ಬೆಂಗಳೂರು: ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಮಧ್ಯದ ಸಂಘರ್ಷವನ್ನು ತಿಳಿಗೊಳಿಸುವ ಕುರಿತು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು, ತಮ್ಮ ತಂದೆ ಎಚ್.ಡಿ. ದೇವೇಗೌಡ ಅವರ ಸಲಹೆ ಪಡೆದಿದ್ದಾರೆ.
ಪದ್ಮನಾಭನಗರದಲ್ಲರುವ ದೇವೇಗೌಡರ ನಿವಾಸಕ್ಕೆ ಬುಧವಾರ ರಾತ್ರಿ ಭೇಟಿ ನೀಡಿದ ಮುಖ್ಯಮಂತ್ರಿ, ಎರಡು ತಾಸು ಚರ್ಚೆ ನಡೆಸಿದರು.
ಬೆಳಗಾವಿಯಲ್ಲಿ ನಡೆಯುವ ಪ್ರತಿ ಅಧಿವೇಶನದಲ್ಲೂ ಸರ್ಕಾರಕ್ಕೆ ತಲೆನೋವು ತರುವ ಕಬ್ಬು ಬೆಳೆಗಾರರ ಸಮಸ್ಯೆ, ಈ ಬಾರಿಯೂ ಪ್ರತಿಧ್ವನಿಸುವ ಸಾಧ್ಯತೆ ಇದೆ. ಈಗಲೇ ಇದಕ್ಕೆ ಪರಿಹಾರ ಕಂಡುಕೊಳ್ಳದೇ ಇದ್ದರೆ ಅಧಿವೇಶನ ನಿಭಾಯಿಸುವುದು ಕಷ್ಟವಾಗಲಿದೆ. ಇದನ್ನು ಬಗೆಹರಿಸುವುದು ಹೇಗೆ ಎಂಬ ಬಗ್ಗೆ ದೇವೇಗೌಡರ ಸಲಹೆ ಪಡೆದರು ಎಂದು ಮೂಲಗಳು ತಿಳಿಸಿವೆ.
ಸರ್ಕಾರದ ಮುಂದಿರುವ ಸದ್ಯದ ಸವಾಲುಗಳ ಬಗ್ಗೆಯೂ ಚರ್ಚೆ ನಡೆಯಿತು. ಸಂಪುಟ ವಿಸ್ತರಣೆ, ಬರಗಾಲದ ನಿರ್ವಹಣೆ, ಬಡ್ತಿ ಮೀಸಲಾತಿ ಪರಿಷ್ಕೃತ ಕಾಯ್ದೆ ಅನುಷ್ಠಾನದ ಕುರಿತು ಮುಖ್ಯಮಂತ್ರಿ ಮಾರ್ಗದರ್ಶನ ಪಡೆದರು ಎಂದು ಮೂಲಗಳು ಹೇಳಿವೆ.
ಸಾಲಮನ್ನಾ ವಿಷಯದಲ್ಲಿ ಆಗಿರುವ ಬೆಳವಣಿಗೆ ಹಾಗೂ ಅನುಷ್ಠಾನಕ್ಕೆ ಇರುವ ತೊಡಕುಗಳ ಬಗ್ಗೆ ವಿವರಿಸಿದ ಕುಮಾರಸ್ವಾಮಿ, ಬಡವರ ಬಂಧು, ಇಸ್ರೇಲ್ ಮಾದರಿ ಕೃಷಿ ಸೇರಿದಂತೆ ಸರ್ಕಾರದ ನೂತನ ಯೋಜನೆಗಳ ಬಗ್ಗೆಯೂ ಗೌಡರಿಗೆ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.