ದೊಡ್ಡಬಳ್ಳಾಪುರ: ‘ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ನಮ್ಮ ಪಕ್ಷದ ಸಿ.ಎಂ. ಇಬ್ರಾಹಿಂ ಏಕೆ ಮುಖ್ಯಮಂತ್ರಿ ಆಗಬಾರದು. ಅವರೇನು ಅಸ್ಪೃಶ್ಯರೆ’ ಎಂದು ಪ್ರಶ್ನಿಸಿದ್ದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಛಲವಾದಿ ಮಹಾಸಭಾ ಮಂಗಳವಾರ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದೆ.
‘ಅಸ್ಪೃಶ್ಯತೆ ಶಬ್ದ ಬಳಸುವ ಮೂಲಕ ಕುಮಾರಸ್ವಾಮಿ ಅವರು ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡಗಳಿಗೆ ಅವಮಾನ ಮಾಡಿದ್ದಾರೆ. ಅವರ ವಿರುದ್ಧ ಎಸ್.ಸಿ/ಎಸ್.ಟಿ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆ ಅಡಿ ದೂರು ದಾಖಲಿಸಿ ಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಮಹಾಸಭಾ ದೂರಿನಲ್ಲಿ ಹೇಳಿದೆ.
‘ಛಲವಾದಿ ಮಹಾಸಭಾ ಮುಖಂಡರಿಂದ ದೂರು ಸ್ವೀಕರಿಸಲಾಗಿದೆ. ಇನ್ನೂ ಎಫ್‌ಐಆರ್ ದಾಖಲಾಗಿಲ್ಲ’ ಎಂದು ನಗರ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ರೇಣುಕಾ ಯಾದವ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ಅಸ್ಪೃಶ್ಯತೆ ಶಬ್ದ ಬಳಕೆಯೇ ಅಸ್ಪೃಶ್ಯತೆ ಆಚರಣೆಯ ಮೊದಲ ಹೆಜ್ಜೆ.ಆ ಶಬ್ದ ಬಳಸುವುದು ಕೂಡ ಎಸ್.ಸಿ./ಎಸ್.ಟಿ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆ ಅಡಿ ಅಪರಾಧ ವಾಗುತ್ತದೆ. ಕುಮಾರಸ್ವಾಮಿ ಅವರ ಈ ಹೇಳಿಕೆ ಸಂವಿಧಾನ ವಿರೋಧಿ ಮತ್ತು ಕಾನೂನು ಬಾಹಿರವಾಗಿದ್ದು, ಕೂಡಲೇ ಅವರು ಬೇಷರತ್ ಕ್ಷಮೆ ಯಾಚಿಸಬೇಕು’ ಎಂದು ಛಲವಾದಿ ಮಹಾಸಭಾದ ಮುಖಂಡ ಜಿ. ಲಕ್ಷ್ಮೀಪತಿ ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
‘ಜೆಡಿಎಸ್ ತನ್ನ ಹೆಸರಿನಲ್ಲಿರುವ ಜಾತ್ಯತೀತ ಪದ ತೆಗೆದು ಹಾಕಿ ‘ಜಾತಿವಾದಿ ಜನತಾದಳ’ ಎಂದು ಬದಲಾಯಿಸಿಕೊಳ್ಳುವುದು ಒಳಿತು’ ಎಂದು ಅವರು ಸಲಹೆ ಮಾಡಿದರು.
ಸಾಮಾಜಿಕ ಮಾಧ್ಯಮದಲ್ಲೂ ಟೀಕೆ
ಎಚ್.ಡಿ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲೂ ತೀವ್ರ ಟೀಕೆ ವ್ಯಕ್ತವಾಗಿದೆ.#CastiestKumaraswamy ಹ್ಯಾಷ್‌ಟ್ಯಾಗ್ ಅಡಿಯಲ್ಲಿ ಹಲವರು ಎಚ್‌ಡಿಕೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.