದಲ್ಲಿ ತಮ್ಮ ಹೇಳಿಕೆ ಬದಲಿಸಿದ್ದಾರೆ.

ಜೆಡಿಎಸ್‌ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ್ದ ಅವರು, ‘ಅಮೆರಿಕ ಮೂಲದ ಮೈಕ್ರಾನ್‌ ಟೆಕ್ನಾಲಜಿ ಗುಜರಾತ್‌ನಲ್ಲಿ ₹22,976 ಕೋಟಿ (2.75 ಬಿಲಿಯನ್‌ ಡಾಲರ್) ಹೂಡಿಕೆ ಮಾಡುತ್ತಿದೆ. ಅದಕ್ಕೆ ಕೇಂದ್ರ (ಶೇ 50) ಹಾಗೂ ರಾಜ್ಯ ಸರ್ಕಾರ ನೀಡುತ್ತಿರುವ ಸಹಾಯಧನ ಶೇ 70ರಷ್ಟಿದೆ. ಕಂಪನಿ 5 ಸಾವಿರ ಉದ್ಯೋಗ ನೀಡುವ ಭರವಸೆ ನೀಡಿದೆ. ದೊರೆಯಲಿರುವ ಉದ್ಯೋಗ, ನೀಡುವ ಸಹಾಯಧನ ಲೆಕ್ಕ ಹಾಕಿದರೆ ಪ್ರತಿ ಉದ್ಯೋಗಕ್ಕೆ ₹3.2 ಕೋಟಿ‌ ವೆಚ್ಚವಾಗುತ್ತದೆ. ಒಂದು ಉದ್ಯೋಗಕ್ಕೆ ಅಷ್ಟು ಹಣ ನೀಡುವುದು ಎಷ್ಟು ಸರಿ ಎಂದು ಸಚಿವನಾದ ನಂತರ ನಡೆದ ಮೊದಲ ಸಭೆಯಲ್ಲೇ ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ದೆ’ ಎಂದಿದ್ದರು.

ADVERTISEMENT

‘ಈ ಸಭೆಯಲ್ಲಿ ನಾನು ಇದನ್ನು ಹೇಳಬಾರದು ಎಂದುಕೊಂಡಿದ್ದೆ. ಆದರೂ ಪ್ರಸ್ತಾಪಿಸುತ್ತಿದ್ದೇನೆ. ಬೆಂಗಳೂರಿನ ಪೀಣ್ಯದಲ್ಲಿಯೂ ಹಲವು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಿವೆ. ಆ ಕಂಪನಿಗಳಿಗೆ ಎಷ್ಟು ಸಹಾಯಧನ ನೀಡಲಾಗಿದೆ’ ಎನ್ನುವ ಮೂಲಕ ಕೇಂದ್ರದ ಸಹಾಯಧನದ ನೀತಿಯನ್ನು ಪ್ರಶ್ನಿಸಿದ್ದರು.

ತಮ್ಮ ಹೇಳಿಕೆ ಕುರಿತು ಶನಿವಾರ ‘ಎಕ್ಸ್‌’ನಲ್ಲಿ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ‘ಮಾಧ್ಯಮಗಳು ನಾನು ಶುಕ್ರವಾರ ಹೇಳಿದ್ದ ಮಾತುಗಳನ್ನು ಸರಿಯಾಗಿ ಗ್ರಹಿಸಿಲ್ಲ. ಸೆಮಿಕಂಡಕ್ಟರ್‌ ವಲಯ ಕಾರ್ಯತಂತ್ರದ ಉದ್ಯಮ. ಎಲೆಕ್ಟ್ರಾನಿಕ್ಸ್‌ ಮತ್ತು ಆಟೊಮೊಬೈಲ್‌ ಉತ್ಪಾದನೆಗೆ ಮೂಲ ಅಗತ್ಯವಿರುವ ವಲಯ. ಈ ಎರಡೂ ಕ್ಷೇತ್ರಗಳು ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸುತ್ತವೆ. ಈ ಕ್ಷೇತ್ರಗಳ ಬೆಳವಣಿಗೆಗೆ ಪ್ರಧಾನಿ ಮೋದಿ ಅವರು ತೆಗೆದುಕೊಂಡ ಉಪಕ್ರಮಗಳನ್ನು ಶ್ಲಾಘಿಸುವೆ. ನನ್ನ ಸಚಿವಾಲಯದ ಮೂಲಕ ಅವುಗಳ ಅಗತ್ಯ ಪೂರೈಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಭಾರತ 2030ರೊಳಗೆ ಆರ್ಥಿಕವಾಗಿ ವಿಶ್ವದ ಮೂರನೇ ಸ್ಥಾನಕ್ಕೆ ಬರಬೇಕು. 2040ರೊಳಗೆ ವಿಶ್ವದ ಪ್ರಬಲ ಆರ್ಥಿಕ ಶಕ್ತಿ ದೇಶವಾಗಿ‌ ಹೊಮ್ಮಬೇಕು. ಅದಕ್ಕಾಗಿ ಶ್ರಮಿಸುತ್ತೇವೆ’ ಎಂದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.